ಬೆಂಗಳೂರು: ಅರಣ್ಯ ಭೂಮಿ ಮತ್ತು ಕಂದಾಯ ಭೂಮಿ ಒಡೆತನದ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ವಿವಾದಿತ ಪ್ರದೇಶಗಳಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ಅರಣ್ಯ ಭೂ ಒತ್ತುವರಿಯನ್ನು ತಡೆಹಿಡಿಯಬೇಕಿದೆ. ಮತ್ತೊಂದು ಕಡೆ ಬಡ ಜನರು ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿರುವ ಕಡೆ ಸಣ್ಣ ಹಿಡುವಳಿ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲೂ ಚಿಂತನೆ ನಡೆಸಬೇಕಿದೆ ಎಂದರು
ಕೆಲವು ಭೂ ಪ್ರದೇಶಗಳ ಮಾಲಿಕತ್ವದ ಕುರಿತು ದಾಖಲೆಗಳಲ್ಲಿ ಒಮ್ಮೆ ಅರಣ್ಯ ಪ್ರದೇಶ ಎಂದು ನಮೂದಾಗಿದ್ದರೆ ಅದನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಯಾರ ಹಸ್ತಕ್ಷೇಪವೂ ನಡೆಯುವುದಿಲ್ಲ. ಅರಣ್ಯ ಭೂಮಿ ವಿವಾದವನ್ನು ಇತ್ಯರ್ಥಪಡಿಸಲು ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸಮೀಕ್ಷೆಯೇ ಪರಿಹಾರವಾಗಿದೆ ಎಂದು ಹೇಳಿದರು.
ವಿಧಾನಸಭೆ ಅಧಿವೇಶನದ ಬಳಿಕ ಕಂದಾಯ ಇಲಾಖೆಯೊಂದಿಗೆ ಸಭೆ ನಡೆಸಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. 3 ರಿಂದ 6 ತಿಂಗಳಳೊಳಗೆ ಸಮೀಕ್ಷೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಭೂಮಾಪಕತೆ ಕೊರತೆ ನೀಗಿಸಲು ಖಾಸಗಿ ಸರ್ವೆಗಳ ನೆರವು ಪಡೆಯಲಾಗುವುದು ಎಂದು ತಿಳಿಸಿದರು.
ಈಗಾಗಲೇ ಅರಣ್ಯ ಭೂ ವಿವಾದಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಪ್ರಕರಣಗಳು ನ್ಯಾಯಾಲಯದ ಮುಂದಿವೆ. ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದವರೆಗೂ ತಗಾದೆಗಳಿವೆ. ಹೀಗಾಗಿ ಸಮೀಕ್ಷೆಯನ್ನು ನಿಖರವಾಗಿ ನಡೆಸಬೇಕಿದೆ. ಆಧುನಿಕ ತಂತ್ರಜ್ಞಾನ ಬಳಸಿ ಸರ್ವೆ ಮಾಡಬಹುದಾಗಿದ್ದರೂ ತಗಾದೆಗಳ ಇತ್ಯರ್ಥಕ್ಕೆ ಅನುಕೂಲವಾಗುವಂತೆ ಹಾಗೂ ಕರಾರುವಕ್ಕಾದ ಸಮೀಕ್ಷೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಅರಣ್ಯಾಭಿವೃದ್ಧಿ ಯೋಜನೆಯಡಿ ಕಳೆದ 5 ವರ್ಷಗಳಿಂದಲೂ ನೆಟ್ಟಿರುವ ಸಸಿಗಳ ಪ್ರಮಾಣ ಮತ್ತು ಅವುಗಳ ಉಳಿಯುವಿಕೆಯ ಬಗ್ಗೆ ಆಡಿಟ್ ನಡೆಸಲು ನಿರ್ಧರಿಸಲಾಗಿದೆ. ಸಾಮಾನ್ಯವಾಗಿ ಅರಣ್ಯೋತ್ಸವದಲ್ಲಿ ನೆಡಲಾಗುವ ಸಸಿಗಳಲ್ಲಿ ಶೇ.50ರಷ್ಟು ಉಳಿದುಕೊಳ್ಳುತ್ತಿವೆ ಎಂಬ ಮಾಹಿತಿ ಇದೆ. ಇದನ್ನು ಶೇ.80ಕ್ಕೆ ಹೆಚ್ಚಿಸುವುದು ನಮ್ಮ ಆದ್ಯತೆ. ಚಿಕ್ಕಮಗಳೂರಿನಂತ ಜಿಲ್ಲೆಗಳಲ್ಲೇ ಅರ್ಧದಷ್ಟು ಮಾತ್ರ ಸಸಿಗಳು ಉಳಿದುಕೊಳ್ಳುತ್ತಿವೆ ಎಂಬುದು ಆತಂಕಕಾರಿ. ಇನ್ನು ಬಯಲುಸೀಮೆ ಪರಿಸ್ಥಿತಿ ಚಿಂತೆಗೀಡು ಮಾಡಿದೆ. ಮುಂದಿನ ದಿನಗಳಲ್ಲಿ ಸಸಿ ನೆಟ್ಟ ಜಾಗವನ್ನು ಜಿಯೊ ಟ್ಯಾಗ್ ಮೂಲಕ ಸ್ಪಷ್ಟವಾಗಿ ಗುರುತಿಸಿ ರಕ್ಷಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿತ್ತು. 335 ಹುದ್ದೆಗಳ ನೇಮಕಾತಿಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ರೆಸಾರ್ಟ್ , ಹೋಂಸ್ಟೇ ಸೇರಿದಂತೆ ಯಾವುದೇ ರೀತಿಯ ಅಕ್ರಮ ಒತ್ತುವರಿಗೆ ಅವಕಾಶ ನೀಡುವುದಿಲ್ಲ ಅರಣ್ಯ ರಕ್ಷಣೆ ನಮ್ಮ ಆದ್ಯತೆ ಎಂದು ಹೇಳಿದರು.




