ಬೆಂಗಳೂರು: ಕೊರೊನಾ ನಿರ್ವಹಿಸುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ರಾಜ್ಯದ ಜನರಿಗೆ ಉಳಿದಿರೋ ಆಶಾಕಿರಣ ಅಂದ್ರೆ ಅದು ಕರ್ನಾಟಕ ಹೈಕೋರ್ಟ್ ಮಾತ್ರ. ಕೊರೊನಾ ಸಂದಿಗ್ಧ ಕಾಲದಲ್ಲಿ ಜನರ ಪರ ನಿಂತಿರುವ ನ್ಯಾಯಾಂಗ ವ್ಯವಸ್ಥೆಗೆ ನನ್ನ ಅನಂತ ಗೌರವ ಸೂಚಿಸುತ್ತೇನೆ ಎಂದು ವಿಧಾನಪರಿಷತ್ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ನಿನ್ನೆ ಲಾಕ್ ಡೌನ್ ಘೋಷಿಸಿದ ನಂತರ ಜನರ ಮೇಲೆ ರಾಜ್ಯದ ವಿವಿಧೆಡೆ ಲಾಠಿಚಾರ್ಜ್ ಮಾಡಲಾಗಿತ್ತು. ಈ ವಿಷಯದಲ್ಲಿ ವಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಎಸ್.ಆರ್.ಪಾಟೀಲ್, ಕರ್ನಾಟಕಕ್ಕೆ ಆಕ್ಸಿಜನ್ ಕೊಡಲು ಹಿಂದೇಟು ಹಾಕಿದ ಕೇಂದ್ರದ @BJP4India ಸರ್ಕಾರಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಕೊಡುವಂತೆ ತಾಕೀತು ಮಾಡಿತ್ತು ಕರ್ನಾಟಕ ಹೈಕೋರ್ಟ್. ಸುಪ್ರೀಂ ಕೋರ್ಟ್ ನಲ್ಲಿ ಹೈಕೋರ್ಟ್ ಆದೇಶಕ್ಕೆ ತಡೆ ತರಲು @narendramodi ಸರ್ಕಾರ ಪ್ರಯತ್ನಿಸಿದರೂ ಹೈಕೋರ್ಟ್ ನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು ಎಂದಿದ್ದಾರೆ.
ಕರ್ನಾಟಕದಲ್ಲಿ ಉಂಟಾಗಿರುವ ತೀವ್ರ ವ್ಯಾಕ್ಸಿನ್ ಕೊರತೆಯ ಬಗ್ಗೆ ಹೈಕೋರ್ಟ್ ಇಂದು ತೀವ್ರ ಕಳವಳ ವ್ಯಕ್ತಪಡಿಸಿದೆ. ತುರ್ತಾಗಿ ವ್ಯಾಕ್ಸಿನೇಶನ್ ಅಭಿಯಾನ ಹೆಚ್ಚಿಸಲು ಕ್ರಮ ಕೈಗೊಳ್ಳದಿದ್ದರೆ ಇಡೀ ಅಭಿಯಾನವೇ ವಿಫಲವಾಗಲಿದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಸರ್ಕಾರದ ಪ್ರತೀ ವೈಫಲ್ಯಗಳನ್ನು ಎತ್ತಿ ಹಿಡಿಯುತ್ತಿರುವುದು ಶ್ಲಾಘನೀಯ ಎಂದಿದ್ದಾರೆ.
ಪೊಲೀಸರು ಸಾರ್ವಜನಿಕರನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿ ಲಾಕ್ ಡೌನ್ ಜಾರಿ ಮಾಡಲು ಲಾಠಿ ಚಾರ್ಜ್ ಮಾಡುವಂತಿಲ್ಲ ಎಂದು ಆದೇಶ ಮಾಡಿದೆ. ಪೊಲೀಸ್ ರಾಜ್ಯವನ್ನಾಗಿ ಮಾಡಲು ಹೊರಟಿದ್ದ ರಾಜ್ಯ ಸರ್ಕಾರಕ್ಕೆ ಕೋರ್ಟ್ ಆದೇಶ ಪಾಠವಾಗಲಿ ಎಂದು ಹೇಳಿದ್ದಾರೆ.



