ರಾಷ್ಟ್ರೀಯ ಹೋರಾಟವೊಂದನ್ನು ಕುಳಿತವರು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿತು

3 years ago

ʼಏಸೂರ ಕೊಟ್ಟರೂ ಈಸೂರ ಕೊಡೆವು:

ಭಾರತವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವ ಹೊತ್ತಿಗೆ ದೆಹಲಿ ಕರ್ನಾಟಕ ಸಂಘವೂ ೭೫ ವರ್ಷದ ಹುಟ್ಟು ಹಬ್ಬವನ್ನು ಆಚರಿಸುತ್ತಿದೆ. ಇದರ ಅಂಗವಾಗಿ ನಿನ್ನೆ ಸಂಘದಲ್ಲಿ ಶಿವಮೊಗ್ಗದ ಹೊಂಗಿರಣ ತಂಡವು ʼಏಸೂರ ಕೊಟ್ಟರೂ ಈಸೂರ ಕೊಡೆವುʼ ನಾಟಕವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿತು.

ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿರುವ ಡಾ. ಸಾಸ್ವೆಹಳ್ಳಿ ಸತೀಶರು ರಚಿಸಿ ನಿರ್ದೇಶಿಸಿದ ಈ ನಾಟಕವು ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಲ್ಲಿ ನಡೆದ ವಿಶಿಷ್ಟ ರಾಷ್ಟ್ರೀಯ ಹೋರಾಟವೊಂದನ್ನು ಕುಳಿತವರು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿತು. ೧೯೪೭ಕ್ಕೂ ಪೂರ್ವದಲ್ಲಿ ಅನೇಕ ಪ್ರಾಂತೀಯ ಹೋರಾಟಗಳು ನಡೆದಿದ್ದು ಅವುಗಳ ಸಂಖ್ಯೆಯು ನೂರಕ್ಕೂ ಹೆಚ್ಚು ಎಂದು ಈ ಕುರಿತು ಸಂಶೋಧನೆ ನಡೆಸಿರುವ ಡಾ. ಕ್ಯಾಥಲೀನ್ ಗಾಫ್ ಹೇಳಿದ್ದಾರೆ. ಪ್ರಾಂತೀಯ ಹೋರಾಟಗಳಲ್ಲಿ ಭೂಸಂಬಂಧವುಳ್ಳ ಎಲ್ಲ ವರ್ಗದ ರೈತರು, ಭೂಮಿ ಕಳೆದುಕೊಂಡ ಪಾಳೆಯಗಾರರು, ಜಮೀನ್ದಾರರು, ಮೂಲೆಗುಂಪಾದ ರಾಜ ವಂಶಜರು, ದಿವಾಳಿ ಎದ್ದ ರೈತರು, ಸಾಂಪ್ರದಾಯಕ ಕೈ ಕಸಬುಗಳನ್ನು ಕಳೆದುಕೊಂಡವರು, ಬಿಟ್ಟಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು, ಧರ್ಮ ಗುರುಗಳು ಹಾಗೂ ಆದಿವಾಸಿ ಮುಖಂಡರು ಭಾಗವಹಿಸಿದ್ದಾರೆ. ರಾಷ್ಟ್ರೀಯ ಪ್ರಜ್ಞೆಯು ಇನ್ನೂ ಗಟ್ಟಿಯಾಗಿ ಹುಟ್ಟಿಕೊಂಡಿರದ ೧೮ನೇ ಶತಮಾನದ ಆ ಪ್ರಾಂತೀಯ ಹೋರಾಟಗಳಿಗಿಂತ ೧೯೪೨ರಲ್ಲಿ ನಡೆದ ಈಸೂರು ಹೋರಾಟ ಭಿನ್ನವಾದುದು. ಇದು ನಡೆಯುವ ಹೊತ್ತಿಗೆ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಹೋರಾಟಕ್ಕೆ ರಾಷ್ಟ್ರೀಯ ಆಯಾಮ ದೊರೆತಿತ್ತು. ಇದರಿಂದಾಗಿ ಇತರ ಪ್ರಾಂತೀಯ ಹೋರಾಟಗಳಲ್ಲಿ ಕಂಡು ಬರುತ್ತಿದ್ದ ಗಾಢವಾದ ಸ್ಥಳೀಯ ಸಮಸ್ಯೆಗಳು ʼಏಸೂರ ಕೊಟ್ಟರೂ ಈಸೂರ ಕೊಡೆವುʼ ನಾಟಕದಲ್ಲಿ ಕಂಡು ಬರುವುದಿಲ್ಲ.
ಶಿವಮೊಗ್ಗ ಜಿಲ್ಲೆಯ ಪುಟ್ಟ ಊರಾದ ಈಸೂರಿನಲ್ಲಿ ನಡೆದ ಹೋರಾಟವು ಮಹಾತ್ಮ ಗಾಂಧಿಯವರ ʼಭಾರತ ಬಿಟ್ಟು ತೊಲಗಿʼ ಘೋಷಣೆಯಿಂದ ನೇರವಾಗಿ ಪ್ರಭಾವಿತವಾಗಿದೆ. ಈಸೂರಿನ ಸುಮಾರು ೨೦೦ ಜನರು ಗಾಂಧೀಜಿಯ ಕರೆಗೆ ಓಗೊಟ್ಟು ತಾಳ್ಮೆಯಿಂದಲೇ ಸ್ವಾತಂತ್ರ್ಯ ಚಳವಳಿ ಸುರು ಮಾಡಿದ್ದರು. ಸರ್ಕಾರಕ್ಕೆ ಕೊಡಬೇಕಾಗಿದ್ದ ತೆರಿಗೆಯನ್ನು ಕೊಡದೆ ಅಸಹಕಾರ ತೋರಿದರು. ಸರ್ಕಾರಿ ಅಧಿಕಾರಿಗಳಿಗೆ, ಶಾಲೆಗಳಿಗೆ, ಕಚೇರಿಗಳಿಗೆ ಧಿಕ್ಕಾರ ಘೋಷಿಸಿದರು. ೧೯೪೨ ಸಪ್ಟಂಬರ ೨೫ರಂದು ಸರ್ಕಾರದ ಅಧಿಕಾರವನ್ನು ಧಿಕ್ಕರಿಸಿ ಈಸೂರನ್ನು ʼಸ್ವತಂತ್ರ ಹಳ್ಳಿ ʼ ಎಂದು ಸಾರಿದರು. ಮಕ್ಕಳನ್ನು ಮುಂದಿಟ್ಟುಕೊಂಡು ತಮ್ಮದೇ ಆದ ಸರ್ಕಾರ ರಚಿಸಿಕೊಂಡರು. ಅಧಿಕಾರಿಗಳೂ ಊರೊಳಗೆ ಪ್ರವೇಶಿಸಬೇಕಾದರೆ ಗಾಂಧೀ ಟೋಪಿ ಹಾಕಬೇಕೆಂಬ ಅವರ ಒತ್ತಾಯವು ಗಾಂಧೀ ಮಾದರಿಯ ಹೋರಾಟಕ್ಕೆ ಅತ್ಯುತ್ತಮವಾದ ಸಂಕೇತವಾಗಿದೆ. ಆದರೆ ಈ ಸ್ವಾತಂತ್ರ್ಯ ಅವರಿಗೆ ದಕ್ಕಿದ್ದು ಕೇವಲ ಮೂರು ದಿವಸ. ೧೯೪೨ ಸೆಪ್ಟೆಂಬರ್ ೨೮ರಂದು ಪೋಲೀಸ್‌ ಅಧಿಕಾರಿಗಳೊಡನೆ ನಡೆದ ಸಂಘರ್ಷದಲ್ಲಿ ಗ್ರಾಮಸ್ಥರು ಅಮಲ್ದಾರ ಚನ್ನಕೃಷ್ಣಪ್ಪ ಮತ್ತು ಪೋಲೀಸ್‌ ಅಧಿಕಾರಿ ಕೆಂಚೇಗೌಡನನ್ನು ಸಾಯಿಸಿದರು. ಹೋರಾಟವು ಹಿಂಸೆಗೆ ತಿರುಗುತ್ತಲೇ ಸಹಜವಾಗಿ ಹಿನ್ನಡೆಯನ್ನು ಕಂಡಿತು. ಸರ್ಕಾರದ ವಿರುದ್ಧ ಬಂಡೆದ್ದವರೆಂದು ೪೧ ಮಂದಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಯಿತು. ತ್ವರಿತವಾಗಿ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು ೧೯೪೩ ಜನವರಿ 9ರಂದು, ಗುರಪ್ಪ, ಮಲ್ಲಪ್ಪ, ಸೂರ್ಯನಾರಾಯಣಾಚಾರಿ, ಬಿ. ಹಾಲಪ್ಪ ಮತ್ತು ಜಿ. ಶಂಕರಪ್ಪ ಇವರಿಗೆ ಮರಣದಂಡನೆ ವಿಧಿಸಿತು. ಚಾರಿತ್ರಿಕವಾಗಿ ಈ ಐವರನ್ನೂ ಬೇರೆ ಬೇರೆ ದಿನಗಳಲ್ಲಿ ಗಲ್ಲಿಗೇರಿಸಲಾಯಿತಾದರೂ ನಾಟಕದಲ್ಲಿ ಅವರೆಲ್ಲ ಒಂದೇ ದಿನ ಗಲ್ಲಿಗೇರಿಸುವಂತೆ ಕೇಳುವುದನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ.
೪೦ ಜನ ಕಲಾವಿದರಿದ್ದ ಹೊಂಗಿರಣ ತಂಡವು ಇತಿಹಾಸದ ಘಟನೆಗಳನ್ನು ಬಹಳ ಅಚ್ಚುಕಟ್ಟಾಗಿ ರಂಗದಲ್ಲಿ ತೋರಿಸಿತು. ನಿರ್ದೇಶಕ ಸಾಸ್ವೆಹಳ್ಳಿ ಸತೀಶರು ಇಡೀ ಊರನ್ನೇ ನಾಯಕ ಸ್ಥಾನದಲ್ಲಿರಿಸಿ, ಯಾವುದೇ ಒಂದು ಪಾತ್ರ ಹೆಚ್ಚು ಬೆಳೆಯದ ಹಾಗೆ ನೋಡಿಕೊಂಡಿದ್ದಾರೆ. ಹಾಗಾಗಿಯೇ ನಾಟಕ ಮುಗಿಯುವ ಹೊತ್ತಿಗೆ ಪ್ರೇಕ್ಷಕರೆಲ್ಲ ʼಏಸೂರ ಕೊಟ್ಟರೂ ಈಸೂರ ಕೊಡೆವುʼ ʼ ಅಂತ ಘೋಷಣೆ ಕೂಗುವಂತಾಯಿತು.

-ಪ್ರೊ. ಪುರುಷೋತ್ತಮ ಬಿಳಿಮಲೆ, ಜಾನಪದ ವಿದ್ವಾಂಸರು

Leave a Reply