ಓಲೈಕೆ ರಾಜಕಾರಣಕ್ಕಾಗಿ ಪುನರ್ ವಸತಿ ಸೌಕರ್ಯ ಕಲ್ಪಿಸುತ್ತಿದೆ: ಬಿಜೆಪಿ

7 hours ago

ಬೆಂಗಳೂರು: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಒತ್ತುವರಿ ಆರೋಪದಲ್ಲಿ ತೆರವುಗೊಳಿಸಲಾಗಿದ್ದ ವಲಸಿಗರಿಗೆ ಮತ್ತೆ ವಸತಿ ಸೌಕರ್ಯ ಕಲ್ಪಿಸಿ ಕೊಡುವ ನಿರ್ಧಾರದ ವಿರುದ್ಧ ಬಿಜೆಪಿ ಸಮರ ಘೋಷಣೆ ಮಾಡಿದೆ.

ಪಶ್ಚಿಮ ಬಂಗಾಳದ ಮೂಲಕ ದೇಶದೊಳಗೆ ನುಸುಳಿರುವ ಬಾಂಗ್ಲಾ ಮತ್ತು ರೋಹಿಂಗ್ಯಾ ಅಕ್ರಮ ವಲಸಿಗರಿಗೆ ರಾಜ್ಯ ಸರ್ಕಾರ ಕೇರಳ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಓಲೈಕೆ ರಾಜಕಾರಣಕ್ಕಾಗಿ ಪುನರ್ ವಸತಿ ಸೌಕರ್ಯ ಕಲ್ಪಿಸುತ್ತಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದರಾದ ಗೋವಿಂದ ಕಾರಜೋಳ, ಲೆಹರ್ ಸಿಂಗ್ ಸೇರಿದಂತೆ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ವಾಸವಿರುವ ಹಲವು ಬಡವರಿಗೆ ಮನೆ ಇಲ್ಲ, ಆದರೆ, ಪರ ರಾಜ್ಯದ ಜನರಿಗೆ ಮನೆಗಳನ್ನು ನೀಡಲು ಸರ್ಕಾರ ಮುಂದಾಗಿದೆ ಇದು ಸರಿಯಲ್ಲ. ಕರ್ನಾಟಕ ರಾಜ್ಯದಲ್ಲಿ ಯಾರ ಸರ್ಕಾರ ನಡೆಯುತ್ತಿದೆ ಮತ್ತು ಯಾರಿಗಾಗಿ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ದೇಶದಾದ್ಯಂತ ಕೇಂದ್ರ ಚುನಾವಣಾ ಆಯೋಗ ಕೈಗೆತ್ತಿಕೊಂಡಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್‌‍ಐಆರ್‌)ಯನ್ನು ಕರ್ನಾಟಕದಲ್ಲೂ ನಡೆಸಬೇಕು. ಆಗ ನಿಜವಾದ ಮತದಾರರು ಯಾರು, ಅವರು ಎಲ್ಲಿಂದ ಬಂದವರು, ಅವರ ಹಿನ್ನೆಲೆ ಏನು ಸೇರಿದಂತೆ ಎಲ್ಲಾ ವಿವರಗಳೂ ಲಭ್ಯವಾಗುತ್ತವೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ಆದಷ್ಟು ಶೀಘ್ರ ಪತ್ರ ಬರೆದು ಮನವಿ ಮಾಡುವುದಾಗಿ ತಿಳಿಸಿದರು.

ರಾಜಧಾನಿ ಬೆಂಗಳೂರಿಗೆ ಹೊರ ರಾಜ್ಯಗಳು ಹಾಗೂ ಬೇರೆ ದೇಶಗಳಿಂದ ಬಂದು ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಹಾಗೂ ಪಡಿತರ ಚೀಟಿ ಪಡೆದುಕೊಂಡಿರುವವರನ್ನು ತಕ್ಷಣವೇ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿ ಎಂದು‌ ಆಗ್ರಹಿಸಿದರು.

ಹೊರದೇಶಗಳು ಮತ್ತು ಬೇರೆ ರಾಜ್ಯಗಳಿಂದ ಬಂದವರಿಗೆ ಕೆಲವರು ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ. ಇದು ದುರುಪಯೋಗವಾಗುವ ಸಾಧ್ಯತೆ ಇದೆ. ಹೀಗಾಗಿ ನಗರ ಪೊಲೀಸ್‌‍ ಆಯುಕ್ತರು ತಕ್ಷಣವೇ ಪರಿಶೀಲಿಸಿ ವಶಕ್ಕೆ ಪಡೆಯಬೇಕೆಂದು ಮನವಿ ಮಾಡಿದರು.

ಬೆಂಗಳೂರಿನ ಅಮೀನ್‌ಕರೆ ಹಾಗೂ ಇತರ ಪ್ರದೇಶಗಳಲ್ಲಿ ಅಕ್ರಮ ವಲಸಿಗರಿದ್ದಾರೆ. ನೀವು ಯಾವಾಗ ವಲಸಿಗರ ಪಟ್ಟಿ ಸಿದ್ಧಪಡಿಸುತ್ತೀರಿ? ಸರ್ಕಾರಗಳು ಬದಲಾಗಬಹುದು. ಆದರೆ ಅಧಿಕಾರಿಗಳು ಬದಲಾಗುವುದಿಲ್ಲ. ನೀವು ಆ ಕೆಲಸ ಮಾಡದಿದ್ದರೆ ಅಕ್ರಮ ವಲಸಿಗರು ಮತ್ತು ರೋಹಿಂಗ್ಯಾಗಳು ಬೆಂಗಳೂರು ತುಂಬಿ ಬಿಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ, ಕರ್ನಾಟಕವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇರಳಕ್ಕೆ ಮತ್ತು ಪಾಕಿಸ್ತಾನಕ್ಕೆ ಅಡಮಾನವಿಟ್ಟಿದೆ ಎಂದು ಆಪಾದಿಸಿದರು.

ಅಕ್ರಮ ವಲಸಿಗರನ್ನು ತೆರವುಗೊಳಿಸಿದ ಕರ್ನಾಟಕದ ಬಗ್ಗೆ ಪಾಕಿಸ್ತಾನದವರು ಯಾಕೆ ಮಾತನಾಡುತ್ತಾರೆ ಅವರು ಬಿಹಾರ ಮಹಾರಾಷ್ಟ್ರದ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ ಅವರು ಕರ್ನಾಟಕದ ಜಾಗವನ್ನು ಬಾಂಗ್ಲಾದೇಶದ ನಿವಾಸಿಗಳಿಗೆ ಕೊಟ್ಟಿದ್ದೀರಿ ಇದಕ್ಕಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಯಭಾರಿ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ಸಿನ ಪ್ರಾಯೋಜನೆಯೊಂದಿಗೆ ಅಕ್ರಮ ವಲಸಿಗರು ಪ್ರಕರಣ ಸೃಷ್ಟಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನವೀಯತೆ ದೃಷ್ಟಿಯಿಂದ ಈ ಪ್ರಕರಣ ನೋಡುವುದಾಗಿ ಹೇಳುತ್ತಾರೆ. ಆದರೆ ಇಲ್ಲಿ ನೆಲೆಸಿರುವ ಬಹುತೇಕರು ಬಾಂಗ್ಲಾ ಮತ್ತು ರೋಹಿಂಗ್ಯ ನಿವಾಸಿಗಳಾಗಿದ್ದಾರೆ. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಇವರಿಗೆಲ್ಲಾ ಉಚಿತವಾಗಿ ಸ್ವಂತ ಮನೆ ಕಟ್ಟಿಕೊಡಲಾಗುತ್ತಿದೆ ಎಂದು ಆಪಾದಿಸಿದರು

ಈ ಸರ್ಕಾರದ ಮೂಗುದಾರ ಎಲ್ಲಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಇಲ್ಲಿನ ಸರ್ಕಾರ ಹೇಗೆ ನಡೆಯಬೇಕು ಎಂದು ಕಿವಿ ಮಾತು ಹೇಳುತ್ತಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಹೀಗೆ ನಡೆಯಬೇಕು ಎಂದು ಹೇಳುತ್ತಾರೆ. ಹೀಗಿರುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ಸರ್ಕಾರಕ್ಕೆ ನೈತಿಕತೆ ಇದೆಯೇ ಎಂದು ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಟೀಕಿಸಿದರು.

ಕೋಗಿಲು ನಲ್ಲಿ ಅಕ್ರಮ ವಲಸಿಗರ ಮನೆ ತೆರವು ಮಾಡಿರುವುದು ಸ್ವಾಗತಾರ್ಹ. ಈ ಬಗ್ಗೆ ಕೇರಳದ ಸಿಎಂ, ರಾಜ್ಯಸಭಾ ಸದಸ್ಯರು ಪ್ರಶ್ನೆ ಮಾಡುತ್ತಾರೆ ಅಂದರೆ ಏನರ್ಥ. ಕೇರಳ ಚುನಾವಣೆ ಹೇಗೆ ಪರಿಣಾಮ ಬೀರುತ್ತಿದೆ. ಯುಡಿಎಫ್, ಎಲ್‌ಡಿಎಫ್ ತಮ್ಮ ಸರ್ಕಾರದ ಬಗ್ಗೆ ನಿರ್ಧಾರ ಮಾಡುತ್ತದೆ ಎದು ಆಕ್ರೋಶ ಹೊರ ಹಾಕಿದರು.

ಹೆಬ್ಬಾಳದಲ್ಲಿ ನೆಲೆ ನಿಂತ ಅಕ್ರಮ ವಲಸಿಗರ ಬಗ್ಗೆ ನಾನು ಹಿಂದೆ ಸರ್ಕಾರದ ಗಮನ ಸೆಳೆದಿದ್ದೆ. ಸಚಿವ ಜಮೀರ್ ಅಹಮದ್ ಖಾನ್ ಅವರು, ರಾಜ್ಯದಲ್ಲಿ ಎಷ್ಟು ಜನರಿಗೆ ವೋಟರ್ ಐಡಿ ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಟ್ಟಿದ್ದಾರೆ ಹೇಳಲಿ. ಇವರೆಲ್ಲಾ ಸೇರಿಕೊಂಡು ಕರ್ನಾಟಕದ ಜಿಯಾಗ್ರಫಿಯನ್ನು ಬದಲಿಸಲು ಹೊಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಹೀಗೂ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ಹತ್ತು ವರ್ಷ ಹಿಂದೆ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ದೊಡ್ಡ ಗುಂಪು ಬಂದು ಇಳಿದದ್ದನ್ನು ನಾವು ಪ್ರಶ್ನೆ ಮಾಡಲು ಹೋದಾಗ ಅಲ್ಲಿಗೆ ಬಂದ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ತಮ್ಮ ಬಸ್‌ನಲ್ಲಿ ಕರೆದೊಯ್ದರು. ಬಾಂಗ್ಲಾದಿಂದ ಬಂದಿದ್ದವರನ್ನು ಜಮೀರ್ ಅಹಮದ್ ಖಾನ್ ಇಲ್ಲಿ ಸೆಟಲ್ ಮಾಡಿದ್ದಾರೆ. ಈ ಬಗ್ಗೆಯೂ ತನಿಖೆ ಆಗಬೇಕು ಎಂದರು.

Leave a Reply