ವಿದ್ಯುತ್ ಇಲಾಖೆ, ಸಾರಿಗೆ ಇಲಾಖೆ ನೌಕರರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸಮ್ಮತಿ

3 years ago

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರದ ಕರೆ ನೀಡಿದ್ದ ಇಂಧನ ಇಲಾಖೆ, ಸಾರಿಗೆ ಇಲಾಖೆ ನೌಕರರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸಮ್ಮತಿಸಿದೆ. ಅದೇ ರೀತಿಯಲ್ಲಿ ಲಾರಿ ಮಾಲೀಕರ ಬೇಡಿಕೆಗಳಿಗೂ ಅಸ್ತು ಎಂದಿದೆ. ಹೀಗಾಗಿ ಎಲ್ಲರೂ ಮುಷ್ಕರದ ಕೆರೆಯಿಂದ ಹಿಂದೆ ಸರಿದಿದ್ದು, ಹಬ್ಬದ ಸಮಯದಲ್ಲಿ ಉಂಟಾಗಿದ್ದ ಆತಂಕ ನಿವಾರಣೆಯಾಗಿದೆ.

ರಾಜ್ಯ ರಸ್ತೆ ಸಾರಿಗೆ ನೌಕರರು ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ
ಬಹುದಿನಗಳ ಬೇಡಿಕೆಯಾದ ವೇತನ ಪರಿಷ್ಕರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ.

ಈ ಸಂಬಂಧ ನೌಕರರ ಸಂಘದ ಪ್ರತಿನಿಧಿಗಳು ಇಲಾಖೆಯ ಹಿರಿಯ ಅಧಿಕಾರಿಗಳು, ಹಣಕಾಸು ಇಲಾಖೆ ಮುಖ್ಯಸ್ಥರು ಸಭೆ ನಡೆಸಿ ಸಿದ್ಧ ಪಡಿಸಿದ ರಾಜಿ ಸೂತ್ರಕ್ಕೆ ಸಿಎಂ ಮತ್ತು ಸಂಬಂಧಿಸಿದ ಇಲಾಖೆಯ ಮಂತ್ರಿ ಸಮ್ಮತಿಸಿದ್ದಾರೆ.

ಈ ವಿದ್ಯಮಾನಗಳ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಕಳೆದ ಎರಡುಮೂರು ವರ್ಷಗಳಿಂದ ಸಾರಿಗೆ ನೌಕರರು ತಮ್ಮ ವೇತನವನ್ನು ಪರಿಷ್ಕರಣೆ ಮಾಡಿಲ್ಲ ಎಂದು ಮನವಿ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ನಿಗಮದ ಎಲ್ಲ ವ್ಯವಸ್ಥಾಪಕ ನಿರ್ದೇಶಕರು, ಮತ್ತಿತರ ಜೊತೆ ಸುದೀರ್ಘ ಚರ್ಚೆ ನಡೆಸಿ ಅಂತಿಮವಾಗಿ ಸಾರಿಗೆ ನೌಕರರ ಶೇ.15ರಷ್ಟು ವೇತನ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಹೊಸ ಆದೇಶ ಗುರುವಾರದಿಂದಲೇ ಜಾರಿಗೆ ಬರಲಿದೆ. ಇನ್ನು ಕೆಪಿಟಿಸಿಎಲ್ ನೌಕರರ ವೇತನವನ್ನು ಪರಿಷ್ಕರಣೆ ಮಾಡಲಾಗಿದೆ. ಶೇ.20ರಷ್ಟು ಪರಿಷ್ಕರಣೆ ಮಾಡಲಾಗಿದ್ದು, ಪ್ರತಿಭಟನೆಯನ್ನು ನಡೆಸಬಾರದು ಎಂದು ಮನವಿ ಮಾಡಿಕೊಂಡರು.

 

ಲಾರಿ ಮುಷ್ಕರ ಇಲ್ಲ: ಮತ್ತೊಂದೆಡೆ,ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಇಂದು ಮಧ್ಯರಾತ್ರಿಯಿಂದ ಮುಷ್ಕರಕ್ಕೆ ಮುಂದಾಗಿದ್ದ ಲಾರಿ ಮಾಲೀಕರ ಪ್ರತಿನಿಧಿಗಳೊಂದಿಗೆ ಬೆಂಗಳೂರು ಸಂಚಾರ ವಿಭಾಗದ ಪೊಲೀಸ್ ಆಯುಕ್ತ ಸಲೀಂ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಸುದೀರ್ಘ ಸಭೆ ನಡೆಸಿದರು. ಇದರಲ್ಲಿ ಬೆಂಗಳೂರಿನಲ್ಲಿ ಬೆಳಿಗ್ಗೆ ಮತ್ತು ಸಂಜೆ ನಿರ್ದಿಷ್ಟ ಭಾರ ಮಿತಿಯ ಲಾರಿ ಸಂಚಾರಕ್ಕೆ ಅನುಮತಿಸುವ ನಿರ್ಧಾರ ಸೇರಿದಂತೆ ಹಲವು ತೀರ್ಮಾನ ಕೈಗೊಳ್ಳಲಾಯಿತು ಇದಕ್ಕೆ ಸ್ಪಂದಿಸಿದ ಲಾರಿ ಮಾಲೀಕರು ಮುಷ್ಕರ ಕರೆ ವಾಪಸ್ ಪಡದರು. ಇದರೊಂದಿಗೆ ಆತಂಕ ನಿವಾರಣೆಯಾದಂತಾಗಿದೆ.

Leave a Reply