ಬೆಂಗಳೂರು: ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ಬಹುಗ್ರಾಮ ನೀರು ಸರಬರಾಜು ಯೋಜನೆಯಡಿ ಕಲಬುರಗಿ ಜಿಲ್ಲೆಯ ನಾರಾಯಣಪುರ ಹಿನ್ನೀರಿನ ಬಳಿಯಿರುವ ಬಸವಸಾಗರ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡುವ 7,200 ಕೋಟಿ ರೂ. ವೆಚ್ಚದ ಯೋಜನೆಯನ್ನು ಜಲ ಜೀವನ್ ಮಿಷನ್ ಅಡಿ ಆರಂಭಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ರಾಜ್ಯ ಸರ್ಕಾರ ಶೇ.50ರ ಪಾಲು ಹಾಗೂ ನಿರ್ವಹಣ ವೆಚ್ಚ ಸೇರಿದಂತೆ 3,914.45 ಕೋಟಿ ರೂ. ಭರಿಸಲಿದೆ ಎಂದು ಹೇಳಿರುವ ಅವರು, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ 2011ರಂತೆ 22.14 ಲಕ್ಷ ಜನಸಂಖ್ಯೆ ಇದ್ದು, 2038ರ ವೇಳೆಗೆ ಈ ಎರಡೂ ಜಿಲ್ಲೆಗಳ ಜನಸಂಖ್ಯೆ 31.54 ಲಕ್ಷಕ್ಕೆ ಏರುವುದೆಂದು ನಿರೀಕ್ಷಿಸಲಾಗಿದ್ದು, ಈ ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಗ್ರಾಮಗಳು ಹಾಗೂ ಜನವಸತಿಗಳಿಗೆ ಈ ಯೋಜನೆಯಡಿ ನೀರು ಪೂರೈಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದಿದ್ದಾರೆ.
ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಪ್ರಸ್ತುತ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ನೀರಿನ ಗುಣಮಟ್ಟ, ಪೂರೈಕೆಯಲ್ಲಿ ಕೊರತೆಯಂತಹ ಸವಾಲುಗಳನ್ನು ಎದುರಿಸಲಾಗುತ್ತಿದೆ ಎಂದು ಹೇಳಿದ್ದು, ಈ ಎರಡೂ ಜಿಲ್ಲೆಗಳ ಅಂತರ್ಜಲ ಮೂಲಗಳು ದಿನದಿಂದ ದಿನಕ್ಕೆ ಕುಸಿಯುತ್ತಿರುವುದೂ ಸಮಸ್ಯೆಯಾಗಿ ಪರಿಣಮಿಸಿದೆ ಎಂದಿದ್ದಾರೆ.
ಡಾ.ನಂಜುಂಡಪ್ಪ ಸಮಿತಿ ವರದಿಯಂತೆ ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಹಿಂದುಳಿದಿದ್ದು, ಈ ಯೋಜನೆಯಿಂದ ಈ ಎರಡೂ ಜಿಲ್ಲೆಗಳ 31.54 ಲಕ್ಷ ಜನರು ಪರಿಶುದ್ಧ ನೀರನ್ನು ಪಡೆಯಲಿದ್ದಾರೆ. ಇವರಲ್ಲಿ 10.43 ಲಕ್ಷ ಮಂದಿ ಪರಿಶಿಷ್ಟ ಜಾತಿ ಹಾಗೂ 3.05 ಮಂದಿ ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ನೀರು ಒದಗಿಸಲು ಸಾಧ್ಯವಾಗಲಿದೆ ಎಂದಿದ್ದಾರೆ.
ಬಸವಸಾಗರ ಯೋಜನೆ ಕಾರ್ಯಗತಗೊಂಡ ನಂತರ ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ನಾಗರಿಕರಿಕರಿಗೆ ಪ್ರತಿ ವ್ಯಕ್ತಿಗೆ ಪ್ರತಿನಿತ್ಯ 55 ಲೀಟರ್ ಶುದ್ಧ ನೀರು ಲಭ್ಯವಾಗಲಿದ್ದು, ಈ ಬೇಡಿಕೆಗೆ ಅನುಗುಣವಾಗಿ 2.80 ಟಿ.ಎಂ.ಸಿ ನೀರು ಅವಶ್ಯವಾಗುತ್ತದೆ. 7,200 ಕೋಟಿ ರೂ.ಗಳ ಈ ಮಹತ್ವದ ಯೋಜನೆಗೆ ಕಳೆದ ವಾರ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ದೊರೆತಿದೆ ಎಂದು ತಿಳಿಸಿದ್ದಾರೆ.




