ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆ ಅನುಷ್ಠಾನಕ್ಕೆ 39,121.46 ಕೋಟಿ: ಸಿದ್ದರಾಮಯ್ಯ

2 years ago

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ ಸಿ ಎಸ್ ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿ ಎಸ್ ಪಿ) ಅಡಿಯಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು 39,121.46 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ರಾಜ್ಯ ಅಭಿವೃದ್ಧಿ ಪರಿಷತ್ ಅನುಮೋದಿಸಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೋಜನೆಗಳು, ಅನುದಾನ ಹಾಗೂ ಕಳೆದ ವರ್ಷದ ಬಳಕೆಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಎಸ್ಸಿಎಸ್ಪಿ ಅಡಿಯಲ್ಲಿ 27,673.96 ಕೋಟಿ ಮತ್ತು ಟಿಎಸ್ಪಿ ಅಡಿಯಲ್ಲಿ 11,447.51 ಕೋಟಿ ವೆಚ್ಚ ಮಾಡಲಾಗುವುದು. ಕಳೆದ ವರ್ಷಕ್ಕೆ ಹೋಲಿಸಿದರೆ 3,900 ಕೋಟಿಯಷ್ಟು ಹೆಚ್ಚಿನ ವೆಚ್ಚ ಮಾಡಲಾಗುತ್ತದೆ ಎಂದರು.

ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲು 91 ಕೋಟಿ ಒದಗಿಸಲಾಗಿದೆ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಲು ತರಬೇತಿ ಪಡೆಯಲು ದೆಹಲಿಗೆ ಹೋಗುವ ಈ ಸಮುದಾಯಗಳ ಅಭ್ಯರ್ಥಿಗಳಿಗೆ ನೀಡುತ್ತಿದ್ದ ಮಾಸಿಕ ಪ್ರೋತ್ಸಾಹಧನವನ್ನು 10,000ದಿಂದ 15,000ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಅಭ್ಯರ್ಥಿಗಳಿಗಾಗಿ ದೆಹಲಿಯಲ್ಲೇ ಒಂದು ವಸತಿ ನಿಲಯ ನಿರ್ಮಿಸುವುದಕ್ಕೂ ಒಪ್ಪಿಗೆ ನೀಡಲಾಗಿದೆ ಎಂದರು.

ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನದಲ್ಲಿ 14,282 ಕೋಟಿಯನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ವೆಚ್ಚ ಮಾಡಲಾಗುವುದು ಎಂದರು.

ಕಾಯ್ದೆ ಜಾರಿಯಾಗಿ ಹತ್ತು ವರ್ಷಗಳಾಗಿದೆ. ಈ ಅವಧಿಯಲ್ಲಿ ಪರಿಶಿಷ್ಟರಿಗೆ ಶೇಕಡ 65ರಷ್ಟು ಅನುಕೂಲವಾಗಿದೆ ಎಂಬ ವರದಿ ಸಮೀಕ್ಷೆಯಲ್ಲಿ ಬಂದಿದೆ. ಮುಂದೆ ಪ್ರತಿ ಕುಟುಂಬವನ್ನೂ ಸಂಪರ್ಕಿಸಿ ಮಾಹಿತಿ ಸಂಗ್ರಹಿಸುವ ಪ್ರಸ್ತಾವವಿದೆ ಎಂದರು.

ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನ ಬಳಕೆಯಲ್ಲಿ ಲೊಪ ಎಸಗುವವರು, ಅನುದಾನ ಬಳಸದೇ ಉಳಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಮಂಡಳಿ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅಡಿ ನಿಗದಿ ಮಾಡಲಾದ ಅನುದಾನ ಆಯಾ ವರ್ಷವೇ ಖರ್ಚು ಮಾಡಬೇಕು. ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಿಗದಿಪಡಿಸಿದ ಅನುದಾನ ಆಯಾಯ ವರ್ಷವೇ ಶೇ.100ರಷ್ಟು ಖರ್ಚು ಮಾಡಬೇಕು ಎನ್ನುವ ಕಾನೂನು ಮಾಡಲಾಗಿದೆ. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಕಾನೂನು ರೂಪಿಸಲಾಗಿದೆ. ಈ ನಿಯಮವನ್ನು ಯಾರು ನಿರ್ಲಕ್ಷ್ಯಿಸಿದರೂ ಕ್ರಮ ತೆಗೆದುಕೊಳ್ಳಲಾಗುವುದು, ನಿರ್ಲಕ್ಷ್ಯಕ್ಕೆ ಕ್ಷಮೆ ಇಲ್ಲ ಎಂದರು.

ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 8,480 ಕೋಟಿ ರೂ., ಇಂಧನ ಇಲಾಖೆಗೆ 5026 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 4174 ಕೋಟಿ ರೂ., ಕಂದಾಯ ಇಲಾಖೆಗೆ 3403 ಕೋಟಿ ರೂ. , ಗ್ರಾಮೀಣಾಭಿವೃದ್ಧಿ ಇಲಾಖೆಗೆ 3163 ಕೋಟಿ ರೂ. ಒದಗಿಸಲಾಗಿದೆ. ಕಳೆದ ವರ್ಷ 35221.84 ಕೋಟಿ ರೂ. ಆಯವ್ಯಯ ಹಂಚಿಕೆಗೆ ಎದುರಾಗಿ ಶೇ. 97.23 ರಷ್ಟು ಹಣ ಬಿಡುಗಡೆಗೆಯಾಗಿದ್ದು, ಅದರಲ್ಲಿ ಶೇ. 99.64 ರಷ್ಟು ಸಾಧನೆಯಾಗಿದೆ. ಈ ಅನುದಾನ ಯಾವ ಕಾರಣಕ್ಕೂ ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಬಸಂತಪ್ಪ, ಶ್ರೀನಿವಾಸ್, ಪಿ.ಎಂ.ನರೇಂದ್ರಸ್ವಾಮಿ, ಕೃಷ್ಣಾನಾಯಕ್ ಮೊದಲಾದವರು ಹಾಜರಿದ್ದರು.

Leave a Reply