ಬೆಂಗಳೂರು: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನ.23ರಂದು ಸುಪ್ರೀಂಕೋರ್ಟ್ನಲ್ಲಿ ಅಂತಿಮ ವಿಚಾರಣೆಯಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದ್ದರೂ, ಕರ್ನಾಟಕ ಸರ್ಕಾರ ಗಡಿ ವಿವಾದದ ಪರಿಸ್ಥಿತಿಯ ಗಂಭೀರತೆ ಅರಿತಂತಿಲ್ಲ. ಗಡಿ ವಿವಾದದ ಸಾಧಕ ಬಾಧಕಗಳ ಕುರಿತು ಚಿಂತನೆ ಮಾಡಿಲ್ಲ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಆಪಾದಿಸಿದ್ದಾರೆ.
ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಸಮರ್ಥ ವಾದ ಮಂಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ಮುಂದಿನ ನಡೆ ಬಗ್ಗೆ ಚರ್ಚಿಸಬೇಕು. ಆದರೆ ಇಲ್ಲಿಯವರೆಗೂ ಸರ್ಕಾರದಿಂದ ಆ ಪ್ರಯತ್ನ ನಡೆದೇ ಇಲ್ಲ ಎಂದು ದೂರಿದ್ದಾರೆ.
ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕಿರುವ ಆಸಕ್ತಿ ಈ ಸರ್ಕಾರಕ್ಕೆ ಯಾಕಿಲ್ಲ ಎಂದು ಪ್ರಶ್ನಿಸಿರುವ ಅವರು, ಬೆಳಗಾವಿ ಅಖಂಡ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಬೊಮ್ಮಾಯಿಯವರು ಬೆಳಗಾವಿ ಗಡಿ ವಿವಾದವನ್ನು ಲಘುವಾಗಿ ಪರಿಗಣಿಸಬಾರದು ಎಂದು ಸಲಹೆ ನೀಡಿದರು.
ಅಂತಿಮ ವಿಚಾರಣೆಯಲ್ಲಿ ಪೂರ್ವ ತಯಾರಿ ಇಲ್ಲದೆ ಹೋದರೆ ಮುಖಭಂಗ ಎದುರಿಸಬೇಕಾಗುತ್ತದೆ. ಹಾಗಾಗಿ ಸರ್ಕಾರ ಈ ಕೂಡಲೇ ಸರ್ವಪಕ್ಷ ಸಭೆ ಕರೆದು ಚರ್ಚಿಸಲಿ ಎಂದು ಆಗ್ರಹಿಸಿದರು.



