ಮಠ, ವಾಸುದೇವ್ ಅಂತವರಿಗೆ ಹಣ ಕೊಡುವ ಸರ್ಕಾರಕ್ಕೆ ಶಾಲೆ ನಡೆಸಲು ಸಮಸ್ಯೆ ಏನು? ಎಂಬ ಪ್ರಶ್ನೆ ಇದೀಗ ಎದುರಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪೋಷಕರಿಂದ ತಲಾ 100 ರೂ. ಸಂಗ್ರಹಿಸಲು ಸರ್ಕಾರ ಅವಕಾಶ ನೀಡಿದೆ. ಇದು ಹೊಸ ವಿವಾದಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಹೋರಾಟಗಾರರು ಮತ್ತು ಜನಸಾಮಾನ್ಯರು ಸರ್ಕಾರದ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಹೋರಾಟಗಾರರ ಬಿ.ಶ್ರೀಪಾದ ಬಟ್, ಈ ಬಿಜೆಪಿ ಸರಕಾರ ದಿನ ದಿನಕ್ಕೂ ನೈತಿಕವಾಗಿ ಪತನಗೊಳ್ಳುತ್ತಿದೆ. 40% ಕಮಿಷನ್ ಪಡೆಯುವ ಸರಕಾರ ಎಂದು ಆರೋಪವಿರುವ ಈ ಸರಕಾರ ಪತನದ ಹಾದಿಯಲ್ಲಿದೆ ಎಂದು ಕಿಡಿಕಾರಿದ್ದಾರೆ.
ಮಠಗಳಿಗೆ, ಅನುಮಾನಾಸ್ಪದ ಜಗ್ಗಿ ವಾಸುದೇವ ಮುಂತಾದವರಿಗೆ ಕೋಟಿಗಟ್ಟಲೆ ದುಡ್ಡು ಕೊಡುವ ಸರಕಾರಕ್ಕೆ ಶಾಲೆ ನಡೆಸಲು ರೊಕ್ಕವಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಈ ಮೂಲಕ ಜಗ್ಗಿ ವಾಸುದೇವ ಅವರಿಗೆ ಮತ್ತು ಮಠಮಾನ್ಯಗಳಿಗೆ ಕೋಟಿಗಟ್ಟಲೆ ಹಣ ಕೊಡುವ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.
ಶಿಕ್ಷಣಕ್ಕಾಗಿ ಸರಕಾರಿ ಶಾಲೆಗಳು ಪೋಷಕರಿಂದ ಹಣ ಸಂಗ್ರಹಿಸುವ ದಂಧೆಗೆ ಮುಂದಾಗಿರುವುದು ಕ್ರೌರ್ಯ ಮಾತ್ರವಲ್ಲ, ‘6-14ನೇ ವಯಸ್ಸಿನ ಮಕ್ಕಳಿಗೆ ಉಚಿತ ಕಡ್ಡಾಯ ಗುಣಮಟ್ಟದ ಶಿಕ್ಷಣ ಕೊಡಬೇಕು’ ಎನ್ನುವ ಪರಿಚ್ಛೇದ 21ಎ ಮತ್ತು ‘0-14ನೇ ವಯಸ್ಸಿನ ಮಕ್ಕಳಿಗೆ ಉಚಿತ ಕಡ್ಡಾಯ ಗುಣಮಟ್ಟದ ಶಿಕ್ಷಣ ಕೊಡಬೇಕು’ ಎನ್ನುವ ಪರಿಚ್ಛೇದ 45ರ ನೇರ ಉಲ್ಲಂಘನೆಯಾಗಿದೆ.
ಆರ್ ಟಿಇ ಕಾಯಿದೆ 2009ರ ಅಧ್ಯಾಯ 2ರ ಸೆಕ್ಷನ್ 3 ಮತ್ತು ಅಧ್ಯಾಯ 4ರ ಸೆಕ್ಷನ್ 12, 13ರ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಅಲ್ಲದೇ, ವಿದ್ಯಾರ್ಥಿ ಸಂಘಟನೆಗಳು ತಮ್ಮ ನಿಷ್ಕ್ರಿಯತೆಯಿಂದ ಹೊರಬರಬೇಕಾದ ತುರ್ತು ಅಗತ್ಯವಿದೆ ಎಂದು ಕರೆನೀಡಿದ್ದಾರೆ.
ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಯುವವರು ಬಡವರು, ದೀನದಲಿತರು, ಅಸಂಘಟಿತ ವಲಯಕ್ಕೆ ಸೇರಿದವರು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುತ್ತಾರೆ. ಹಣ ಕಟ್ಟಲು ಅಸಾಧ್ಯವಾದ ಕಾರಣ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಇದರ ಮೊರೆ ಹೋಗುತ್ತಾರೆ.
ತಿಂಗಳಿಗೆ 100 ರೂ.ನಂತೆ ವರ್ಷಕ್ಕೆ 1,200 ರೂ. ಆಗುತ್ತದೆ. ಇದರ ಹೊರೆಯನ್ನು ಪೋಷಕರು ಹೊರುವುದು ಕಷ್ಟ. ಇದರಿಂದ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರಬಹುದು. ಆದರೆ ಸರ್ಕಾರ ಇಂತಹ ಆಘಾತಕಾರಿ ಮತ್ತು ತಳ ಸಮುದಾಯಗಳ ವಿರುದ್ಧ ಅನಾಹುತಕಾರಿ ನಿರ್ಧಾರಗಳನ್ನು ತೆಗೆದುಕೊಂಡಂತಾಗಿದೆ. ತಕ್ಷಣ ಇದನ್ನು ಹಿಂಪಡೆಯಬೇಕು.




