ವಿಧಾನಸಭಾ ಚುನಾವಣೆಗೆ ಸಲ್ಲಿಸಿದ್ದ 3,044 ಮಂದಿಯ ನಾಮಪತ್ರಗಳು ಸ್ವೀಕೃತವಾಗಿವೆ

3 years ago

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಅಖಾಡ ಸಜ್ಜುಗೊಂಡಿದ್ದು, ಕಣದಲ್ಲಿ 3000ಕ್ಕೂ ಅಧಿಕ ಮಂದಿ ಅಭ್ಯರ್ಥಿಗಳಿದ್ದಾರೆ ಎಲ್ಲಾ ಪಕ್ಷಗಳಿಗೂ ಬಂಡಾಯ ಅಭ್ಯರ್ಥಿಗಳು ಕಾಡುತ್ತಿದ್ದಾರೆ. ಇವರನ್ನು ಕಣದಿಂದ ಹಿಂದೆ ಸರಿಸಲು ಪ್ರಯತ್ನಗಳು ಆರಂಭವಾಗಿವೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 220 ಕ್ಷೇತ್ರಗಳಲ್ಲಿ ನಾಮಪತ್ರಗಳ ಪರಿಶೀಲನೆ ಮುಗಿದಿದ್ದು, 3,044 ಮಂದಿಯ ನಾಮಪತ್ರಗಳು ಸ್ವೀಕೃತವಾಗಿವೆ. 406 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ

ಚುನಾವಣೆಯಲ್ಲಿ ಆಯ್ಕೆ ಬಯಸಿ ರಾಜ್ಯದ 224 ಕ್ಷೇತ್ರಗಳಲ್ಲಿ ಒಟ್ಟು, 5,102 ನಾಮಪತ್ರಗಳನ್ನು ಸಲ್ಲಿಸಿದ್ದರು. ಶುಕ್ರವಾರ ಇವುಗಳ ಪರಿಶೀಲನೆ ನಡೆಯಿತು. ಕೆಲವು ಅಭ್ಯರ್ಥಿಗಳ ನಾಮಪತ್ರಗಳಿಗೆ ಸಂಬಂಧಿಸಿ ತಕರಾರು ಸಲ್ಲಿಕೆಯಾಗಿರುವುದರಿಂದ ಅವುಗಳ ಪರಿಶೀಲನೆ ಕಾರ್ಯ ವಿಳಂಬವಾಗಿದೆ.

220 ಕ್ಷೇತ್ರಗಳಲ್ಲಿ ಪುರುಷರಿಂದ 4,607, ಮಹಿಳೆಯರಿಂದ 381 ಮತ್ತು ಲೈಂಗಿಕ ಅಲ್ಪಸಂಖ್ಯಾತರಿಂದ ಒಂದು ನಾಮಪತ್ರ ಸಲ್ಲಿಕೆಯಾಗಿದ್ದವು. ಬಿಜೆಪಿಯ 219, ಕಾಂಗ್ರೆಸ್‌ನ 218, ಜೆಡಿಎಸ್‌ ಮತ್ತು ಆಮ್‌ ಆದ್ಮಿ ಪಕ್ಷದ ತಲಾ 207, ಬಹುಜನ ಸಮಾಜ ಪಕ್ಷದ 135, ಸಿಪಿಎಂನ ನಾಲ್ವರು ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕೃತವಾಗಿವೆ.

Leave a Reply