ಇತ್ತೀಚೆಗೆ ನನ್ನ ನಲ್ಮೆಯ ಗುರುಗಳಾದ ಸಂಶೋಧಕ ಶ್ರೀ ನಿಧಿನ್ ಓಲಿಕಾರ್ ಅವರ ಮನೆಗೆ ಭೆಟ್ಟಿಕೊಟ್ಟಿದ್ದಾಗ ಅವರು ನನಗೆ ಅವರು ಮತ್ತು ಡಾ. ಜಗದೀಶ್ ಸರ್ ಸೇರಿ ಹೊಸದಾಗಿ ಸಂಪಾದಿಸಿರುವ ಪುಸ್ತಕ, ಮೈಸೂರಿನ ಉಗ್ರಾಣ ನಿರ್ವಹಣೆಗೆ ಸಂಬಂಧಿಸಿದ ‘ಹುಕುಂ ನಾಮೆ’ಯನ್ನು ಕೊಟ್ಟು ಬೆನ್ನು ತಟ್ಟಿದರು.
‘ಹುಕುಂ ನಾಮೆ’ ಮೈಸೂರು ಇತಿಹಾಸ ಅಧ್ಯಯನಕಾರರಿಗೆ, ಇತಿಹಾಸ ಪ್ರಿಯರಿಗೆ ಆಸಕ್ತರಿಗೆ ಒಂದು ಮಹತ್ವಪೂರ್ಣ ಹೊಸ ದಾಖಲೆಯಾಗಿದೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರ ಪ್ರಕಟಿಸಿರುವ ಈ ಪುಸ್ತಕ. ವಿಶೇಷವೆಂದರೆ ಈ ಹುಕುಂ ನಾಮೆಗೆ ಟಿಪ್ಪುವಿನ ಸಹಿ ಇದೆ. ಶ್ರೀರಂಗಪಟ್ಟಣದ ಅರಮನೆ ಕೋಟೆ ಕೊತ್ತಳ ದೇವಸ್ಥಾನ ಪೂಜೆ ಉತ್ಸವ ಕಾವಲು ಮತ್ತು ಪದಾರ್ಥಗಳ ಆಮದು, ಸಿಬ್ಬಂಧಿಗಳಿಗೆ ಸಂಬಳ ಮೊದಲಾದ ಕುರಿತು ಅಚ್ಚರಿಯ ಅಂಶಗಳನ್ನು ಇಲ್ಲಿ ದಾಖಲಿಸಲಾಗಿದೆ. ಇಲ್ಲಿ ಎಲ್ಲವನ್ನೂ ವಿವರಿಸಲು ಹೋಗಲ್ಲ. ಅಡಿಕೆ ಎಲೆ ಇಂದ ಹಿಡಿದು ಹರಳೆಣ್ಣೆ ಒಳ್ಳೆಣ್ಣೆ ಕೊಬ್ರಿ ಎಣ್ಣೆ ಮಸಾಲೆ ಪದಾರ್ಥ ಯಳ್ಳು ಜೀರಿಗೆ ಉಪ್ಪು ಅರಿಶಿಣ ಗಂಟೆಗುಂಬ್ರೆ ಕುದುರೆ ಕಾಲಿನ ಕೋಳ ಹಳೆ ಶಂಕ, ಜಾಗಟೆ ಸಾಣೆಕಲ್ಲು, ಎತ್ತಿನ ಕೋಡಿನ ಗೊಣಸು, ಮದ್ದು ಗುಂಡು, ತೋಫು, ತುಪಾಕಿ, ಮಸಿ, ಕತ್ತಿ, ಕಠಾರಿ, ಬಾಕು, ಭರ್ಜಿ, ಸೇರು ಪಾವು ಚಟಾಕು, ಕಡಗೋಲು, ಈಳಿಗೆಮಣೆ, ಶಾವಗೆ ಮಣೆ, ತುರೆಮಣೆ, ಪೀಕದಾನಿ, ಲಟ್ಟಣಿಗೆ ಎಲ್ಲಾ ಎಂದರೆ ಎಲ್ಲದರ ಗೃಹೋಪಯೋಗಿ, ರಕ್ಷಣೋಪಯೋಗಿ, ಪೂಜೋಪಯೋಗಿ, ವಸ್ತು ವಗೈರೆಗಳ ದಾಸ್ತಾವೇಜು, ಕರ್ಚು ವೆಚ್ಚಗಳ ಸ್ಥಿತಿಗತಿಗಳ ವಿವರ ಇದೆ. ಒಂದು ರೀತಿಯಲ್ಲಿ ‘ಪಿನ್ ಟು ಪಿನ್’ ಲೆಕ್ಕ ಅಂತೀವಲ್ಲ ಹಾಗೆ ಬರೆದಿಟ್ಟ ಅದನ್ನು ಸ್ವತಃ ಪರಿಶೀಲಿಸಿ ಟಿಪ್ಪುವೇ ಸಹಿ ಹಾಕಿದ ಒಂದು ಅಮೂಲ್ಯ ದಾಖಲೆ ಇದು.
ನಿಧಿನ್ ಸರ್ ನನಗೆ ಗೊತ್ತಿದ್ದ ಹಾಗೆ ರಾಯಲ್ ಏಷಿಯಾಟಿಕ್ ಸೊಸಾಯಿಟಿ ಇಂದ ಇದರ ಮೂಲ ಪ್ರತಿ ತಂದು ಅದರಲ್ಲಿ ಆ ಕಾಲದ ಮೋಡಿ ಲಿಪಿಯನ್ನೂ ಪರ್ಶಿಯನ್ ಶಬ್ಧಗಳನ್ನೂ ಅತ್ಯಂತ ಶ್ರಮವಹಿಸಿ ಕಳೆದ ನಾಲ್ಕು ವರ್ಷಗಳಿಂದ ತಪಸ್ಸಿನ ಹಾಗೆ ದುಡಿದು ಸಿದ್ಧಪಡಿಸಿದ ಹೊಸಗನ್ನಡ ಹೊತ್ತಗೆ ಇದು. ಇಲ್ಲಿ ನಿಧಿನ್ ಸರ್ ಮತ್ತು ಡಾ. ಜಗದೀಶ್ ಅವರು ತಮ್ಮ ಹಸ್ತಕ್ಷೇಪ ಮಾಡದ ಮೂಲ ದಾಖಲೆಯನ್ನು ಯತಾವತ್ ರೂಪಾಂತರಿಸಿದ್ದಾರೆ. ಇಂದು ಬಳಕೆಯಲ್ಲಿ ಇಲ್ಲದ, ಕನ್ನಡದ ನಿಘಂಟಿನಲ್ಲೂ ಸಿಕ್ಕದ, ಏನೆಂದೂ ಅರ್ಥವೇ ಆಗದಂತಹ ಪರ್ಶಿಯನ್ ಪರಿಭಾಷೆ, ವಸ್ತುನಾಮಗಳನ್ನು ಫೂಟ್ ನೋಟ್ ಗಳಲ್ಲಿ ವಿವರಿಸಿರುವ ರೀತಿ ಅವರಿಬ್ಬರೂ ಸಮರ್ಥ ಅನುವಾದಕರು, ಸಮರ್ಥ ಸಂಪಾದಕರು ಎಂಬುದನ್ನು ಸಾಬೀತು ಪಡಿಸುತ್ತದೆ. ವಿಶೇಷವೆಂದರೆ ಹೈದರ್ ನಾಮೆ ಜಂಗ್ ನಾಮೆಗಳ ಹಾಗೇ ಇದೂ ಕೂಡ ಕನ್ನಡದಲ್ಲಿ ಬರೆದಿಟ್ಟಿರುವ ಮೋಡಿಲಿಪಿ ದಾಖಲೆ. ಈ ಪುಸ್ತಕ ಕೆಲವು ಪೂರ್ವಾಗ್ರಹಗಳನ್ನೂ ಹೋಗಲಾಡಿಸುತ್ತದೆ. ಪುಸ್ತಕ ಕೇವಲ ನಲವತ್ತೇಳು ಪುಟಗಳದ್ದು. ಆದರೆ ಅದು ಚೆಲ್ಲುವ ಆ ಕಾಲದ ಸಂಗತಿಗಳು ಅಪಾರವೆಂದರೆ ಅಪಾರ.
ಈ ಶ್ರಮಕ್ಕಾಗಿ ಈ ಕೊಡುಗೆಗಾಗಿ ನಾನು ನಿಧಿನ್ ಸರ್ ಮತ್ತು ಜಗದೀಶ್ ಸರ್ ಇಬ್ಬರನ್ನೂ ವಂದಿಸುವೆ. ಪುಟ್ಟ ಪುಸ್ತಕ ಹೇಳುವ ಆ ಕಾಲದ ವಿವರಗಳು ಕೇವಲ ಕಲ್ಪನೆಗಳನ್ನ ನೆಚ್ಚಿಕೊಂಡಿದ್ದ ಅಜ್ಞಾತತೆಯ ಮೂಲಕ ನಮಗೆ ನಾವೇ ಊಹಿಸಿಕೊಳ್ಳುತ್ತಿದ್ದ ಕೆಲವಷ್ಟು ಚಾರಿತ್ರಿಕ ತೊಡಕುಗಳನ್ನು ಬಿಡಿಸುತ್ತದೆ.
– ಸುರೇಶ ಎನ್ ಶಿಕಾರಿಪುರ ಶಿಕಾರಿಪುರ, ಬರಹಗಾರರು




