ಕಾರ್ಯ ಮರೆತ ಪತ್ರಕರ್ತರ ಗಮನಕ್ಕೆ.
ಗೆಳೆಯರೇ ನೀವೂ ಕೂಡಾ ಭಾರತದ ಪ್ರಧಾನಿಯಾಗಿ ಮತ್ತು ಗೃಹ ಸಚಿವರಾಗಿ ಕಾರ್ಯನಿರ್ವಹಿಸಿರುವ ಭಾರತದ ಹಿರಿಯ ರಾಜಕಾರಣಿಗಳ ಕಾರ್ಯ ವೈಖರಿಯನ್ನು ಗಮನಿಸಿದ್ದೀರಾ ಎಂದು ಭಾವಿಸಿದ್ದೀನಿ.
ದೇಶದ ಅತ್ಯುನ್ನತ ಹದ್ದೆಗಳಾದ ಈ ಹುದ್ದೆಗಳಿಗೆ ಏರಿದ ವ್ಯಕ್ತಿಗಳು ತಾವು ಪಕ್ಷ ಭೇದ ಮರೆತು ಈ ನೆಲದ ಪ್ರತಿಯೊಬ್ಬ ಜೀವಿಯ ಶ್ರೇಯಸ್ಸಿಗಾಗಿ ದುಡಿಯುತ್ತಿದ್ದರು. ಅವರುಗಳು ಎಂದಿಗೂ ರಾಜ್ಯಗಳ ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸುತ್ತಿರಲಿಲ್ಲ.
ಪಾರ್ಲಿಮೆಂಟ್ ಚುನಾವಣೆಯಲ್ಲಿ ಸಹ ಕೇವಲ ಮೂರು ಅಥವಾ ನಾಲ್ಕು ಸಭೆಗಳಲ್ಲಿ ಪಾಲ್ಗೊಂಡು ತುಟಿ ಮೀರಿದ ಮಾತುಗಳನ್ನು ಆಡಿದವರಲ್ಲ. ಈಗಿನ ಪ್ರಧಾನಿ ಮತ್ತು ಗೃಹ ಸಚಿವರಿಬ್ಬರು ದೇಶಕ್ಕೆ ಪ್ರತಿನಿಧಿಗಳಾ ? ಅಥವಾ ಬಿ.ಜೆ.ಪಿ. ಪಕ್ಷದ ಪ್ರತಿನಿಧಿಗಳಾ? ಎಂದು ಕೇಳಿ ತಿಳಿದುಕೊಳ್ಳಬೇಕಿದೆ.
ಕಳೆದ ಹದಿನೈದು ದಿನಗಳಿಂದ ಇವರಿಬ್ಬರ ಕಾರ್ಯವೈಖರಿಯನ್ನು ಗಮನಿಸಿ. ಪ್ರಧಾನಿ ಕರ್ನಾಟಕದಲ್ಲಿ ಇದ್ದರೆ, ಗೃಹ ಸಚಿವ ತ್ರಿಪುರ ಅಥವಾ ಮೇಘಾಲಯದಲ್ಲಿ. ಗೃಹ ಸಚಿವ ಕರ್ನಾಟಕದಲ್ಲಿ ಇದ್ದರೆ, ಪ್ರಧಾನಿ ತ್ರಿಪುರ ಮತ್ತು ಮೇಘಾಲಯಗಳಲ್ಲಿ.
ದೇಶದ ಜನತೆ ಬಡವನೂ ಸೇರಿದಂತೆ ಪ್ರತಿಯೊಬ್ಬನೂ ತಾನು ತಿನ್ನುವ ಉಪ್ಪಿಗೂ ತೆರಿಗೆ ಪಾವತಿಸುತ್ತಿದ್ದಾನೆ. ದೇಶದ ಅಭಿವೃದ್ಧಿಗೆ ವಿನಿಯೋಗವಾಗಬೇಕಾದ ಹಣ ಇವರುಗಳ ಚುನಾವಣಾ ತೆವಲಿಗೆ ಖರ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಇವರು ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರಕ್ಕಾಗಿ ಭಾಗವಹಿಸುವುದು ಮಾತ್ರ ಬಾಕಿ ಇದೆ.
ಕಳೆದ ಎಂಟು ವರ್ಷಗಳ ಅವಧಿಯಲ್ಲಿ ನೂರೂ ಕೋಟಿ ಲಕ್ಷ ಸಾಲ ಮಾಡಿರುವುದು, ಬಡತನ, ಹಸಿವು, ಮಕ್ಕಳ ಅಪೌಷ್ಟಿಕತೆ, ಹೀಗೆ ಎಲ್ಲಾ ವಿಷಯಗಳಲ್ಲಿ ಜಗತ್ತಿನ ನೂರಾ ಎಂಬತ್ತು ರಾಷ್ಟ್ರಗಳ ಪೈಕಿ ನೂರರ ನಂತರದ ಸ್ಥಾನವನ್ನು ಭಾರತ ಪಡೆದಿರುವುದು ನಿಮಗೆ ಕಾಣುತ್ತಿಲ್ಲವೆ?
ನಾಳೆ ಭಾನುವಾರ. ಮನೆಯಲ್ಲಿ ಇರುತ್ತೀರಿ. ನಿಮ್ಮ ಪತ್ನಿಯರು ಬಟ್ಟೆಯನ್ನು ತೊಳೆಯಲು ವಾಷಿಂಗ್ ಮೆಷಿನ್ ಗೆ ಹಾಕುವಾಗ, ನಿಮ್ಮ ಮಿದುಳನ್ನು ಬಿಚ್ಚಿ ಕೊಡಿ. ಒಳ್ಳೆಯ ಪೌಡರ್ ನಿಂದ ಮಿದುಳು ತೊಳೆಯಲಿ. ನೋಡೋಣ. ಏನಾದರೂ ಮಾಧ್ಯಮದಲ್ಲಿ ಹೊಸತನ ಕಾಣಬಹುದು.
ಕೇಂದ್ರ ಸಚಿವ ಸಂಪುಟದ ಎಪ್ಪತ್ತು ಸಚಿವರನ್ನು ವಾರಕ್ಕೆ ಇಬ್ಬರಂತೆ ತಮಿಳುನಾಡಿಗೆ ಕಳಿಸಿಕೊಡುತ್ತಿರುವುದು ನಿಮ್ನ ಗಮನಕ್ಕೆ ಬಂದಿಲ್ಲವೆ? ಹೋಗಲಿ, ಜನ ಸಾಮಾನ್ಯರು ಬೇಡ. ಈ ಕೇಂದ್ರ ಸಚಿವ ಸಂಪುಟದ ಮೂರು ಅಥವಾ ನಾಲ್ಕು ಮಂದಿ ಬಿಟ್ಟರೆ ಉಳಿದರ ಪರಿಚಯವಿದೆಯಾ? ನನಗೆ ಐದು ಮಂದಿಯನ್ನು ಹೊರತು ಪಡಿಸಿ ಉಳಿದವರು ಅನಾಮಿಕರು.
ಇಂತಹ ಹುಚ್ಚುತನದ ಆಡಳಿತ ವೈಖರಿ ಈವರೆಗೆ ಏಕೆ ನಿಮ್ಮ ಎದೆಗೆ ತಟ್ಟುತ್ತಿಲ್ಲ?
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




