ಬೆಂಗಳೂರು: ‘ BJP Karnataka ಸರ್ಕಾರದ ನಿಷ್ಕ್ರೀಯತೆ, ಸಚಿವರುಗಳ ಅಸಾಮರ್ಥ್ಯ, ರೈತರಿಗೆ ಎಸಗುತ್ತಿರುವ ಅನ್ಯಾಯಗಳು ಸಚಿವ ಮಾಧುಸ್ವಾಮಿಯವರ ಮೂಲಕ ಬಯಲಾಗಿದೆ. ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವುದು ಭ್ರಷ್ಟಾಚಾರದ ಮ್ಯಾನೇಜ್ಮೆಂಟ್ ಮಾತ್ರ. Basavaraj Bommai ಅವರ ನಿಷ್ಕ್ರೀಯ ಆಡಳಿತಕ್ಕೆ, ರೈತರಿಗಾಗುತ್ತಿರುವ ಅನ್ಯಾಯಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಎಂದು ಕೆಪಿಸಿಸಿ ಪ್ರಶ್ನಿಸಿದೆ.
ಕಾನೂನು ಸಚಿವ ಮಾಧುಸ್ವಾಮಿ ಮತ್ತು ಇನ್ನೊಬ್ಬ ವ್ಯಕ್ತಿಯ ಮಾತುಕತೆ ಎಂದು ಹೇಳಲಾಗಿರುವ ಆಡಿಯೋ ಕ್ಲಿಪಿಂಗ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೆಪಿಸಿಸಿ,’ತಳ್ಳಿದರೆ ಸಾಕು ಇನ್ನೆಂಟು ತಿಂಗಳು ಅಂತ ತಳ್ತಾ ಇದೀವಿ ಅಷ್ಟೇ’ ಇದು ಸಚಿವ ಮಾಧುಸ್ವಾಮಿಯವರ ಅಸಹಾಯಕತೆಯೋ, ತಮ್ಮದೇ ಸರ್ಕಾರದ ವಿರುದ್ದದ ಆರೋಪವೋ? ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಡಳಿತದ ವಿರುದ್ಧದ ಅಸಮಾಧಾನವೊ? ಕೆಟ್ಟು ನಿಂತಿರುವ ‘ಡಬಲ್ ಇಂಜಿನ್’ ಸರ್ಕಾರವನ್ನು ತಳ್ಳಿಕೊಂಡು ಹೋಗುವ ದೈನೇಸಿ ಸ್ಥಿತಿಗೆ ಬಂದಿರುವುದು ದುರಂತ! ಎಂದಿದೆ.
ರೈತರಿಗೆ ಅಷ್ಟೇ ಅಲ್ಲ, ಸ್ವತಃ ಕಾನೂನು ಸಚಿವರಿಗೆ ಸಹಕಾರಿ ಬ್ಯಾಂಕುಗಳಲ್ಲಿ ವಂಚನೆಯಾಗುತ್ತಿರುವುದು ಸರ್ಕಾರದ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಸಹೋದ್ಯೋಗಿ ಸಚಿವರಿಂದಲೇ ಮಾಹಿತಿ ಸಿಕ್ಕರೂ ಲೋಪ ಸರಿಪಡಿಸದ ಸಹಕಾರಿ ಸಚಿವರಿಂದ ರೈತರಿಗೆ ಇನ್ಯಾವ ನ್ಯಾಯ ಸಿಗಬಲ್ಲದು? ಎಂದು ಪ್ರಶ್ನಿಸಿದೆ.
ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದರೂ ಇನ್ನೂ ಟೇಕಾಫ್ ಆಗದ BJP Karnataka ಪಕ್ಷದ ಡಬಲ್ ಇಂಜಿನ್‌ನನ್ನು ಈಗ ತಳ್ಳಲಾಗುತ್ತಿದೆ! ಎಂದಿದೆ.




