ನೂತನ ರಾಷ್ಟ್ರೀಯ ಪಕ್ಷ ಉದ್ಘಾಟನೆ ಮತ್ತು ಐತಿಹಾಸಿಕ ಸಮಾವೇಶ: ಡಾ.ಎನ್.ಮೂರ್ತಿ

4 years ago

ಬೆಂಗಳೂರು: ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಇದೇ ತಿಂಗಳು 14ನೇ ತಾರೀಖು ರಾಜ್ಯ ಸನ್ಮೇಳನ ಮತ್ತು ನೂತನ ರಾಷ್ಟ್ರೀಯ ಪಕ್ಷದ ಉದ್ಘಾಟನೆ ಹಾಗೂ ಐತಿಹಾಸಿಕ ಸಮಾವೇಶವನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ಹೇಳಿದರು.

ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಮಾತಾಡಿದ ಅವರು, ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರು ಸಾಮಾಜಿಕ ನ್ಯಾಯವಿಲ್ಲ, ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳು ಶ್ರೀಮಂತರ ಪಾಲಾಗಿವೆ. ಪ್ರತಿಯೊಂದು ಕಾಮಗಾರಿಯಲ್ಲಿ ಶೇಕಡ 40ರಿಂದ 50 ಪರ್ಸೆಂಟ್ ಲಂಚ ಕೊಡಬೇಕಾದ ವಾತಾವರಣ ಸರ್ಕಾರದಲ್ಲಿದೆ. ಭ್ರಷ್ಟಚಾರ ಮುಗಿಲು ಮುಟ್ಟಿದೆ ಎಂದರು.

ಶೇಕಡ 85ರಷ್ಟು ಮತದಾರರು ಎಸ್.ಸಿ./ಎಸ್.ಟಿ.ಮತ್ತು ಓ.ಬಿ.ಸಿ.ಯವರಿದ್ದಾರೆ. ಪ್ರಾಮಾಣಿಕ ಹೋರಾಟಗಾರರು, ದೇಶ, ರಾಜ್ಯದ ಬಗ್ಗೆ ಚಿಂತನೆ ಮಾಡುವ ಪ್ರತಿಭಾವಂತರು ರಾಜಕೀಯ ಕ್ಷೇತ್ರಕ್ಕೆ ಬರಬೇಕು. ಆದ್ದರಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನೂತನ ರಾಷ್ಟ್ರೀಯ ಪಕ್ಷ ಉದಯವಾಗುತ್ತಿದೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಗೆ ನಮ್ಮ ಪಕ್ಷದಿಂದ 60 ಪ್ರಾಮಾಣಿಕ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಲ್ಲರಿಗೂ ಸಿಗಬೇಕು ಎಂದು ಹೇಳಿದರು.

Leave a Reply