1250 ಕೋಟಿ ರೂ.ಗಳ ಪ್ಯಾಕೇಜ್ ಅನುಷ್ಠಾನ ಭ್ರಮೆಯಲ್ಲವೇ?: ಎಚ್.ಡಿಕುಮಾರಸ್ವಾಮಿ

5 years ago

ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಕ್ಷಣವೇ ರಾಜ್ಯ ಸರ್ಕಾರ ಬಾಕಿ ಇರುವ ಗೌರವಧನವನ್ನು ಬಿಡುಗಡೆ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಕಪ್ಪು ಶಿಲೀಂಧ್ರದ ಚಿಕಿತ್ಸೆಗೆ ಅಗತ್ಯವಿರುವ ಔಷಧ ಪೂರೈಕೆಯಲ್ಲಿನ ಕೇಂದ್ರದ ತಾರತಮ್ಯ, ಔಷಧ ಸಂಗ್ರಹಿಸಲು ತೆಲಂಗಾಣ ಕೈಗೊಂಡ ಕ್ರಮಗಳ ಕುರಿತು 22-05-2021ರಂದು ಟ್ವೀಟ್‌ ಮಾಡಿ ಸರ್ಕಾರವನ್ನು ಎಚ್ಚರಿಸಿದ್ದೆ. ಅದು ವರದಿಯೂ ಆಗಿತ್ತು. ಅದರ ಮರುದಿನವೇ ಔಷಧ ಪೂರೈಕೆಗೆ ಸರ್ಕಾರ ಕಂಪನಿಗಳಿಂದ ದರ ಪಟ್ಟಿ ಆಹ್ವಾನಿಸಿದೆ.ಇದು ಸ್ವಾಗತಾರ್ಹ ಕ್ರಮ ಎಂದಿದ್ದಾರೆ.

ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಅಗತ್ಯವಿರುವ ಔಷಧ ಸಂಗ್ರಹಿಸಲು ಸರ್ಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡಿದೆ. ಪ್ರತಿಯೊಂದಕ್ಕೂ ಕೇಂದ್ರದತ್ತ ನೋಡದೇ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಂತೆ ನೀಡಿದ್ದ ಸಲಹೆಯನ್ನು ಸರ್ಕಾರ ಪರಿಗಣಿಸಿದೆ. ಸೂಕ್ತ ಸಮಯದಲ್ಲಿ ನೀಡಲಾಗುವ ಸೂಕ್ತ ಸಲಹೆಗಳನ್ನು ಮನ್ನಿಸುವುದು ರಾಜ್ಯದ ಹಿತದೃಷ್ಟಿಯಿಂದಲೂ ಒಳ್ಳೆಯದು ಎಂದಿದ್ದಾರೆ.

ಕೊರೋನಾ ವಾರಿಯರ್ಸ್ ಎಂದು ಬಾಯಿಮಾತಿನಲ್ಲಿ ಹೇಳಿದ ಸರ್ಕಾರ ಪ್ರತಿ ತಿಂಗಳು ಆಶಾ ಕಾರ್ಯಕರ್ತೆಯರಿಗೆ ಸಕಾಲಕ್ಕೆ ಗೌರವಧನ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ದುಡಿದವರಿಗೆ ಗೌರವಧನ ಕೊಡಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ 1250 ಕೋಟಿ ರೂ.ಗಳ ಪ್ಯಾಕೇಜನ್ನು ಅನುಷ್ಠಾನಗೊಳಿಸುತ್ತದೆ ಎಂಬುದು ಭ್ರಮೆ ಅಲ್ಲದೆ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.

ಕೊರೋನಾ ವಾರಿಯರ್ಸ್ ಎಂದು ಹಣೆಪಟ್ಟಿ ಹಚ್ಚಿದ ಸರ್ಕಾರ ಒಬ್ಬ ಆಶಾ ಕಾರ್ಯಕರ್ತೆಗೆ ಮಾತ್ರ 50 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಉಳಿದ 15 ಮಂದಿಗೆ ಪರಿಹಾರ ಕೊಟ್ಟಿಲ್ಲ. ಸರ್ಕಾರದ ಇಂತಹ ಬೇಜವಾಬ್ದಾರಿಗಳಿಂದ ಬೇಸತ್ತು ಆಶಾ ಕಾರ್ಯಕರ್ತೆಯರು ದೂರ ಉಳಿದರೆ ಕೋವಿಡ್ 19  ನಿಯಂತ್ರಣ ಕೈ ಮೀರುತ್ತದೆ. ಸರ್ಕಾರಕ್ಕೆ ಇದು ಎಚ್ಚರಿಕೆಯ ಗಂಟೆ ಕೂಡ ಎಂದಿದ್ದಾರೆ.

Leave a Reply