ಪಂಚಮಸಾಲಿ ಸಮುದಾಯಕ್ಕೆ 2ಎ: ಸಂವಿಧಾನದ ಆಶಯ ಮತ್ತು ಕಾನೂನಾತ್ಮಕವಾಗಿ ನಿರ್ಧಾರ: ಸಿದ್ದರಾಮಯ್ಯ

1 year ago

ಬೆಂಗಳೂರು: ಲಿಂಗಾಯತ ಪಂಚಮಸಾಲಿ  ಸಮುದಾಯಕ್ಕೆ ಪ್ರವರ್ಗ-2ಎ ಅಡಿ ಮೀಸಲಾತಿ ನೀಡಬೇಕೆಂಬ ಬೇಡಿಕೆ ಬಗ್ಗೆ ಸಂವಿಧಾನದ ಆಶಯ ಮತ್ತು ಕಾನೂನಾತ್ಮಕ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗದ ಜೊತೆ ಸಭೆ ನಡೆಸಿದ ಅವರು, ಸರ್ಕಾರ ಮೀಸಲಾತಿ ವಿಷಯದಲ್ಲಿ ಮುಕ್ತ ಮನಸ್ಸು ಹೊಂದಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಎಲ್ಲಾ ದುರ್ಬಲ ವರ್ಗದವರಿಗೂ ನ್ಯಾಯ ದೊರೆಯಬೇಕು ಎಂಬುವುದು ನಮ್ಮ ಸರ್ಕಾರದ ನಿಲುವು ಎಂದರು.

ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಸಂಬಂಧ ಶಿಫಾರಸು ಮಾಡಲು ಶಾಶ್ವತ ಆಯೋಗವಿದೆ. ಆದರೆ ಆಯೋಗ ಇಲ್ಲಿಯವರೆಗೆ ಯಾವುದೇ ಅಂತಿಮ ಶಿಫಾರಸು ಮಾಡಿಲ್ಲ. ಸದ್ಯ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಈಗಲೇ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಅಡ್ವೊಕೇಟ್‌ ಜನರಲ್‌, ಕಾನೂನು ಇಲಾಖೆ, ತಜ್ಞರು ಮತ್ತು ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಮುದಾಯದ ಮನವಿಯ ಮೇರೆಗೆ ಹಿಂದಿನ ಸರ್ಕಾರ 2ಸಿ ಮತ್ತು 2ಡಿ ಎಂಬ ಹೊಸ ಪ್ರವರ್ಗಗಳನ್ನು ರಚಿಸಿತ್ತು. 3ಎನಲ್ಲಿರುವ ಒಕ್ಕಲಿಗರನ್ನು 2ಸಿಗೆ, 3ಬಿಯಲ್ಲಿರುವ ಲಿಂಗಾಯತರನ್ನು 2ಡಿಗೆ ಸೇರಿಸುವ ಪ್ರಸ್ತಾಪ ಇರಿಸಿತ್ತು. ಮುಸ್ಲಿಮರ ಮೀಸಲಾತಿಯನ್ನು ತೆಗೆದುಹಾಕಿತ್ತು. ಮುಸ್ಲಿಮರು ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ರಾಜ್ಯ ಸರ್ಕಾರ ಯಥಾಸ್ಥಿತಿ ಮುಂದುವರೆಸಲು ಒಪ್ಪಿಕೊಂಡಿತ್ತು. ಈ ವಿಷಯ ನ್ಯಾಯಾಲಯದಲ್ಲಿ ಇರುವ ಕಾರಣ, ತಕ್ಷಣಕ್ಕೆ ಆ ಬಗ್ಗೆಯೂ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಸಭೆಯಲ್ಲಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದ್ದು ನಾವು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮುದಾಯದ ಜತೆ ಮತ್ತೆ ಚರ್ಚೆ ಮಾಡುತ್ತೇವೆ ಎಂದರು.

ಕಾಲಮಿತಿಯಲ್ಲಿ ಮೀಸಲಾತಿ ನೀಡಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬೇರೆ ಸಮಾಜಗಳಿಗೆ ನೋವಾಗುವಂತೆ ತೀರ್ಮಾನ ಮಾಡಿತ್ತು. ನಂತರ ಆ ಸರ್ಕಾರವೇ ನಾವು ಯಾವುದೇ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ. ಈ ವಿಚಾರ ನ್ಯಾಯಾಲಯದಲ್ಲಿ ಇರುವಾಗ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದರು.

ಈಗ ಚುನಾವಣಾ ನೀತಿ ಸಂಹಿತೆ ಇದೆ. ಇದಾದ ನಂತರ ಸಭೆ ಕರೆದು ಮಾತನಾಡುತ್ತೇವೆ ಎಂದು ಸಮುದಾಯದ ಮುಖಂಡರುಗಳಿಗೆ ಗೌರವಯುತವಾಗಿ ಹೇಳಿದ್ದೇವೆ ಅವರ ಭಾವನೆ, ಕಳಕಳಿ ನಮಗೆ ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ನಾವು ಅವರ ವಿಚಾರವನ್ನು ಪರಿಗಣಿಸುತ್ತೇವೆ ಎಂದರು

ತಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಸಮುದಾಯದವರು ಹೇಳಿರುವ ಬಗ್ಗೆ ಕೇಳಿದಾಗ, ಹೋರಾಟ ಮಾಡುವವರಿಗೆ ನಾವು ಏನು ಹೇಳಲು ಆಗುತ್ತದೆ ಎಂದು ಮರು ಪ್ರಶ್ನೆ ಹಾಕಿದರು.

Leave a Reply