ಕೇಂದ್ರದ ಆದೇಶದ ಕಾರಣಕ್ಕೆ ಲಸಿಕೆ ಅಭಿಯಾನ ಮಾಡಬೇಕಿತ್ತಾ?: ಎಸ್.ಆರ್.ಪಾಟೀಲ್

5 years ago

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಯ ತೀವ್ರ ಅಭಾವವಿದೆ. 45 ವರ್ಷ ಮೇಲ್ಪಟ್ಟವರಿಗಾಗಲೀ, 60 ವರ್ಷ ಮೇಲ್ಪಟ್ಟವರಿಗಾಗಲೀ ವ್ಯಾಕ್ಸಿನ್ ಸಿಗುತ್ತಿಲ್ಲ. ಇಂಥಾ ಸಂದರ್ಭದಲ್ಲಿ @BJP4Karnataka  ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಅಭಿಯಾನಕ್ಕೆ ಇಂದು ಚಾಲನೆ ನೀಡಿದೆ. ಲಸಿಕೆಯ ದಾಸ್ತಾನೇ ಇಲ್ಲದಿರುವಾಗ ಅಭಿಯಾನ ಎನ್ನುವುದೇ ಹಾಸ್ಯಾಸ್ಪದ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

18 ವರ್ಷದ ಮೇಲ್ಪಟ್ಟವರಿಗೆ ಇಂದಿನಿಂದ ಕೊರೊನಾ ಲಸಿಕೆಗೆ ಚಾಲನೆ ಸಿಗಬೇಕಿತ್ತು. ಆದರೆ, ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಬಾರದಿರುವ ಹಿನ್ನೆಲೆಯಲ್ಲಿ ಇದು ಅನಿರ್ದಿಷ್ಟಾವಧಿಗೆ ಮುಂದೆ ಹೋಗಿದೆ. ಈ ಕುರಿತು ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ಸುಧಾಕರ್, ಲಸಿಕೆ ಕಾರ್ಯಕ್ರಮವನ್ನು ಮುಂದೂಡಿರುವ ಸಂಗತಿಯನ್ನು ಹೇಳಿದ್ದರು. ಆದರೆ, ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ 3ನೇ ಹಂತದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಎಸ್.ಆರ್.ಪಾಟೀಲ್, ಮೇ 1 ರಿಂದ 18 ವರ್ಷ ಮೇಲ್ಪಟವರಿಗೆ ಲಸಿಕೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ಸುಳ್ಳು ಹೇಳಿದೆ. ಕರ್ನಾಟಕದಲ್ಲಿ ಕೇವಲ 3 ರಿಂದ 4 ಲಕ್ಷ ಲಸಿಕೆಯ ದಾಸ್ತಾನಿದೆ. ಲಸಿಕಾ ಕೇಂದ್ರಗಳಿಗೆ 45 ವರ್ಷ ಮೇಲ್ಪಟ್ಟವರು ಬಂದು ಬರಿಗೈಲಿ ವಾಪಸ್ ಆಗುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ @BSYBJP ಅವರು ಲಸಿಕಾ ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನೀಡಿದ್ದಾರೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಆದೇಶ ಮಾಡಿದೆ ಅನ್ನೋ ಒಂದೇ ಕಾರಣಕ್ಕೆ @BJP4Karnataka ಸರ್ಕಾರ ಲಸಿಕೆ ಅಭಿಯಾನ ಮಾಡಬೇಕಿತ್ತಾ? 18 ವರ್ಷ ಮೇಲ್ಪಟ್ಟವರು ಮೇ 3ನೇ ವಾರದವರೆಗೂ ಲಸಿಕಾ ಕೇಂದ್ರಗಳಿಗೆ ಬರಬೇಡಿ ಎಂದು ಆರೋಗ್ಯ ಸಚಿವ @mla_sudhakar ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ಲಸಿಕೆ ಅಭಾವವಿಲ್ಲ ಎನ್ನುತ್ತಿದ್ದಾರೆ. ಯಾರನ್ನು ನಂಬುವುದು? ಎಂದು ಅವರು ಪ್ರಶ್ನಿಸಿದ್ದಾರೆ.

Leave a Reply