ಬೆಂಗಳೂರು: ಬಿಬಿಎಂಪಿ ನೀಡಿರುವ ದೂರಿನನ್ವಯ ಕಂದಾಯಾಧಿಕಾರಿಗಳನ್ನು ರೆಪ್ರೆಸೆಂಟೇಷನ್ ಆಫ್ ಪಬ್ಲಿಕ್ ಆಕ್ಟ್ ಪ್ರಕಾರ ಏಕಾಏಕಿ ಬಂಧಿಸಿರುವುದು ಸೂಕ್ತವಲ್ಲ ಬದಲಿಗೆ ಅಕ್ರಮ ಎಸಗಿದೆ ಎನ್ನಲಾದ ಮೆ. ಚಿಲುಮೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಬಿ.ಬಿ.ಎಂ.ಪಿ ಕೇಂದ್ರ ಕಛೇರಿ ಆವರಣದಲ್ಲಿರುವ ನೌಕರರ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಮತ್ತು CEO ನಡೆಸುವ ತನಿಖೆಗೆ ಸಿದ್ಧವಿದ್ದು ಅವರಿಗೆ ಮಾನಸಿಕವಾಗಿ ಹಿಂಸೆ ನೀಡಬಾರದು ಎಂದರು.
ಯಾವುದಾದರೂ ಒಂದು ಸಂಸ್ಥೆ ತನಿಖೆಯನ್ನು ಮಾಡಲಿ. ಎರಡು ಮೂರು ಪೊಲೀಸ್ ಠಾಣೆ ಗಳು ಅಥವಾ ವಿವಿಧ ಸಂಸ್ಥೆಗಳು ಭಾಗಿಯಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ನೀಡಬಾರದು ಎಂದು ಒತ್ತಾಯಿಸಿದರು.
ರೆಪ್ರೆಸೆಂಟೇಷನ್ ಆಫ್ ಪಬ್ಲಿಕ್ ಆಕ್ಟ್ ಪ್ರಕಾರ ಬಿಬಿಎಂಪಿ ದೂರು ದಾಖಲಿಸಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಅಧಿಕಾರಿ ದೂರು ದಾಖಲಿಸಬೇಕು. ಇಲ್ಲಿ ಪ್ರೊಸಿಜರ್ ಎರರ್ ಆಗಿದೆ. ಚಿಲುಮೆ ಸಂಸ್ಥೆ BLO ಗುರುತಿನ ಚೀಟಿಯನ್ನು ನಕಲಿ ಮಾಡಿ ಅಕ್ರಮ ಎಸಗಿದೆ. ಅದರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಬಿಬಿಎಂಪಿ ಕಂದಾಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಕಾನೂನಿನ ಪ್ರಕಾರ ಅಸಮಂಜಸ ಎಂದರು.
ದತ್ತಾಂಶ ಕಳವು ಪ್ರಕರಣದಲ್ಲಿ ಚಿಲುಮೆ ಸಂಸ್ಥೆ ಭಾಗಿಯಾಗಿರುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತದಾರರ ಪಟ್ಟಿಯಲ್ಲಿ ದತ್ತಾಂಶ ಕಳವು ಮತ್ತು ಮತದಾರರನ್ನು ತೆಗೆದು ಹಾಕಿರುವ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿಸಿ ಅಧಿಕಾರಿಗಳನ್ನು ಬಂಧಿಸುತ್ತಿರುವುದು ಸೂಕ್ತವಲ್ಲ. ಬಿಬಿಎಂಪಿ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಮತ್ತು ಪುನರಾವರ್ತನೆಯಾಗಿರುವ ಹೆಸರುಗಳನ್ನು ಮಾತ್ರ ತೆಗೆದು ಹಾಕಲಾಗಿದೆ ಎಂದರು.
ಸಂಘದ ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಸಾಯಿಶಂಕರ್, ರಾಮಚಂದ್ರ, ಕೆ.ಮಂಜೇಗೌಡ, ಸಂತೋಷ್ ಕುಮಾರ್ ನಾಯಕ್, ರುದ್ರೇಶ್, ನರಸಿಂಹ, ಬಾಬಣ್ಣ, ಉಪ ಆಯುಕ್ತರಾದ ಲಕ್ಷ್ಮೀದೇವಿ, ವಕೀಲರಾದ ಶ್ರೀನಿವಾಸ್, ಅಧಿಕಾರಿಗಳಾದ ಕೆ.ಜಿ.ರವಿ,ಶಾಂತೇಶ್ ರವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.




