ʼಕಾಶ್ಮೀರಿ ಫೈಲ್ಸ್ʼ ಸಿನೇಮಾವು ಹುಟ್ಟು ಹಾಕಿದ ವಿವಾದಗಳು ಇವತ್ತಿನ ರಾಜಕೀಯಕ್ಕೆ ಅನುಗುಣವಾಗಿದೆಯೇ ವಿನಾ ಕಲಾಕೃತಿಯೊಂದರ ಅನನ್ಯತೆಯ ಕುರಿತಾಗಿಲ್ಲ. ಈ ಸಿನೇಮಾದ ನಿರ್ದೇಶಕ ವಿವೇಕ ಅಗ್ನಿಹೋತ್ರಿಯು ೨೦೧೮ರಷ್ಟುಹಿಂದೆಯೇ ʼಅರ್ಬನ್ ನಕ್ಸಲ್ʼ ಎಂಬ ಕಲ್ಪಿತ ಪದವನ್ನು ಹುಟ್ಟು ಹಾಕಿ ಭಕ್ತ ಗಣಗಳು ಹಾಗೂ ಬಿಜೆಪಿಯ ಹಲವರಿಗೆ ಇದ್ದಕ್ಕಿದ್ದಂತೆ ಹತ್ತಿರವಾದ. ಈ ಪದವನ್ನು ಚಾಲ್ತಿಗೆ ತರುವುದರ ಮೂಲಕ ತಾನು ಯಾವುದೇ ಬೌದ್ಧಿಕ ಚಟುವಟಿಕೆಗಳಿಗೆ ವಿರುದ್ಧವಾಗಿದ್ದೇನೆ ಏಂಬುದನ್ನು ಆತ ಸ್ವಯಂ ಘೋಷಿಸಿದ. ಇದಾದ ಆನಂತರ ವಿಶ್ವದ ಯಾವುದೇ ಚಿಂತಕರು ಆತನನನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದರೆ ಇವತ್ತಿನ ಭಾರತದ ರಾಜಕೀಯದ ಕಣ್ಣಲ್ಲಿ ಆತ ಒಬ್ಬ ʼಮಹಾನ್ ಕಲಾಕಾರ ಮತ್ತು ಚಿಂತಕʼ. ಅವನಿಗೆ ಅವನದ್ದೇ ಸಾಕಷ್ಟು ಬೆಂಬಲಿಗರೂ ಇದ್ದಾರೆ. ಅವನ ಸಿನೇಮಾವು ಸಾಕಷ್ಟು ಹಣ ಮಾಡಿದೆ. ಬಿಜೆಪಿ ಸರಕಾರಗಳೂ ಅವನ ಬೆಂಬಲಕ್ಕೆ ನಿಂತವು. ಆದರೆ ಇವರ್ಯಾರೂ ಕಲಾವಿಮರ್ಶಕರಲ್ಲ ಎಂಬುದನ್ನು ಮರೆಯದಿರೋಣ. ಅಗ್ಗದ ಜನಪ್ರಿಯತೆಯು ಕಲಾ ವಿವೇಕಕ್ಕೊಂದು ಮಾನದಂಡವಲ್ಲ. ವಿವೇಕ ಅಗ್ನಿಹೋತ್ರಿ ಇವತ್ತು ಜನಪ್ರಿಯನಾಗಿರುವುದು ಹೌದಾದರೂ ತನ್ನದೇ ಸಿನೇಮಾದ ಬಗ್ಗೆ ಅಪ್ರಬುದ್ಧತೆಯಿಂದ ಮಾತಾಡಿ ನಗೆಪಾಟಲಿಗೆ ಗುರಿಯಾಗಿದ್ದಾನೆ. ತಾನು ಮಾಡಿದ್ದೇ ಸರಿ, ಅದರ ವಿರುದ್ಧ ಯಾರೂ ಧ್ವನಿ ಎತ್ತಬಾರದು, ಎತ್ತಿದವರಿಗೆ ಏನೂ ಗೊತ್ತಿಲ್ಲ, ಅವರೆಲ್ಲ ದೇಶದ್ರೋಹಿಗಳು ಎಂಬ ಮಾತುಗಳು ಕಲಾವಿದನದಲ್ಲ, ಬದಲು ಅವನೊಳಗಿನ ಒಬ್ಬ ಫ್ಯಾಸಿಸ್ಟನದು. ಇಂಥವರು ಇರುವ ಯಾವ ದೇಶದಲ್ಲಿಯೂ ಒಳ್ಳೆಯ ವಿಮರ್ಶೆ ಬರುವುದೂ ಸಾಧ್ಯವಿಲ್ಲ.
ವ್ಯಕ್ತಿಯ ಅರಿವಿನ ಮೇಲೆ ತನ್ನದೇ ಆದ ಅನನ್ಯ ರೀತಿಯಲ್ಲಿ ಪರಿಣಾಮ ಬೀರುವಂತೆ ಕಲಾಕೃತಿಯೊಂದನ್ನು ಬುದ್ದಿಪೂರ್ವಕವಾಗಿ ಕಟ್ಟಲಾಗುತ್ತದೆ. ಅದರಲ್ಲಿ ಕಲಾವಿದನು ತನ್ನ ಕೌಶಲ್ಯ ಮತ್ತು ಕಲ್ಪನೆಗಳನ್ನು ಬಳಸುವುದರಿಂದಲೇ ಅದು ʼಕಲಾಕೃತಿʼ ಆಗುತ್ತದೆ. ಸಂಗೀತ, ಸಿನೇಮಾ, ಸಾಹಿತ್ಯ, ಫೋಟೋಗ್ರಫಿ, ಶಿಲ್ಪ, ಚಿತ್ರ ಇತ್ಯಾದಿಗಳೆಲ್ಲ ಹೀಗೆ ಕಟ್ಟಲಾದ ಅತ್ಯದ್ಭುತ ಪ್ರಕಾರಗಳು. ಇವತ್ತು ಭಕ್ತರ ಕಾಮಧೇನುವಾಗಿರುವ ಶ್ರೀ ಎಸ್ ಎಲ್ ಭೈರಪ್ಪನವರೇ ಇದರ ಬಗ್ಗೆ ಸತ್ಯ ಮತ್ತು ಸೌಂದರ್ಯ (೧೯೬೬, ಪಿಎಚ್.ಡಿ ಪ್ರಬಂಧ), ಸಾಹಿತ್ಯ ಮತ್ತು ಪ್ರತೀಕ (೧೯೬೭), ಕಥೆ ಮತ್ತು ಕಥಾವಸ್ತು (೧೯೬೯) ಮೊದಲಾದ ಕೃತಿಗಳಲ್ಲಿ ಆಳವಾಗಿ ವರ್ಚಿಸಿದ್ದಾರೆ.
ಇದ್ದುದನ್ನು ಮುರಿದು ಮತ್ತೆ ಕಟ್ಟಲಾಗುವ ಪ್ರಕ್ರಿಯೆಯನ್ನೇ ಸೃಜನಶೀಲತೆ ಎಂದು ಕರೆಯುವುದು. ಈ ಸೃಜನಶೀಲ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ವಿಧಾನಗಳ ಕುರಿತು ಭಾರತೀಯ ಕಾವ್ಯಮೀಮಾಂಸೆಯಲ್ಲಿ ವಿಸ್ತಾರವಾದ ಚರ್ಚೆ ನಡೆಸಲಾಗಿದೆ. ಅದನ್ನು ವಾಸ್ತವ ಎಂಬಂತೆ ಗ್ರಹಿಸಬೇಕೋ, ಅದೊಂದು ಸರ್ವತಂತ್ರ ಸ್ವತಂತ್ರ ಸೃಷ್ಟಿ ಎಂದು ಗ್ರಹಿಸಬೇಕೋ ಅಥವಾ ಸಾಪೇಕ್ಷವಾಗಿ ಗ್ರಹಿಸಬೇಕೋ ಎಂಬುದರ ಕುರಿತು ಕಳೆದ ಶತಮಾನವಿಡೀ ಮಹಾನ್ ಚಿಂತಕರು ವಿಶ್ಲೇಷಣೆ ನಡೆಸಿದ್ದಾರೆ. ಈ ಎಲ್ಲ ಚರ್ಚೆಗಳ ನಡುವೆ ಸ್ಪಷ್ಟವಾಗುವ ಒಂದು ಅಂಶವೆಂದರೆ, ಒಂದು ಕಲಾಸೃಷ್ಟಿಯು ಅದನ್ನು ಸೃಷ್ಟಿಸಿದವನ ಉದ್ದೇಶಗಳನ್ನಷ್ಟೇ ತೋರ್ಪಡಿಸಬೇಕೆಂದೇನೂ ಇರುವುದಿಲ್ಲ. ಕಲೆಯು ಅದರಾಚೆ ಚಾಚಿಕೊಳ್ಳಬಹುದು. ಈ ಕಾರಣದಿಂದ ಕಲಾ ಸೃಷ್ಟಿಯನ್ನು ಒಂದಕ್ಕಿಂತ ಹೆಚ್ಚಿನ ರೀತಿಯಲ್ಲಿ ಆಸ್ವಾದಿಸಬಹುದು ಅಥವಾ ನಿರಾಕರಿಸಬಹುದು. ಕಲೆಗೆ ಪರಿವರ್ತಿಸುವ ಗುಣವಿರುವುದರಿಂದ ಅದನ್ನು ಒಂದು ನಿರ್ದಿಷ್ಟ ಅರ್ಥಕ್ಕೆ ಕಟ್ಟಿಹಾಕಬಾರದು. ಇದನ್ನೇ ರಿಚಾರ್ಡ ವೊಲೆಹಿಂ ʼ ಕಲೆಯು ಮನುಷ್ಯ ಸಂಸ್ಕೃತಿಯ ಭೇಧಿಸಲಾಗದ ರಹಸ್ಯʼ ಎಂದು ಹೇಳಿದ.
ಇವತ್ತು ಕಲಾತ್ಮಕ ಅಭಿವ್ಯಕ್ತಿಯನ್ನು ಅರಿಯಲಾಗದವರ ನಡುವೆ ನಾವು ಬದುಕ ಸಾಗಿಸುತ್ತಿದ್ದೇವೆ. ಅವರ ಜೊತೆ ಅರ್ಥಪೂರ್ಣ ಸಂವಾದವೂ ಅಸಾಧ್ಯ. ಈ ಬಗೆಯ ರಾಜಕೀಯವನ್ನು ಭಾರತ ಹಿಂದೆಂದೂ ಕಂಡಿಲ್ಲ.
-ಪುರುಷೋತ್ತಮ ಬಿಳಿಮಲೆ , ಹಿರಿಯ ವಿಮರ್ಶಕರು




