ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ: ಡಾ.ಕೆ.ಸುಧಾಕರ್

4 years ago

ಚಿಕ್ಕಬಳ್ಳಾಪುರ: ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ದುಷ್ಕರ್ಮಿಗಳ ಮೇಲೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ ನೀಡಿದರು.

ಚಿಕ್ಕಬಳ್ಳಾಪುರದಲ್ಲಿ ಕರಾವಳಿ ಘಟನೆಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೇವಲ ಭರವಸೆಯಲ್ಲ, ಬದಲಿಗೆ ಎಷ್ಟು ತ್ವರಿತವಾಗಿ ಕ್ರಮ ಆಗಲಿದೆ ಎಂಬುದನ್ನು ನೀವು ನೋಡಲಿದ್ದೀರಿ, ಮುಖ್ಯಮಂತ್ರಿಗಳು ಮತ್ತು ಗೃಹಸಚಿವರು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ, ಎರಡು ದಿನಗಳಲ್ಲಿ ಎಲ್ಲವೂ ಹೊರ‌ಬರಲಿದೆ ಎಂದರು.

ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ಈಗಾಗಲೇ ಕೈಗೊಳ್ಳಲು ಮುಂದಾಗಿದೆ. ಇದಕ್ಕಾಗಿಯೇ ವಿಶೇಷ ಪಡೆ ನಿರ್ಮಾಣದ ಬಗ್ಗೆ ಚರ್ಚಿಸಲಾಗಿದೆ. ಶೀಘ್ರವೇ ಅಗತ್ಯ ಕ್ರಮಗಳು ಆಗಲಿದ್ದು, ರಾಜ್ಯದ ಜನರು ಕಾನೂನು ಕೈಗೆತ್ತಿಕೊಳ್ಳದೆ ಶಾಂತಿ ಕಾಪಾಡಬೇಕು. ಕರಾವಳಿಯಲ್ಲಿ ನಡೆದಿರುವ ಘಟನೆಗಳಲ್ಲಿ ಮೂಲಭೂತವಾದದ ಸಂಘಟನೆಗಳ ಕೈವಾಡ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜಿನಾಮೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜೊತೆಯಲ್ಲಿ ಕೆಲಸ ಮಾಡಿದವರು ಭಾವನಾತ್ಮಕತೆಯಿಂದಾಗಿ ರಾಜಿನಾಮೆ ನೀಡುತ್ತಿದ್ದಾರೆ. ಆದರೆ ಅವರಿಗೆ ಅರಿವಿದೆ. ಪಕ್ಷ ಅವರ ಕಡೆ ಇದೆ ಮತ್ತು ಸರ್ಕಾರ ಎಲ್ಲರ ರಕ್ಷಣೆಗೆ ಬದ್ಧವಾಗಿದೆ ಎಂದು. ಹಾಗಾಗಿ ಶೀಘ್ರವೇ ಎಲ್ಲವೂ ಸರಿಹೋಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

Leave a Reply