ಬೆಂಗಳೂರಿನಲ್ಲಿ ಭಿಕ್ಷೆ ಹಾಕುವವರು ಓದಲೇಬೇಕಾದ ಸುದ್ದಿ

3 years ago

ಬೆಂಗಳೂರು: ರಾಜಧಾನಿ ಮಹಾನಗರಿ ಬೆಂಗಳೂರಿನಲ್ಲಿ ಹೀಗೊಂದು ಜಾಲ ಕಾರ್ಯನಿರ್ವಹಿಸುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಿನಿಮಾಗಳಲ್ಲಿ, ಕಥೆಗಳಲ್ಲಿ ಕಂಡಂತಹ ವಿದ್ಯಮಾನವಿದು. ಈ ಸುದ್ದಿ ನೋಡಿದಾಗ ಎಂತವರನ್ನೂ ಬೆಚ್ಚಿಬೀಳಿಸುವಂತಿದೆ.

ನಗರದ ಪ್ರಮುಖ ವೃತ್ತಗಳು, ಸಿಗ್ನಲ್ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಹಸುಗೂಸುಗಳನ್ನು ಎತ್ತಿಕೊಂಡ ಮಹಿಳೆಯರು ಭಿಕ್ಷಾಟನೆ ಮಾಡುವುದನ್ನು ಕಾಣುತ್ತೇವೆ. ಆ ಮಕ್ಕಳು ಹಾಗೂ ಅವುಗಳನ್ನು ಎತ್ತಿಕೊಂಡ ಮಹಿಳೆಯರ ದೈನೇಸಿ ಸ್ಥಿತಿಯನ್ನು ಕಂಡು ಮರುಗಿ ಕೈಲಾದಷ್ಟು ಸಹಾಯ ಮಾಡುವುದು ಮಾಮೂಲು.

ಇನ್ನು ಮುಂದೆ ಯಾರೂ ಹೀಗೆ ಮಾಡಬೇಡಿ. ನೀವು ಮರುಗುವುದರಿಂದ ದೊಡ್ಡದಾದ ಅನಾಹುತ ಸೃಷ್ಟಿಯಾಗುತ್ತಿದೆ. ಇದೊಂದು ದಂಧೆಯಾಗಿ‌ ಪರಿಣಮಿಸುತ್ತಿದೆ. ಅದೇನೆಂದರೆ ಮಹಿಳೆಯರನ್ನು ಬಾಡಿಗೆ ಇಲ್ಲವೇ ಕಳ್ಳಸಾಗಣೆ ಮೂಲಕ ಕರೆತಂದು ಮಕ್ಕಳಿಗೆ ‌ನಿದ್ದೆ ಬರುವ ಔಷಧಿ ನೀಡಿ ಮಲಗಿಸಿ ಭಿಕ್ಷಾಟನೆ ಮಾಡಿಸುತ್ತಿದ್ದ ಜಾಲವೊಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದೆ.

ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ವ್ಯವಸ್ಥಿತ ಕಾರ್ಯಾಚರಣೆ ಮಾಡಿದ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಈ ಜಾಲವನ್ನು ಬೇಧಿಸಿ,55 ಮಂದಿಯನ್ನು ರಕ್ಷಿಸಿದ್ದಾರೆ.
ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಭಿಕ್ಷಾಟನೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ವಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ನಗರದ ಕೇಂದ್ರ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ಆಗ್ನೇಯ, ವೈಟ್ ಫೀಲ್ಡ್ ವಿಭಾಗದಲ್ಲಿ 14 ತಂಡಗಳ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. 3 ಹುಡುಗರು, 5 ಹುಡುಗಿಯರು, ತಾಯಿ ಮತ್ತು ಮಕ್ಕಳು, 18 ಹೆಂಗಸರು, 5 ಗಂಡಸರು 7 ಸೇರಿ 55 ಮಂದಿ ಭಿಕ್ಷುಕರನ್ನು ರಕ್ಷಿಸಲಾಗಿದೆ. ರಕ್ಷಣೆ ಮಾಡಲ್ಪಟ್ಟ ಎಲ್ಲರನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪುನರ್ವಸತಿ ಕಲ್ಪಿಸಲಾಗಿದೆ.

ಸ್ಪೋಟಕ ಮಾಹಿತಿ: ಭಿಕ್ಷಾಟನೆಯನ್ನು ಮಾಡುತ್ತಿದ್ದ ಕೆಲ ಮಹಿಳೆಯರು, ತಮ್ಮ ಭಿಕ್ಷಾಟನೆ ಕಾರ್ಯಕ್ಕಾಗಿ ಮಕ್ಕಳನ್ನು ಕಳ್ಳತನ ಮಾಡಿಕೊಂಡು ಬಂದಿದ್ದಾರೆ. ಬಹುತೇಕ ಮಕ್ಕಳು ಕಳ್ಳ ಸಾಗಾಣಿಕೆ ಮಾಡಿ ತಂದಿರುವ ಮಕ್ಕಳಾಗಿದ್ದಾರೆ.

ಭಿಕ್ಷಾಟನೆ ಮಾಡುವಾಗ ಚಿಕ್ಕ ಕಂದಮ್ಮಗಳಿಗೆ ನಿದ್ದೆ ಔಷಧಿಯನ್ನು ಬಲವಂತವಾಗಿ ನೀಡಲಾಗುತ್ತಿತ್ತು. ಮಕ್ಕಳು ಎಚ್ಚರವಿಲ್ಲದೇ ಜೋಳಿಗೆಯಲ್ಲಿ ಮಲಗಿದ ನಂತರ ಟ್ರಾಫಿಕ್‌ ಸಿಗ್ನಲ್‌ಗಳು ಹಾಗೂ ಇತರೆ ಜನಸಂದಣಿ ಪ್ರದೇಶದಲ್ಲಿ ಮಕ್ಕಳನ್ನು ಮಲಗಿಸಿ ಭಿಕ್ಷೆ ಬೇಡುತ್ತಿದ್ದರು.

ಮಹಿಳೆಯರ ಬಳಕೆ: ಕೂಲಿ ಕಾರ್ಮಿಕರು ಹಾಗೂ ಹೊರ ರಾಜ್ಯದಿಂದ ಬಂದು ಅಲ್ಪಸ್ವಲ್ಪ ಕನ್ನಡವನ್ನು ಕಲಿತ ಮಹಿಳೆಯರನ್ನು ದಿನಗೂಲಿ ಆಧಾರದಲ್ಲಿ, ಬಾಡಿಗೆ ಪಡೆದುಕೊಂಡು ಅವರಿಗೆ ಮತ್ತು ಬರುವ ಔಷಧಿಯನ್ನು ನೀಡಿದ ಮಕ್ಕಳನ್ನು ಕೊಟ್ಟು ಭಿಕ್ಷಾಟನೆಗೆ ಕಳಿಸಲಾಗುತ್ತಿತ್ತು ಎಂಬ ಅನುಮಾನ ಬಂದಿದೆ.

ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಆದರೆ ಕೆಲವೆಡೆ ಈ ಮಹಿಳೆಯರು ತಾವು ಎತ್ತಿಕೊಂಡಿರುವ ಮಕ್ಕಳು ತಮ್ಮವೇ ಎಂದು ವಾದಿಸುತ್ತಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದಾಗ ಮಕ್ಕಳು ಮತ್ತು ಅವರನ್ನು ಎತ್ತಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ ತಾಯಂದಿರಿಗೂ ಹೋಲಿಕೆ ಇಲ್ಲದಿರುವುದು ಕಂಡುಬಂದಿದೆ.

ಹೀಗಾಗಿ ಭಿಕ್ಷಾಟನೆಯಿಂದ ರಕ್ಷಣೆ ಮಾಡಿದವರನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಾಂತ್ವಾನ ಕೇಂದ್ರಕ್ಕೆ ಬಿಡಲಾಗಿದೆ. ಇದೀಗ‌ ಪೊಲೀಸರು ಸ್ವಯಂ ಸೇವಾ ಸಂಘಟನೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇತರರ ನೆರವಿನಲ್ಲಿ ಭಿಕ್ಷಾಟನೆ ವಿರುದ್ಧ ಜಾಗೃತಿ ಮೂಡಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

Leave a Reply