ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ತಳಮಳ: ಬಂಡೆದ್ದ ಹಿರಿಯ ನಾಯಕರು

3 years ago

ದೆಹಲಿ/ಬೆಂಗಳೂರು: ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಅಳೆದು ತೂಗಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಟಿಕೆಟ್ ಹಂಚಿಕೆ ಪೂರ್ಣಗೊಳಿಸಿರುವ ಹೈಕಮಾಂಡ್ ಗೆ ಹೊಸ ತಲೆನೋವು ಶುರುವಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಡಿಸಿಎಂಗಳಾದ ಕೆ.ಎಸ್.ಈಶ್ವರಪ್ಪ, ಲಕ್ಷ್ಮಣ ಸವದಿ, ಮಾಜಿ ಸ್ಪೀಕರ್ ಕೆ.ಜೆ.ಬೋಪಯ್ಯ, ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ಸಚಿವರಾದ ಬಿ.ಸಿ.ನಾಗೇಶ್, ಗೋವಿಂದ ಕಾರಜೋಳ, ಶಾಸಕರಾದ ರವಿ ಸುಬ್ರಮಣ್ಯ ಸೇರಿದಂತೆ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಜೊತೆಗೆ, ಸಚಿವ ಆರ್.ಅಶೋಕ್, ಶಾಸಕರಾದ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ತಿಪ್ಪಾರೆಡ್ಡಿ, ವೀರಣ್ಣ ಚರಂತಿಮಠ, ಸಿದ್ದು ಸವದಿ ಮತ್ತು ಇತರ ಸುಮಾರು 35 ಶಾಸಕರು, ಸಚಿವರು ಮೊದಲಾದ ನಾಯಕರಿಗೆ ಟಿಕೆಟ್ ತಪ್ಪುವ ಸಾಧ್ಯತೆಗಳು ನಿಚ್ಚಳವಾಗಿವೆ. ಕರಾವಳಿಯಲ್ಲಿ ಹಾಲಿ 4 ಶಾಸಕರಿಗೆ ಟಿಕೆಟ್ ಕೊಡದಿರಲು ಪಕ್ಷ ನಿರ್ಧರಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತರಾಗಿರುವುದಾಗಿಯೂ ತಮಗೆ ಎಲ್ಲಿಯೂ ಟಿಕೆಟ್ ನೀಡದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಇನ್ನು ಹೈಕಮಾಂಡ್ ನಾಯಕರು ಪಕ್ಷ ನಿರಾಕರಿಸಿರುವ ವಿಷಯವನ್ನು ದೂರವಾಣಿ ಮೂಲಕ ತಿಳಿಸಿದ ನಂತರ ಪ್ರತಿಕ್ರಿಯಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ತಾವು ಇನ್ನೂ 10 ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಹೈಕಮಾಂಡ್ ಗೆ ತಿಳಿಸಿರುವುದಾಗಿ ಹೇಳಿದರು. ಇನ್ನು ಲಕ್ಷ್ಮಣ ಸವದಿಯವರು ತಮ್ಮ ಪುತ್ರನನ್ನು ಅಥಣಿಯಲ್ಲಿ ಪಕ್ಷದ ಅಭ್ಯರ್ಥಿ ಮಹೇಶ್ ಕುಮಟಳ್ಳಿ ವಿರುದ್ಧ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಎಸ್.ಸುರೇಶ್ ಕುಮಾರ್, ಕೆ.ಜೆ.ಬೋಪಯ್ಯ ಸೇರಿದಂತೆ ಇತರ ನಾಯಕರ ನಡೆ ಕುತೂಹಲ ಮೂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಯುವಕರಿಗೆ ಜಾಗ ಮಾಡಿಕೊಡುವ ಸಲುವಾಗಿ ಹಿರಿಯರು ನಿವೃತ್ತಿ ಮೂಲಕ ಅವಕಾಶ ಮಾಡಿಕೊಡಬೇಕು. ಇದು ಬಿಜೆಪಿಯ ಸಂಸ್ಕೃತಿ ಎಂದರು. ಈ ಮೂಲಕ ಹೈಕಮಾಂಡ್ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಇದೀಗ ಬಿಜೆಪಿ ಕರ್ನಾಟಕದ ಪ್ರಬಲ ಸಮುದಾಯಗಳಾಗಿರುವ ಲಿಂಗಾಯತ, ವಿರಶೈವ, ಪಂಚಮಸಾಲಿ, ಬ್ರಾಹ್ಮಣ, ದಲಿತ, ಒಬಿಸಿ ಸಮುದಾಯಗಳ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈಗಾಗಲೇ ಪಂಚಮಸಾಲಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹಂಚಿಕೆ ಗೊಂದಲ, 40% ಭ್ರಷ್ಟಾಚಾರ ಆರೋಪ, ಪಿಎಸ್.ಐ ಹಗರಣ, ಸಹಾಯಕ ಪ್ರಾಧ್ಯಾಪಕ ನೇಮಕ ಹಗರಣ, ಮಾಡಾಳ್ ವಿರುಪಾಕ್ಷಪ್ಪ ಲಂಚ ಪ್ರಕರಣ ಮೊದಲಾದ ಹಗರಣಗಳು ಮತ್ತು ಹಿಂದು – ಮುಸ್ಲಿಂ ವಿಭಜನೆ, ಬೆಲೆ ಏರಿಕೆ ನಿಯಂತ್ರಣದಲ್ಲಿ ವೈಫಲ್ಯ, ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳ ಈಡೇರಿಕೆಯಲ್ಲಿ ವೈಫಲ್ಯಗಳ ಮೂಲಕ ಮುಖಭಂಗಕ್ಕೆ ಗುರಿಯಾಗಿದ್ದ ಬಿಜೆಪಿ ಮತ್ತು ಅದರ ನಾಯಕರು ಇದೀಗ ಬಹುತೇಕ ಎಲ್ಲ ಸಮುದಾಯಗಳ ವಿರೋಧವನ್ನು ಎದುರಿಸಿ ಚುನಾವಣೆ ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿದಂತಾಗಿದೆ.

ಒಟ್ಟಿನಲ್ಲಿ ಗುಜರಾತ್ ಮತ್ತು ಇತರ ರಾಜ್ಯಗಳಲ್ಲಿ ಹಲವು ಪ್ರಯೋಗ ನಡೆಸಿ ಯಶಸ್ಸುಗಳಿಸಿರುವ ಬಿಜೆಪಿ ಇದೀಗ ಕರ್ನಾಟಕದಲ್ಲಿ ಕೂಡ ಇದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಆದರೆ ಕರ್ನಾಟಕದಲ್ಲಿ ಈ ಪ್ರಯೋಗ ಯಶಸ್ವಿಯಾಗುತ್ತದೆಯೇ ಎಂದು ತಿಳಿಯಲು ಮೇ 13ರವರೆಗೆ ಕಾಯಬೇಕಿದೆ.

Leave a Reply