ಬೆಂಗಳೂರು: ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ಕರ್ನಾಟಕ ಕಲ್ಚರಲ್ ಮತ್ತು ಎಜುಕೇಶಲ್ ಸೊಸೈಟಿ ವತಿಯಿಂದ ಮಕ್ಕಳಿಗೆ ರಾಜ್ಯದ ಜಾನಪದ ಸಂಗೀತ,ನೃತ್ಯದ ಮಹತ್ವ, ಸೊಗಡು ಅರಿವು ಮೂಡಿಸಲು ಮತ್ತು ಬೆಳಸಲು ಸಹಕಾರಿಯಾಗಲು ಜಾನಪದ ಝೇಂಕಾರ-2022 ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಾನಪದ ಕಲಾವಿದೆ ಪದ್ಮಶ್ರೀ ಮಂಜಮ್ಮ ಜೋಗತಿ, ನಟ, ನಿರ್ದೇಶಕ ಅಲೋಕ್ ಬಾಬು, ಸಂಸ್ಥೆಯ ಅಧ್ಯಕ್ಷ ನಾರಾಯಣ್,ಉಪಾಧ್ಯಕ್ಷ ಕೇಶವ್ ಐತಾಳ್, ಕಾರ್ಯದರ್ಶಿ ರಾಮಚಂದ್ರರಾವ್, ಖಜಾಂಚಿ ರವೀಂದ್ರಬಾಬುರೆಡ್ಡಿ ದೀಪಾ ಬೆಳಗಿಸಿ ಶಾಲಾ ಜಾನಪದ ಝೇಂಕಾರ-2022 ಜಾನಪದ ಕಲಾ ಉತ್ಸವಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಜೋಗತಿ ಮಂಜಮ್ಮ ಮಾತನಾಡಿ, ವಿದೇಶಿ ಕಲೆ, ಸಂಸ್ಕೃತಿಗೆ ಮಾರುಹೋದ ಯುವ ಸಮುದಾಯ ನಮ್ಮ ದೇಶದ ಕಲೆ, ಸಂಸ್ಕೃತಿಯನ್ನ ಮರೆತು ಹೋಗುತ್ತಿದ್ದಾರೆ. ನಮ್ಮ ಜಾನಪದ ಕಲೆ, ಸಂಸ್ಕೃತಿ ನಶಿಸಿ ಹೋಗುವ ಹಂತ ತಲುಪಿದೆ ಎಂದರು.
ಜಾನಪದ ಕಲೆಯಲ್ಲಿ ರಾಜ್ಯದ ಇತಿಹಾಸ, ದೈವ ಭಕ್ತಿ, ಸಾಹಸ ಹಲವಾರು ವಿಷಯಗಳ ಸಮಗ್ರ ಮಾಹಿತಿಯನ್ನ ಜಾನಪದ ಕಲೆ ಅಧ್ಯಯನದಿಂದ ತಿಳಿಯುತ್ತದೆ. ನಮ್ಮ ನಾಡಿನ ಹೆಮ್ಮೆಯ ಕಲೆ ಜಾನಪದ ಕಲೆ ಉಳಿಸಲು ಮತ್ತು ಬೆಳಸಲು ಹಾಗೂ ಮುಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸಲು ಜಾನಪದ ಕಲಾ ಉತ್ಸವಗಳು ಸತತವಾಗಿ ನಡೆಯಬೇಕು ಎಂದು ಹೇಳಿದರು.
ಜಾನಪದ ಕಲಾ ಉತ್ಸವದಲ್ಲಿ ಶಾಲಾ ಮಕ್ಕಳಿಂದ ಉತ್ತರ ಕರ್ನಾಟಕ ಜಾನಪದ ಕುಣಿತ, ಸುಗ್ಗಿ ಕುಣಿತ, ಕೊಡವ ಹುತ್ತರಿ ಕುಣಿತ, ಹುಲಿವೇಷ, ಅರ್ಪಾನೆ (ಕೆಂಪೇಗೌಡರ ಬಗ್ಗೆ ಸ್ಕಿಟ್)ವೀರಗಾಸೆ, ಪಟ ಕುಣಿತ ಹಾಲಕ್ಕಿ ಕುಣಿತ, ಕಂಸಾಳೆ
ಡೊಳ್ಳು ಕುಣಿತ, ಯಕ್ಷಗಾನದಲ್ಲಿ ಶಾಲಾ ಮಕ್ಕಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕರು ಮತ್ತು ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು. ಆಡಳಿತ ಮಂಡಳಿ ನಿರ್ದೇಶಕರುಗಳಾದ ಸತ್ಯವತಿ, ರುಹಿಖಾನಮ್, ಅರುಣ್, ಶ್ರೀನಿವಾಸ್, ಶಂಕರನಾರಾಯಣ್ ಪಾಲ್ಗೊಂಡಿದ್ದರು.



