ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಕಾಜಿಬೀಳಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ನಡೆಯಿತು.
ಗ್ರಾಮಕ್ಕೆ ಆಗಮಿಸಿದ ಜಿಲ್ಲಾ ಹಾಗೂ ತಾಲ್ಲೂಕಾ ಆಡಳಿತದ ಅಧಿಕಾರಿಗಳನ್ನು ವಿವಿಧ ವಾದ್ಯಮೇಳಗಳಿಂದ ಬಹಳ ಅದ್ದೂರಿಯಾಗಿ ಬರಮಾಡಿಕೊಂಡರು ಮತ್ತು ಜಿಲ್ಲಾಧಿಕಾರಿಗಳನ್ನು ಚಕ್ಕಡಿ ಗಾಡಿಯ ಮೇಲೆ ಮೇರವಣಿಗೆ ಮಾಡಿಸಿ ಊರಿನ ಪ್ರಮುಖ ಬೀದಿಗಳನ್ನು ಸಂಚರಿಸಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆತರಲಾಯಿತು.
ಸಾವಳಗಿ ಹೋಬಳಿಯ ಕಾಜಿಬೀಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಜಿಬೀಳಗಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮನ್ನು ಸ್ವಾಗತಿಸಿದ ಪರಿಯನ್ನು ನೋಡಿ ಭಾವುಕರಾಗಿ ಇದನ್ನು ಸ್ವಾಗತಿಸುತ್ತೇನೆ. ಆದರೆ ಇದಕ್ಕೆ ಎರಡು ಗಂಟೆ ವ್ಯರ್ಥ ಮಾಡುವ ಬದಲು ಸಮಸ್ಯೆಗಳನ್ನು ಬಗೆಹರಿಸಲು ಎರಡು ಗಂಟೆ ಹೆಚ್ಚಿಗೆ ಅವಕಾಶ ಸಿಗುತ್ತದೆ. ಮುಂದಿನ ಬಾರಿ ಈ ಮಾಡದಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ೨೫ ದಿನಗಳಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಎರಡ್ಮೂರು ಬಾರಿ ಭೇಟಿ ನೀಡಿ ಮನೆ ಮನೆಗೆ ಹೋಗಿ ೫೦೦ಕ್ಕೂ ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ ಇಲಾಖಾವಾರು ಅರ್ಜಿಗಳನ್ನು ಬೇರ್ಪಡಿಸಿ ಆಯಾ ಇಲಾಖೆ ಹಸ್ತಾಂತರಿಸಲಾಯಿತು. ಅದರಲ್ಲಿ ೩೦೦ಕ್ಕೂ ಅಧಿಕ ಅರ್ಜಿಗಳಿಗೆ ಸ್ಥಳದಲ್ಲಿಯೇ ಬಗೆಹರಿಸಲಾಗಿದ್ದು, ಉಳಿದ ಅರ್ಜಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯಕ್ರಮ ಕೈಗೊಂಡು ಶೀಘ್ರದಲ್ಲಿ ಬಗೆಹರಿಸಬೇಕು. ಇಲ್ಲವಾದಲ್ಲಿ ೧೫ ದಿನಗಳ ನಂತರ ನಾನು ಮತ್ತೆ ಇವುಗಳನ್ನು ನೋಡುವದಾಗಿ ತಿಳಿಸಿದರು.
ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸ್ಥಳೀಯ ಪಿಡಿಓರಿಗೆ ತರಬೇತಿ ನೀಡಿ, ಎಲ್ಲಾ ಸಮಸ್ಯೆಗಳಿಗೆ ನೀವು ಪರಿಹಾರ ನೀಡಲು ಸಾಧ್ಯವಿಲ್ಲ. ಇವರ ನಿರ್ಲಕ್ಷ್ಯದಿಂದ ೧೦-೧೨ ರಸ್ತೆಗಳು ಉಳಿದಿವೆ ಎಂದರು.
ಸ್ಥಳೀಯ ಶಾಸಕ ಆನಂದ ನ್ಯಾಮಗೌಡ ಅವರಿಗೆ ಊರನ್ನು ಈ ಕಾರ್ಯಕ್ರಮ ಮತ್ತು ಅಮೃತ ಗ್ರಾಮ ಯೋಜನೆಗೆ ಆಯ್ಕೆಮಾಡಿದಕ್ಕೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಈ ಜಾಗ ಇಲ್ಲದವರಿಗೆ ಸರ್ಕಾರಿ ಜಾಗವನ್ನು ಜಿಲ್ಲಾಡಳಿತದಿಂದ ನೀಡುತ್ತೇವೆ. ಆದರೆ ಈ ಜಾಗ ಗ್ರಾಮದ ಎರಡು ಕಿ.ಮೀ ದೂರದಲ್ಲಿದೆ ಎಂದರು.
ಆನಂದ ನ್ಯಾಮಗೌಡ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಜಿಲ್ಲಾಡಳಿತ ಬಹಳ ಉತ್ತಮವಾಗಿ ಸ್ಪಂದಿಸಿ ಅನೇಕ ಸಮಸ್ಯೆಗಳನ್ನು ಬಗೆಹರಿಸಿದೆ. ಜಿಲ್ಲಾಧಿಕಾರಿಗಳಿಗೆ ಅಭಿನಂದನೆಗಳು ಎಂದರು.
ಕಾಜಿ ಬೀಳಗಿ ಗ್ರಾಮವನ್ನು ಅಮೃತ ಯೋಜನೆಗೆ ಆಯ್ಕೆ ಮಾಡಿದ್ದು ಇದರ ಸದುಪಯೋಗ ಸ್ಥಳೀಯರು ಪಡೆದುಕೊಂಡು ವಸತಿ ಸಹಿತ ಗ್ರಾಮ ಮಾಡಿಕೊಳ್ಳಬೇಕು ಮತ್ತು ಈ ಭಾಗದಲ್ಲಿ ದ್ರಾಕ್ಷಿ ಹಾಗೂ ಕೆಲವು ಬೆಳೆಗಳು ಬಹಳಷ್ಟು ಹಾನಿಯಾಗಿದ್ದು ಇವುಗಳಿಗೆ ಸರಿಯಾದ ಸಮಯಕ್ಕೆ ವಿಮೆಯಾಗಿಲ್ಲ. ವಿಮಾ ಕಂಪನಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸುವ ಕೆಲಸವಾಗಬೇಕು ಎಂದರು.
ಈ ಕಾರ್ಯಕ್ರಮವನ್ನು ಸ್ವಾಗತಿಸಿದ ಉಪವಿಭಾಗಧಿಕಾರಿ ಸಿದ್ದು ಹುಳ್ಳೋಳ್ಳಿ ಕಾರ್ಯಕ್ರಮದ ಮೂಲ ಉದ್ದೇಶ ಜಿಲ್ಲಾಡಳಿತ ಜನಪರವಾಗಿ ಸರ್ಕಾರದ ಸೇವೆಗಳನ್ನು ಪಾರದರ್ಶಕತೆಯಿಂದ ಜನರಿಗೆ ಒದಗಿಸುವದು ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಒಂದೇ ದಿನದಲ್ಲಿ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿ ಜನ ಸೇವೆಯೇ ಜನಾರ್ಧನ ಸೇವೆ ಬಿಂಬಿಸುವುದು ಎಂದರು.
ಈ ಸಂಧರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಗ್ರಾಮದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಸಿಕೂಟ್ಟು ಅಂಗನವಾಡಿಯಲ್ಲಿ ನೀಡುವ ಧಾನ್ಯಗಳಿಂದ ಹಾಗೂ ಪದಾರ್ಥಗಳಿಂದ ವಿವಿಧ ಕಲಾಕೃತಿಗಳನ್ನು ನೀಡಲಾಯಿತು.
ಕಂದಾಯ ಇಲಾಖೆಯಿಂದ ವಿವಿಧ ಪಿಂಚಣಿ ಆದೇಶ ಪ್ರತಿಗಳನ್ನು, ಅರ್ಹ ಫಲಾನುಭವಿಗಳಿಗೆ ಸುಕನ್ಯಾ ಸಮೃದ್ದಿ ಯೋಜನೆ ಉಜ್ವಲ ಯೋಜನೆಯ ಖಾತೆ ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ತಹಶಿಲ್ದಾರ ಸದಾಶಿವ ಮುಕ್ಕೂಜಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರವಣ ನಾಯಕ, ಉಪ ತಹಶಿಲ್ದಾರ ಯಾಶೀನ ದ್ರಾಕ್ಷಿ, ಕಂದಾಯ ನೀರಿಕ್ಷಕ ಪ್ರಕಾಶ ಪವಾರ ಸೇರಿದಂತೆ ಅನೇಕರು ಹಾಜರಿದ್ದರು.



