ಮಾನರಕ್ಷಣೆಗಾಗಿ ತಡೆಯಾಜ್ಞೆ ತರಲಾಯಿತು: ಬಿ.ಸಿ.ಪಾಟೀಲ್

3 years ago

ಬೆಂಗಳೂರು: ಮೀರ್ ಸಾಧಿಕ್ ಗಳು‌ ಮತ್ತು ನಂಬಿಕೆ ದ್ರೋಹಿ ಕೆಲವರು ತಮ್ಮ ವಿರುದ್ಧ ದೊಡ್ಡ ಸಂಚು ರೂಪಿಸಿದ್ದರು. ಈ ಸಂಚಿಗೆ ತಾವು ಬಲಿಯಾಗಬಾರದು ಎಂದು ಕೋರ್ಟ್ ಮೂಲಕ ತಡೆಯಾಜ್ಞೆ ತಂದುಕೊಳ್ಳಬೇಕಾಯಿತು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷ ಬಿಟ್ಟ  ನಾವ್ಯಾರು ವ್ಯಭಿಚಾರ ಮಾಡಿಲ್ಲ. ಆದರೆ, ನಮಗೆ ಕೆಟ್ಟ ಹೆಸರು ತರಲು ಸಿ.ಡಿ ಬಿಡುಗಡೆ ಮಾಡಿದರೆ, ಒಮ್ಮೆ ಹೋದ ಮಾನ ಮತ್ತೆ ಬರುವುದಿಲ್ಲ. ಇದರಿಂದ ರಕ್ಷಣೆ ಅಗತ್ಯವಾದ್ದರಿಂದ ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರಲಾಗಿತ್ತು ಎಂದರು.

ಮೀರ್ ಸಾಧಿಕ್‌ರಂಥ ಜನ ನಮ್ಮ ಸುತ್ತಮುತ್ತಲೇ ಇರುತ್ತಾರೆ. ಇದೇ ಬಣಕಾರ್ ನಮ್ಮ ಜೊತೆಗೆ ಇದ್ದು, ಈಗ ಕಾಂಗ್ರೆಸ್ ಸೇರಿದ್ದಾರೆ. ರಮೇಶ್ ಜಾರಕಿಹೊಳಿಯವರ ಬಗ್ಗೆ ಅನವಶ್ಯಕವಾಗಿ ಸಿಡಿ ಬಿಡುಗಡೆ ಮಾಡಿದರು. ಆದರೆ ಏನಾಯ್ತು? ಬಿ ರಿಪೋರ್ಟ್ ಆಯ್ತು. ನಾವು ನಮ್ಮ ಗೌರವ ರಕ್ಷಿಸಿಕೊಳ್ಳುವ ಕೆಲಸ ಮಾಡಲೇಬೇಕು. ಸ್ಟೇ ಅವಧಿ ಹಿಂದೆಯೇ ಮುಗಿದಿದೆ. ನಂತರವಾದರೂ ಸಿಡಿ ಬಿಡುಗಡೆ ಮಾಡಬಹುದಿತ್ತಲ್ಲ ಎಂದರು.

ನಾವು 17 ಮಂದಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ರಚನೆಯಾಗಿದ್ದಕ್ಕೆ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿತು. ಇದಕ್ಕಾಗಿ ಅವರು ನಮಗೆ ಅಭಿನಂದನೆ ತಿಳಿಸಬೇಕು ಎಂದರು.

ಯು.ಬಿ.ಬಣಕಾರ ಅವರ ಧಮ್‌, ತಾಕತ್ತನ್ನು ಮೂರು ಬಾರಿ ನೋಡಿ ಆಗಿದೆ. ನನಗೆ ಧಮ್ ಇರೋದಕ್ಕೆ ಅವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ, ಒಂದು ಕಾರು, ರಾಜ್ಯ ಸಚಿವ ದರ್ಜೆ ಸ್ಥಾನಮಾನ ಬಂದಿತ್ತು. ಧಮ್‌, ತಾಕತ್ತಿನ ಮೇಲೆ ಚುನಾವಣೆ ನಡೆಯಲ್ಲ, ಅಭಿವೃದ್ಧಿ ಮೇಲೆ ಚುನಾವಣೆ ನಡೆಯುತ್ತದೆ. ಅವರು ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಪುಸ್ತಕ ಬಿಡುಗಡೆ ಮಾಡಲಿ. ಆಗ ಒಪ್ಪಿಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.

Leave a Reply