ಬೆಂಗಳೂರು: ನೆನಪಿರಲಿ ಖ್ಯಾತಿಯ ಪ್ರೇಮ್ ಮಗಳು ಚಿತ್ರರಂಗಕ್ಕೆ ಟಗರು ಪಲ್ಯ ಚಿತ್ರದ ಮುಖಾಂತರ ಎಂಟ್ರಿ ಕೊಡ್ತಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಅಮೃತ ಪ್ರೇಮ್ ಸಿನಿ ಜರ್ನಿ ಪ್ರಾರಂಭಿಸಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಅಮೃತ ಪ್ರೇಮ್ ಲುಕ್ ಗಮನ ಸೆಳೆಯುತ್ತಿದೆ.
ನಿರ್ದೇಶಕ ಉಮೇಶ್ ಕೆ. ಕೃಪ ಸಿನಿಮಾಗೆ ಹೊಸ ಮುಖದ ಹುಡುಕಾಟದಲ್ಲಿದ್ದೆವು. ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಪುತ್ರಿ ಭೇಟಿಯಾದಾಗ ಈ ಸಿನಿಮಾ ಬಗ್ಗೆ ಹೇಳಿದೆ. ಕಥೆ ಇಷ್ಟವಾಗಿ ಸಿನಿಮಾ ಮಾಡಲು ಒಪ್ಪಿಕೊಂಡರು. ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರವನ್ನು ಅಮೃತ ಪ್ರೇಮ್ ನಿರ್ವಹಿಸುತ್ತಿದ್ದಾರೆ ಎಂದರು.
ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ನಟ ನೆನಪಿರಲಿ ಪ್ರೇಮ್ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಒಬ್ಬ ನಟನಾಗಿ ಮಗಳು ಚಿತ್ರರಂಗಕ್ಕೆ ಬರುತ್ತಿರೋದು ಸಂತಸ ತಂದಿದೆ. ಆಕೆ ಓದುವುದರಲ್ಲೂ ಡಿಸ್ಟಿಂಕ್ಷನ್, ಈಗ ನಟಿಯಾಗಿ ಸಿನಿಮಾಗೂ ಬರುತ್ತಿದ್ದಾಳೆ. ಚಿತ್ರದ ಪಾತ್ರಕ್ಕಾಗಿ ಹಲವು ದಿನಗಳಿಂದ ಸಿದ್ಧತೆ ನಡೆಸುತ್ತಿದ್ದಾಳೆ. ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಕಥೆ ಕೇಳಿದ ಮೇಲೆ ಬೇಡ ಎನ್ನಲಾಗಲಿಲ್ಲ. ಕನ್ನಡ ಜನತೆ ಆಕೆಗೆ ಪ್ರೀತಿ ಪ್ರೋತ್ಸಾಹ ನೀಡಿ ಬೆಳಸಬೇಕು ಎಂದರು.
ಟಗರು ಪಲ್ಯ ಸಿನಿಮಾ ಹಲವು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು, ಇಕ್ಕಟ್ ಖ್ಯಾತಿಯ ನಾಗಭೂಷಣ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತ ನಿರ್ದೇಶನ, ಎಸ್.ಕೆ.ರಾವ್ ಅವರ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಅವರ ಸಾಹಸ ನಿರ್ದೇಶನವಿದೆ.




