ನಿದ್ದೆಯಿಂದ ಎಚ್ಚರಗೊಳ್ಳಿ ಅಣ್ಣಾ ಹಜಾರೆಯವರೇ!

3 years ago

ಡಾ. ಮನಮೋಹನ್ ಸಿಂಗ್‌ರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸ್ವಯಂ ಕಲ್ಪಿತ ಲಕ್ಷಾಂತರ ಕೋಟಿಗಳ ಸುಳ್ಳಿನ ಸರಮಾಲೆಗಳ ಹಗರಣದ ಕಥೆಗಳನ್ನು ಇಟ್ಟುಕೊಂಡು ಬಿ.ಜೆ.ಪಿ ಮತ್ತು ಆರ್.ಎಸ್‌.ಎಸ್‌. ಪ್ರೇರಿತ ಭ್ರಷ್ಟಚಾರದ ವಿರೋಧಿ ಹೋರಾಟ ಜನಲೋಕಪಾಲ್ ಮಸೂದೆಯ ಅನುಷ್ಠಾನಕ್ಕಾಗಿ ಸತ್ಯಾಗ್ರಹ ನಡೆಸಿ, ಮನಮೋಹನ್ ಸಿಂಗ್‌ರವರ ಸರ್ಕಾರ ಪತನವಾಗಿ ಮೋದಿರವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಿದ್ರೆಗೆ ಜಾರಿರುವ ಅಣ್ಣಾ ಹಜಾರೆರವರು ಕಳೆದ ಒಂಭತ್ತು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರದ ಯಾವುದೇ ಹಗರಣಗಳ ಬಗ್ಗೆಯೂ ತುಟಿ ಬಿಚ್ಚದೆ ನಿದ್ರೆಗೆ ಜಾರಿದ್ದಾರೆ.

ಇವರು ಮತ್ತೊಮ್ಮೆ ನಿದ್ರೆಯಿಂದ ಎಚ್ಚರಗೊಳ್ಳುವುದು ಬಿ.ಜೆ.ಪಿಯೇತರ ಸರ್ಕಾರಗಳ ವಿರುದ್ಧ, ಸಂಭಾಷಣೆ ಮತ್ತು ದೃಶ್ಯಾವಳಿಗಳು ಎಲ್ಲವೂ ಸಿದ್ಧವಾದ ಮೇಲೆ ಮೇಲೆದ್ದು ಹೋರಾಟಕ್ಕೆ ಧುಮುಕುವ ಸಾಧ್ಯತೆಗಳಿವೆಯೇನೋ.

ಒಂಭತ್ತು ವರ್ಷದ ಅವಧಿಯಲ್ಲಿ ಕೇಂದ್ರದ ಬಿ.ಜೆ.ಪಿ. ಸರ್ಕಾರದ ವಿರುದ್ಧ ಅನೇಕ ಹಗರಣಗಳು ಮತ್ತು ಜನ ವಿರೋಧಿ ನೀತಿಗಳು ಜನರನ್ನು ಬಾಧಿಸುತ್ತಲೇ ಇದೆ. ಆಗಲೂ ಅಣ್ಣಾ ಹಜಾರೆರವರು ಎಚ್ಚರಗೊಳ್ಳಲಿಲ್ಲ. ಒಂದೇ ಒಂದು ಮೊಕದ್ದಮೆ ಜನಲೋಕಪಾಲ್ ಮಸೂದೆಯ ಅಡಿಯಲ್ಲಿ ದಾಖಲಾಗಿಲ್ಲ. ಯಾರೊಬ್ಬರೂ ಶಿಕ್ಷೆಗೆ ಗುರಿಯಾಗಲಿಲ್ಲ. ಅಂದ ಮಾತ್ರಕ್ಕೆ ಭ್ರಷ್ಟಾಚಾರ ರಹಿತವಾದ ಆಡಳಿತ ತುಂಬಿ ಜನತೆ ಆನಂದದಿದ್ದಾರೆ ಎಂದು ಅಣ್ಣಾ ಹಜಾರೆರವರು ಭಾವಿಸಿರಬೇಕು.

ಈ ಹಿಂದೆ ಪಿ.ವಿ. ನರಸಿಂಹರಾಯರ ಕಾಲದಲ್ಲಿ ಷೇರು ಹಗರಣವಾದಾಗ ಬಿ.ಜೆ.ಪಿ.ಯವರು ಬಾಯಿ ಬಾಯಿ ಬಡಿದುಕೊಂಡು ರಸ್ತೆಯ ಮೇಲೆಲ್ಲ ಉರುಳಾಡಿದರು. ಈಗ ಅದಾನಿ ಎಂಬ ಮಹಾಶಯನ ಲಕ್ಷಾಂತರ ಕೋಟಿ ರೂಪಾಯಿಗಳ ಷೇರು ಹಗರಣದ ಕಥೆ ಬಯಲಾಗಿ ದೇಶದ ಸಂಸ್ಥೆಗಳಾದ ಎಲ್.ಐ.ಸಿ ಮತ್ತು ಎಸ್.ಬಿ.ಐ ತನ್ನ ಬಂಡಾವಳವನ್ನು ಇಲ್ಲಿ ಹೂಡಿ ಆತಂಕದ ಪರಿಸ್ಥಿತಿಯಲ್ಲಿದ್ದಾರೆ. ಇದಕ್ಕೆ ತೇಪೆ ಹಾಕುವ ಸಲುವಾಗಿ ವಿತ್ತ ಸಚಿವರು ಯಾವುದೇ ರೀತಿಯ ಆತಂಕವಿಲ್ಲವೆಂದು ಸಿದ್ಧಪಡಿಸಿದ ಉತ್ತರವನ್ನು ಕೊಟ್ಟಿದ್ದಾರೆ. ಎರಡುವರೆ ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಅದಾನಿಗೆ ನೀಡಿರುವಂತಹ ಕೇಂದ್ರ ಸರ್ಕಾರ ಇದರ ಬಗ್ಗೆ ಬಾಯಿ ಬಿಡುತ್ತಿಲ್ಲ. ಪ್ರಧಾನಿಯವರಿಗಂತೂ ಇಂತಹ ವಿಚಾರದಲ್ಲಿ ಮಾತನಾಡಲು ಪುರುಸೊತ್ತಿಲ್ಲ. ಹಲವಾರು ರಾಜ್ಯಗಳ ಚುನಾವಣಾ ಪ್ರಚಾರದ ಒತ್ತಡದಲ್ಲಿದ್ದಾರೆ.

ಇನ್ನು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರಿಗೆ ಅದಾನಿಯ ಷೇರು ಹಗರಣದ ಕಥೆ ದೇಶದ ಲಕ್ಷಾಂತರ ಜನರ ಬಂಡಾವಳವಿರುವ ಎಲ್.ಐ.ಸಿ ಮತ್ತು ಎಸ್.ಬಿ.ಐ ಬ್ಯಾಂಕ್‌ಗಳ ಪರಿಸ್ಥಿತಿಯ ಅರಿವಿಲ್ಲವೇನೋ?

ದಯಮಾಡಿ ಅಣ್ಣಾ ಹಜಾರೆರವರು ನಿದ್ದೆಯಿಂದ ಎದ್ದು ಅದಾನಿಯ ಅದ್ವಾನದ ವಿರುದ್ಧ ಕೇಂದ್ರ ಸರ್ಕಾರದ ಬೇಜವಾಬ್ದಾರಿತನದ ವಿರುದ್ಧ ಹೋರಾಟ ಮಾಡುತ್ತೀರೋ ಅಥವಾ ಮತ್ತೊಮ್ಮೆ ಕೇಂದ್ರದಲ್ಲಿ ಬಿ.ಜೆ.ಪಿಯೇತರ ಸರ್ಕಾರ ಬರುವ ತನಕ ನಿದ್ದೆಯಲ್ಲಿಯೇ ಇರುತ್ತೀರೋ?

– ಕೆ.ಎಸ್‌. ನಾಗರಾಜ್, ಬೆಂಗಳೂರು

Leave a Reply