ಬೆಂಗಳೂರು: ರಾಹುಲ್ ಗಾಂಧಿಯವರ ದುಬಾರಿ ಟಿ- ಶರ್ಟ್ ಬಗ್ಗೆ ವ್ಯಂಗ್ಯವಾಡುವ BJP, ಮೋದಿಯವರ ದುಬಾರಿ ಸೂಟಿನ ಬಗ್ಗೆಯೂ ವ್ಯಂಗ್ಯವಾಡಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲೆಸೆದಿದ್ದಾರೆ.
ಭಾರತ ಐಕ್ಯತೆ ಯಾತ್ರೆಗೆ ತಮಿಳುನಾಡಿನಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಿದ್ದು ಅವರಿಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿಚಲಿತವಾಗಿರುವಂತೆ ಕಂಡುಬಂದಿರುವ ಬಿಜೆಪಿ, ರಾಹುಲ್ ಗಾಂಧಿಯವರು 41,000 ರೂ. ಬೆಲೆಯ ಟೀಶರ್ಟ್ ಧರಿಸಿ ಯಾತ್ರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ದಿನೇಶ್ ಗುಂಡೂರಾವ್, ಸ್ವಯಂಘೋಷಿತ ಫಕೀರ ಮೋದಿಯವರು ಲಕ್ಷಾಂತರ ಬೆಲೆ ಬಾಳುವ ಸೂಟು ಬೂಟು ಧರಿಸುತ್ತಾರೆ. ಅದು BJP ಯವರ ಕಣ್ಣಿಗೆ ಕಾಣುವುದಿಲ್ಲವೆ.? BJP ಯವರಿಗೆ ರಾಹುಲ್ ಗಾಂಧಿಯವರ ಉಡುಗೆ ತೊಡುಗೆ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ? ಎಂದು ಪ್ರಶ್ನಿಸಿದ್ದಾರೆ.
ಫಕೀರ ಎಂದರೆ ಸಂತನ ಪ್ರತಿರೂಪ. ಫಕೀರ ಎಂದು ಕರೆಸಿಕೊಳ್ಳುವವರು ಆಡಂಬರ-ಐಷಾರಾಮಿ ಬದುಕು ಸಾಗಿಸಬಾರದು. BJP ಯವರು ಮೊದಲು ಸ್ವಯಂಘೋಷಿತ ಫಕೀರ ಮೋದಿಯವರಿಗೆ ದುಬಾರಿ ಜೀವನ ತ್ಯಜಿಸಲು ಹೇಳಲಿ. ನಂತರ ರಾಹುಲ್ ಗಾಂಧಿಯವರ ಬಗ್ಗೆ ಮಾತಾಡಲಿ. BJPಯವರ ತಟ್ಟೆಯಲ್ಲೇ ಹೆಗ್ಗಣ ಬಿದ್ದು ಕೊಳೆತು ನಾರುತ್ತಿದೆ. ಹೀಗಿರುವಾಗ ಇನ್ನೊಬ್ಬರ ತಟ್ಟೆಯ ಚಿಂತೆ ಯಾಕೆ? ಎಂದಿದ್ದಾರೆ.



