ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಮತದಾರರ ಮಾಹಿತಿ ಕಳ್ಳತನ ಮತ್ತು ಒಂದು ನಿರ್ದಿಷ್ಟ ಸಮುದಾಯದ ಜನರನ್ನು ಮತಪಟ್ಟಿಯಿಂದ ಕೈಬಿಟ್ಟಿರುವ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಿಂಗ್ ಪಿನ್. ಈ ಕೂಡಲೇ ಮುಖ್ಯಮಂತ್ರಿಗಳ ವಿರುದ್ಧ ಕೇಸ್ ದಾಖಲಿಸಿಕೊಂಡು, ಬಂಧಿಸಬೇಕು ಮತ್ತು ಈ ಹಗರಣವು ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.
ಅಮೇರಿಕಾದ ವಾಟರ್ ಗೇಟ್ ಪ್ರಕರಣದಂತೆ ಇದು “ವೋಟರ್ ಗೇಟ್ ಪ್ರಕರಣ”. ಈ ಹಗರಣದಲ್ಲಿ ನೇರವಾಗಿ ಮುಖ್ಯಮಂತ್ರಿಗಳು ಷಾಮೀಲಾಗಿದ್ದಾರೆ. ಜನರ ಮತದಾನದ ಹಕ್ಕನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿರುವುದು ಒಂದು ಗಂಭೀರ ಅಪರಾಧ. ಚುನಾವಣಾ ಆಯೋಗ ಒಂದು ಸಂವಿಧಾನಬದ್ಧವಾದ ಸಂಸ್ಥೆ, ಇದು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಯನ್ನು ನಡೆಸಬೇಕು. ಚುನಾವಣೆಯಲ್ಲಿ ಅವ್ಯವಹಾರಗಳು ನಡೆದರೆ ಅದು ಪ್ರಜಾ ಪ್ರಾತಿನಿಧಿಕ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದರು.
ಈ ಹಗರಣದಲ್ಲಿ ಬಡಪಾಯಿಗಳ ಮೇಲೆ ಮೊಕದ್ದಮೆ ದಾಖಲು ಮಾಡಿಕೊಂಡು ಬಂಧಿಸಿ, ನೈಜ ಅಪರಾಧಿಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ನಗರದ ಉಸ್ತುವಾರಿ ಸಚಿವರು. ಅವರೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು. ತಮಗೂ, ಈ ಹಗರಣಕ್ಕೆ ಸಂಬಂಧ ಇಲ್ಲ ಎಂದು ಹೇಳಲು ಬರಲ್ಲ ಎಂದರು.
ಬೊಮ್ಮಾಯಿ ಅವರು ನಮ್ಮ ಎಲ್ಲಾ ಆರೋಪಗಳಿಗೂ ಹಿಂದಿನ ಸರ್ಕಾರ ಮಾಡಿಲ್ವಾ? ಎಂದು ಕೇಳುತ್ತಾರೆ. ಆಗ ಬೊಮ್ಮಾಯಿ ಅವರು ವಿರೋಧ ಪಕ್ಷದಲ್ಲಿದ್ದು ಮಾತನಾಡದೆ ಸುಮ್ಮನಿದ್ದಿದ್ದು ಏಕೆ? ನಮ್ಮ ಸರ್ಕಾರದ ವಿರುದ್ಧ ಬಂದ ಎಲ್ಲಾ ಆರೋಪಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ. ಆಗ ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲೂ ಇರಲಿಲ್ಲ. 2008 ರಿಂದ 2013ರ ವರೆಗೆ ಯಡಿಯೂರಪ್ಪ, ಸದಾನಂದ ಗೌಡರು ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ನಾವು ವಿರೋಧ ಪಕ್ಷವಾಗಿ ಕೆಲವು ಪ್ರಕರಣಗಳನ್ನು ಸಿಬಿಐ ಗೆ ವಹಿಸುವಂತೆ ಒತ್ತಾಯ ಮಾಡಿದ್ದಕ್ಕೆ ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ಲೇವಡಿ ಮಾಡುತ್ತಿದ್ದರು ಎಂದಿದ್ದರು ಎಂದರು.
ನಾವು ಪೊಲೀಸರಿಗೆ ದೂರು ನೀಡಿದ್ದೇವೆ, ಕೇಂದ್ರ ಚುನಾವಣಾ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರಿಗೂ ದೂರು ನೀಡಿದ್ದೇವೆ. ನಾನು ಅವರ ಬಳಿ ಹೀಗೆ ಲಕ್ಷಾಂತರ ಜನ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದೀರಿ. ಇದಕ್ಕೆ ಕಾರಣ ಯಾರು? ಬಿಬಿಎಂಪಿ ಮಾಡಿರುವ ಬೂತ್ ಲೆವೆಲ್ ಆಫೀಸರ್ ಗಳು ಯಾರೂ ಕೂಡ ಸರ್ಕಾರಿ ಅಧಿಕಾರಿಗಳಲ್ಲ, ಇವರು ಕಾನೂನಿಗೆ ವಿರುದ್ಧವಾಗಿ ಪರಿಷ್ಕರಣೆ ಮಾಡಿದ್ದಾರೆ, ಇವೆಲ್ಲವನ್ನೂ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಕೃಷ್ಣಪ್ಪ ರವಿಕುಮಾರ್ ಅವರ ಚಿಲುಮೆ ಸಂಸ್ಥೆಯ ಮೇಲೆ ಈ ವರೆಗೆ ಕೇಸ್ ದಾಖಲಿಸಿ, ಅವರ ಬಂಧನವಾಗಿಲ್ಲ. ಚಿಲುಮೆ ಸಂಸ್ಥೆಯ ಕಚೇರಿ ಸಿಬ್ಬಂದಿ ಬಂಧಿಸಿಲ್ಲ. ಬಿಬಿಎಂಪಿ ಕಮಿಷನರ್ ಬಂಧನವಾಗಿಲ್ಲ. ಇದಕ್ಕೆ ಕಾರಣ ಏನು? ರಾಜ್ಯ ಮುಖ್ಯಚುನಾವಣಾಧಿಕಾರಿ ಜಂಟಿ ಆಯುಕ್ತರ ಮೂಲಕ ತನಿಖೆ ಮಾಡಿಸುತ್ತೇನೆ ಎನ್ನುತ್ತಾರೆ. ಓರ್ವ ಜಂಟಿ ಆಯುಕ್ತ ತನಗಿಂತ ಮೇಲಿನ ಅಧಿಕಾರದಲ್ಲಿ ಇರುವ ಮುಖ್ಯಮಂತ್ರಿಗಳ ಮೇಲೆ ತನಿಖೆ ಮಾಡಿ ಶಿಕ್ಷೆ ಕೊಡಲು ಸಾಧ್ಯವೇ? ಇವರ ಹೇಳಿಕೆ ಎಷ್ಟು ಹಾಸ್ಯಾಸ್ಪದ ಎಂದು ಯಾರಿಗಾದರೂ ಅನ್ನಿಸಲ್ವಾ? ಅದಕ್ಕಾಗಿ ನಾವು ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ಸಮಿತಿ ರಚನೆ ಮಾಡಿ, ಅದರ ಮೂಲಕ ತನಿಖೆ ನಡೆಸಿ ಎಂದು ಒತ್ತಾಯಿಸಿದರು.
ಬೊಮ್ಮಾಯಿ ಅವರು ಇದು ಆಧಾರ ರಹಿತ ಆರೋಪ, ಇದಕ್ಕೂ ತಮಗೂ ಸಂಬಂಧ ಇಲ್ಲ ಎನ್ನುತ್ತಾರೆ. ಇವು ಆಧಾರ ರಹಿತ ಆರೋಪಗಳಾಗಿದ್ದರೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ ಕೆಲವರ ಬಂಧನ ಯಾಕಾಗಿದೆ? ಮತದಾರರ ಪಟ್ಟಿ ಪರಿಷ್ಕರಣೆಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ರದ್ದು ಮಾಡಿದ್ದು ಯಾಕೆ? ಇಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇಷ್ಟೆಲ್ಲಾ ಆದಮೇಲೆ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಲು ಅರ್ಹರೇ? ಬಸವರಾಜ ಬೊಮ್ಮಾಯಿ ಅವರಿಗೆ ಕಾನೂನಿನ ಮೇಲೆ ಗೌರವ ಇದ್ದರೆ, ಸ್ವಾಭಿಮಾನ ಮತ್ತು ಮರ್ಯಾದೆ ಎಂಬುದು ಕಿಂಚಿತ್ತು ಇದ್ದರೂ ತಕ್ಷಣ ರಾಜೀನಾಮೆ ನೀಡಬೇಕು. ಹಗರಣಗಳ ಮೇಲೆ ಹಗರಣ ಮಾಡಿ ಬಚಾವಾಗುತ್ತೇವೆ ಎಂದು ಬೊಮ್ಮಾಯಿ ಅವರು ಅಂದುಕೊಂಡಿದ್ದರೆ ಅದು ಭ್ರಮೆ ಎಂದರು.
ನಾವು ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ಕೇಸ್ ದಾಖಲಿಸಿ ಬಂಧಿಸುವಂತೆ ಒತ್ತಾಯ ಮಾಡಿದ್ದೇವೆ. ನಮ್ಮ ಪಕ್ಷದ ಹಲವು ಶಾಸಕರು ಇಂದು ಬಂದು ತಮ್ಮ ಕ್ಷೇತ್ರದಲ್ಲಿ ಯಾವ ರೀತಿ ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ. ಈ ಹಗರಣದಲ್ಲಿ ಇನ್ನಷ್ಟು ಸಾಕ್ಷಿಗಳನ್ನು ನಾವು ಸಂಗ್ರಹ ಮಾಡುತ್ತಿದ್ದೇವೆ. ಇಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಯಾರಾದರೂ ಸಾವಿರಾರು ಜನರಿಗೆ ಸಂಬಳ ನೀಡಿ ಉಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಸಾಧ್ಯವೇ? ಬಿಜೆಪಿಯವರು ಚುನಾವಣೆಯಲ್ಲಿ ಸೋಲುವ ಭಯದಿಂದ ಈ ರೀತಿ ವಾಮ ಮಾರ್ಗ ಹಿಡಿದ್ದಿದ್ದಾರೆ. ಆದರೂ ಇಂಥ ಷಡ್ಯಂತ್ರಗಳನ್ನು ಎದುರಿಸಿ ನಾವು ಚುನಾವಣೆಯಲ್ಲಿ ಗೆಲ್ಲುತ್ತಿದ್ದೇವೆ. ಮುಂದೆಯೂ ಗೆಲ್ಲುತ್ತೇವೆ. ಆದರೆ ಜನರಿಗೆ ಸತ್ಯ ಗೊತ್ತಾಗಬೇಕು ಮತ್ತು ಚುನಾವಣಾ ಆಯೋಗ ಮತ್ತು ವ್ಯವಸ್ಥೆಯ ಬಗ್ಗೆ ನಂಬಿಕೆ ಬರಬೇಕು ಎಂಬ ಕಾರಣಕ್ಕಾಗಿ ಈ ಹಗರಣದಲ್ಲಿ ಭಾಗಿಯಾದವರೆಲ್ಲರೂ ಹೊರಬರಬೇಕು ಎಂದರು.
ಈಗ ಚುನಾವಣಾ ಆಯೋಗಕ್ಕೆ ದೂರು ನೀಡಿ, ನ್ಯಾಯಾಂಗ ತನಿಖೆಗೆ ನೀವೆ ಒಪ್ಪಿಸಬಹುದು ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ರಾಜ್ಯ ಚುನಾವಣಾ ಆಯೋಗ ನಮ್ಮ ಮನವಿಗೆ ಸೂಕ್ತ ಸ್ಪಂದನೆ ನೀಡದಿದ್ದರೆ ಮುಂದೆ ಕೇಂದ್ರ ಚುನಾವಣಾ ಆಯೋಗದ ಬಳಿ ನ್ಯಾಯಕ್ಕಾಗಿ ಮೊರೆ ಹೋಗುತ್ತೇವೆ ಎಂದರು.




