ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ಗೆ ಬಿಜೆಪಿ ತೊರೆದ ಇಬ್ಬರು ಮಾಜಿ ಶಾಸಕರು ಮತ್ತು ಒಬ್ಬ ಮಾಜಿ ಮೇಯರ್ ಸೇರ್ಪಡೆಯಾದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ನ ಹಲವರು ಆಡಳಿತಾರೂಡ ಬಿಜೆಪಿ ಸೇರಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಹಲವರು ಬಿಜೆಪಿ ಸೇರ್ಪಡೆಯಾದರು. ನಗರದ ಬಿಜೆಪಿ ಕಚೇರಿಯಲ್ಲಿ ಅಧ್ಯಕ್ಷ ನಳಿನ್ ಕುಮಾರ್ ಕಟಿಲ್ ಅವರು ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಸೀಕಲ್ ರಾಮಚಂದ್ರಗೌಡ, ಉದ್ಯಮಿ ಎಸ್.ವಿ. ಆನಂದ ಗೌಡ, ಗ್ರಾ.ಪಂ. ಸದಸ್ಯ ಟಿ.ಪಿ. ಶ್ರೀಧರ್, ಸಿನಿಮಾ ನಿರ್ಮಾಪಕ ವಿಜಯ್ಕುಮಾರ್, ಸ್ಥಳೀಯ ಮುಖಂಡರಾದ ಮಂಜುನಾಥ್ ಭಕ್ತರಹಳ್ಳಿ, ಮೂರ್ತಿ ಸೊನ್ನೆನಹಳ್ಳಿ, ರಾಜು ಬಳುವನಹಳ್ಳಿ, ಸುರೇಶ್ ಮಿಟ್ಟಿಮರಿ, ವೆಂಕಟರಾಮ್ ರೆಡ್ಡಿ, ವಿರೇಂದ್ರ, ನಾಗರಾಜ್ ಅವರಿಗೆ ಕೇಸರಿ ಶಾಲು ಹಾಕುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಕಟೀಲ್ ಡಬಲ್ ಎಂಜಿನ್ ಸರಕಾರದ ಸಾಧನೆಯನ್ನು ಜನ ಒಪ್ಪಿಕೊಂಡಿದ್ದಾರೆ. ರಾಜ್ಯದೆಲ್ಲೆಡೆ ಬಿಜೆಪಿ ಪರ ಅಲೆ ಇದೆ. ದೇಶದ ಅಭಿವೃದ್ಧಿ, ರಾಜ್ಯದ ಕಲ್ಯಾಣ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ಭಾವನೆ ಜನರಲ್ಲಿದೆ ಹೀಗಾಗಿ ಬಿಜೆಪಿ ಮನೆ ತುಂಬುತ್ತಿದೆ. ಕಾಂಗ್ರೆಸ್- ಜೆಡಿಎಸ್ ಮನೆ ಖಾಲಿ ಆಗುತ್ತಿದೆ ಎಂದರು.
ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ. 3 ರಾಜ್ಯಗಳ ಫಲಿತಾಂಶ ಗಮನಿಸಿದರೆ ಕಾಂಗ್ರೆಸ್ ಪಕ್ಷ ಶೂನ್ಯದತ್ತ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ವಿರೋಧ ಪಕ್ಷವಾಗಲು ನಾಲಾಯಕ್ ಎಂಬ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಎಂದರು.
ಅಧಿಕಾರ ಗಳಿಸುವ ರಾಜ್ಯದ ಕಾಂಗ್ರೆಸ್ಸಿಗರ ಕನಸು ಕೇವಲ ಹಗಲುಗನಸಾಗಲಿದೆ ಎಂದ ಅವರು, ಚೆನ್ನಾಗಿ ಕೆಲಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.




