ವಿಶ್ವ ಮಾದಕ ವಸ್ತು ವಿರೋಧಿ ದಿನ: ಕೋಟಿ ಮೌಲ್ಯದ ವಿವಿಧ ಮಾದರಿಯ ಮಾದಕವಸ್ತುಗಳ ನಾಶ
ಬೆಂಗಳೂರು: ವಿಶ್ವ ಮಾದಕ ವಸ್ತು ವಿರೋಧಿ ದಿನವಾದ ಇಂದು ನಗರ ಪೊಲೀಸರು ವಶಪಡಿಸಿಕೊಂಡ ಕೋಟಿ ಮೌಲ್ಯದ ವಿವಿಧ ಮಾದರಿಯ ಮಾದಕವಸ್ತುಗಳನ್ನು ನಾಶಪಡಿಸಿದ್ದಾರೆ.
ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಪ್ರಸಕ್ತ ಸಾಲಿನಲ್ಲಿ 6191 ಪ್ರಕರಣಗಳನ್ನು ದಾಖಲಿಸಿ, 7723 ಭಾರತೀಯರು ಹಾಗೂ 159 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
943 ಪ್ರಕರಣಗಳನ್ನು ಡ್ರಗ್ ಪೆಡ್ಲರ್ ಗಳ ಮೇಲೆ 5248 ಪ್ರಕರಣಗಳನ್ನು ಡ್ರಗ್ಸ್ ಸೇವನೆ ಮಾಡುವವರ ವಿರುದ್ಧ ದಾಖಲಿಸಿ ಆರೋಪಿಗಳಿಂದ 117 ಕೋಟಿ ಮೌಲ್ಯದ 6261 ಕೆ.ಜಿ.ಯಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅದರಲ್ಲಿ ಗಾಂಜಾ- 6074.685 ಕೆ.ಜಿ, ಗಾಂಜಾ ಆಯಿಲ್ 5.5 ಕೆ.ಜಿ, ಬ್ರೌನ್ ಷುಗರ್-2.554 ಕೆ.ಜಿ, ಅಫೀಮು-15.689 ಕೆ.ಜಿ, ಎಂ.ಡಿ.ಎಂ.ಎ-52.689 ಕೆ.ಜಿ, ಸಿಂಥೆಟಿಕ್ ಡ್ರಗ್ಸ್ 109.914 ಕೆ.ಜಿ, 3406 ವಿವಿಧ ರೀತಿಯ ಮಾತ್ರೆಗಳು ಹಾಗೂ 1372 ಎಲ್‍ಎಸ್‍ಡಿ ಸ್ಟ್ರಿಪ್ ಗಳು ಸೇರಿವೆ ಎಂದು ಹೇಳಿದರು.
ಪ್ರಸ್ತುತ ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಡ್ರಗ್ಸ್ ಡಿಸ್ಪೋಸಲ್ ಕಮಿಟಿಗೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಂದ 2117.568 ಕೆ.ಜಿ. ಯಷ್ಟು ಮಾದಕ ವಸ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇವುಗಳಲ್ಲಿ 2053.486 ಕೆ.ಜಿ. ಗಾಂಜಾ, 1.392 ಕೆ.ಜಿ. ವೀಡ್ ಆಯಿಲ್, 9.232 ಕೆ.ಜಿ. ಹಾಶಿಷ್ ಆಯಿಲ್, 23 ಗ್ರಾಂ ಬ್ರೌನ್ ಷುಗರ್, 12.278 ಕೆ.ಜಿ. ಅಫೀಮು, 9.325 ಕೆ.ಜಿ. ಚರಸ್, 568 ಗ್ರಾಂ ಕೊಕೈನ್, 13 ಗ್ರಾಂ ಹೆರಾಯಿನ್, 5.353 ಕೆ.ಜಿ. ಎಂ.ಡಿ.ಎಂ.ಎ, 290 ಎಂ.ಡಿ.ಎಂ.ಎ ಮಾತ್ರೆಗಳು, 137 ಎಕ್ಸಟೆಸಿ ಮಾತ್ರೆಗಳು, 931 ಗ್ರಾಂ ಎಕ್ಸಟೆಸಿ ಮಾತ್ರೆಗಳು, 654 ಗ್ರಾಂ ಮೆತಾಕ್ವೆಲಾನ್, 13 ಗ್ರಾಂ ಎಲ್.ಎಸ್.ಡಿ ಸ್ಟ್ರಿಪ್ಸ್ ಹಾಗೂ 93 ಎಲ್.ಎಸ್.ಡಿ. ಸ್ಟ್ರಿಪ್ ಗಳು ಹಾಗೂ 24.300 ಕೆ.ಜಿ. ಎಸ್ಕಾಫ್ ಸಿರಪ್ ಇತ್ಯಾದಿ ಮಾದಕ ವಸ್ತುಗಳನ್ನು ಹಸ್ತಾಂತರಿಸಲಾಗಿದೆ. ಸುಮಾರು 21 ಕೋಟಿ ರೂಗಳಾಗಿದ್ದು, ಅವುಗಳನ್ನು ನಾಶಪಡಿಸಲು ನ್ಯಾಯಾಲಯದಿಂದ ಆದೇಶವನ್ನು ಪಡೆದು ವೈಜ್ಞಾನಿಕವಾಗಿ ಭಸ್ಮಕ ಯಂತ್ರದಲ್ಲಿ ಸುರಿದು ನಾಶಪಡಿಸಲಾಗಿದೆ ಎಂದು ತಿಳಿಸಿದರು.
ಕಾಯ್ದೆ ಬಗ್ಗೆ ಅರಿವು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ದರ್ಜೆಯ ಪೊಲೀಸ್ ಅಧಿಕಾರಿಗಳು ಅಂದರೆ ನಗರ ಪೊಲೀಸ್ ಆಯುಕ್ತರಿಂದ ಪೊಲೀಸ್ ಉಪ ನಿರೀಕ್ಷಕರನ್ನು ಒಳಗೊಂಡಂತೆ, ಒಟ್ಟು 618 ಅಧಿಕಾರಿಗಳು, 388 ಶಾಲೆ, 253 ಕಾಲೇಜು ಹಾಗೂ 51 ವೃತ್ತಿನಿರತ ಕಾಲೇಜುಗಳಿಗೆ ಇಂದು ಭೇಟಿ ನೀಡಿ, ಸುಮಾರು 1,95 ಲಕ್ಷ ವಿದ್ಯಾರ್ಥಿಗಳಿಗೆ ಮಾದಕ ವಸ್ತು ದ್ರವ್ಯಗಳ ಸೇವನೆಯಿಂದ ಆಗುವ ಹಾನಿ ಹಾಗೂ ಎನ್.ಡಿ.ಪಿ.ಎಸ್ ಕಾಯ್ದೆ ಬಗ್ಗೆ ಅರಿವು ಮೂಡಿಸಿದ್ದಾರೆ.
ನಗರ ಪೊಲೀಸರು ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ಸಮರ ಸಾರಿ ಡ್ರಗ್ಸ್ ಮಾರಾಟ ಮಾರಾಟಗಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವುದಕ್ಕೆ ದಾಖಲಿಸಿರುವ ಪ್ರಕರಣಗಳೇ ಸಾಕ್ಷಿಯಾಗಿವೆ
ಆಸ್ತಿ ಮಟ್ಟುಗೋಲು: ಡ್ರಗ್ಸ್ ಮಾರಾಟದಿಂದ ಜೀವನ ಸಾಗಿಸುತ್ತಿದ್ದ ಹವ್ಯಾಸಿ ಮಾರಾಟಗಾರರ ಬಗ್ಗೆ ಮಾಹಿತಿ ಕಲೆ ಹಾಕಿ ಇಬ್ಬರು ವಿರುದ್ಧ ಮಾದಕ ವಸ್ತು ಕಾಯ್ದೆಯಡಿಯಲ್ಲಿ, ಸೂಕ್ತ ಕಾನೂನು ಕ್ರಮಕೈಗೊಂಡು ಸದರಿಯವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ರೀತಿಯಾಗಿ ಹವ್ಯಾಸಿ ಮಾದಕ ವಸ್ತುಗಳ ಮಾರಾಟಗಾರರ ಬಗ್ಗೆ ಕ್ರೋಢೀಕರಿಸಿದ ಮಾಹಿತಿಯನ್ನೊಳಗೊಂಡ ಒಂದು ದತ್ತಾಂಶ ಸಂಗ್ರಹಣೆಯ ಬಿಪಿಸಿ ಎನ್ ಡಿಪಿಎಸ್ ಪೋರ್ಟಲ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ಬಿಪಿಸಿ ಎನ್ ಡಿಪಿಎಸ್ ಪೋರ್ಟಲ್ ನಿಂದ ನಗರದ ಪೊಲೀಸರಿಗೆ ಅವಶ್ಯಕವಾದ ಮಾಹಿತಿ ಅವರ ಅಂಗೈಯಲ್ಲೇ ದೊರಕುವಂತಾಗಿದೆ. ಅಲ್ಲದೇ ಈ ದಿನ ಮಾದಕವಸ್ತು ಮಾರಾಟಗಾರರ ಬಗ್ಗೆ ಹೆಚ್ಚು ಮಾಹಿತಿದೊರಕುವಂತೆ ಮಾಡಿರುವ ಒಂದು ಪೋರ್ಟಲ್‍ನ್ನು ಅನಾವರಣ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಪ್ರತಿಜ್ಞೆ: ಈ ದಿನ ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ನಗರದಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ತಮ್ಮ ಕೈಜೊಡಿಸಿ ಅಂತರ್ಜಾಲದ ಮೂಲಕ ಸೇ ಎಸ್ ಟು ಲೈಫ್ ನೋಟು ಡ್ರಗ್ಸ್ ಎಂಬ ಪ್ರತಿಜ್ಞೆ ಧ್ಯೇಯವಾಕ್ಯದೊಂದಿಗೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕರಿಸಲು ಕೋರಿದೆ. ಈ ಕಾರ್ಯಕ್ಕೆ ಸಹಕರಿಸಿದ ಸಾರ್ವಜನಿಕರಿಗೆ ಅಂತರ್ಜಾಲದ ಮೂಲಕ ಪ್ರಮಾಣ ಪತ್ರವನ್ನು ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.




