ರಾಜ್ಯದ ನೆಲ, ಜಲ‌ ಮತ್ತು ಭಾಷೆ ವಿಚಾರದಲ್ಲಿ ರಾಜಿ ಇಲ್ಲ: ಬೊಮ್ಮಾಯಿ

3 years ago

ಬೆಳಗಾವಿ: ರಾಜ್ಯದ ನೆಲ, ಜಲ‌ ಮತ್ತು ಭಾಷೆಯ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡುವ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ನೆರೆಯ ರಾಜ್ಯದವರು ಪಾಳೆಯಗಾರರ ರೀತಿಯಲ್ಲಿ ದಂಡೆತ್ತಿ ಬರುವ ಪ್ರಯತ್ನ ಮಾಡಿದರು ಎಂದು ಆರೋಪಿಸಿದರು.

ಬೆಳಗಾವಿ ಗಡಿ ವಿವಾದ ಕುರಿತಂತೆ ಕಾಂಗ್ರೆಸ್ ನ ಎಚ್.ಕೆ.ಪಾಟೀಲ್, ಜೆಡಿಎಸ್ ನ ಬಂಡೆಪ್ಪ ಖಾಶೆಂಪುರ ಅವರ ಪ್ರಸ್ತಾಪಗಳಿಗೆ ಉತ್ತರಿಸಿದ ಅವರು ಈ ವಿಷಯವಾಗಿ ವಿಸ್ತೃತವಾದ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಗಡಿ ವಿಚಾರವಾಗಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಈ ವಿಷಯ ತಿಳಿಸಲಾಗಿದೆ. ಈ ವಿಚಾರದಲ್ಲಿ ಮಹಾರಾಷ್ಟ್ರ ಅನಗತ್ಯ ಖ್ಯಾತೆ ಮಾಡುತ್ತಿದೆ ಎಂಬ ವಿಷಯ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ನಿನ್ನೆ ಮಹಾರಾಷ್ಟ್ರದ ಕೆಲವರು ಈ ಹಿಂದೆ ಪಾಳೆಯಗಾರರು ನೆರೆ ರಾಜ್ಯದ ಮೇಲೆ ದಂಡೆತ್ತಿ ಬರುತ್ತಿದ್ದಂತೆ ಬಂದರು‌. ತಮ್ಮ ವರ್ತನೆಯಿಂದ ನೆರೆ ರಾಜ್ಯದೊಂದಿಗಿನ ಸಂಬಂಧ ಏನಾಗಲಿದೆ ಎಂಬ ವಿಷಯ ಕೂಡಾ ಗಮನಿಸಲಿಲ್ಲ ಎಂದು ‌ಬೇಸರ ವ್ಯಕ್ತಪಡಿಸಿದರು.

ಪ್ರತಿಬಾರಿ ಅಧಿವೇಶನ ನಡೆದಾಗ ಎಂಇಎಸ್ ಮಹಾ ಮೇಳಾವ್ ನಡೆಸಿ ಗೊಂದಲ ಮೂಡಿಸುತಿತ್ತು. ಈ ಬಾರಿ ಅದಕ್ಕೆ ಅವಕಾಶ ಕೊಡಲಿಲ್ಲ. ಇನ್ನು ಮುಂದೆ ಕೂಡಾ ಇದೇ ರೀತಿಯ ಕಠಿಣ ನಿರ್ಧಾರಗಳ ಮೂಲಕ ರಾಜ್ಯದ ಹಿತ ಕಾಪಾಡುತ್ತೇವೆ ಎಂದರು.

Leave a Reply