ಹೊಸ ಸಫಾರಿ, ಟ್ರೆಕ್ಕಿಂಗ್ ಸೇರಿದಂತೆ ಪ್ರಕೃತಿ ಆಧಾರಿತ ಪ್ರವಾಸಿ ಚಟುವಟಿಕೆಗಳ ಆರಂಭ: ಕೆ.ಜೆ.ಜಾರ್ಜ್ 

23 hours ago

ಬೆಂಗಳೂರು:  ರಾಜ್ಯದಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಯಾವುದೇ ಧಕ್ಕೆಯಾಗದಂತೆ ಪರಿಸರ ಪ್ರವಾಸೋದ್ಯಮ ಉತ್ತೇಜಿಸಲು ಹೊಸ ಸಫಾರಿ, ಟ್ರೆಕ್ಕಿಂಗ್ ಸೇರಿದಂತೆ ಪ್ರಕೃತಿ ಆಧಾರಿತ ಪ್ರವಾಸಿ ಚಟುವಟಿಕೆಗಳನ್ನು ಆರಂಭಿಸುವುದರ ಜೊತೆಗೆ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (ಜೆಎಲ್ ಆರ್) ಆಸ್ತಿಗಳನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮುಥೋಡಿ ನೇಚರ್ ಕ್ಯಾಂಪ್ ಸೇರಿದಂತೆ ಪ್ರವಾಸೋದ್ಯಮಕ್ಕೆ ಸೂಕ್ತವಾಗಿರುವ ಅರಣ್ಯ ಪ್ರದೇಶಗಳನ್ನು ಗುರುತಿಸಿ, ಅರಣ್ಯ ಇಲಾಖೆಯ ಅಗತ್ಯ ಕಾನೂನುಬದ್ಧ ಅನುಮತಿಗಳನ್ನು ಪಡೆದು ಹೊಸ ಸಫಾರಿ ಹಾಗೂ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಬಿನಿ, ಬಂಡೀಪುರ, ಕೆಮ್ಮಣ್ಣುಗುಂಡಿ ಸೇರಿದಂತೆ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ನ ಪ್ರಮುಖ ಆಸ್ತಿಗಳಲ್ಲಿರುವ ಕೊಠಡಿಗಳು, ಸ್ವಚ್ಛತೆ, ಆತಿಥ್ಯ ಹಾಗೂ ಪ್ರವಾಸಿಗರಿಗೆ ಒದಗಿಸುವ ಸೌಲಭ್ಯಗಳನ್ನು ಸುಧಾರಿಸಲು ಆದ್ಯತೆ ನೀಡಲಾಗುವುದು. ಪ್ರತಿಯೊಂದು ಆಸ್ತಿಯ ನೈಸರ್ಗಿಕ ವೈಶಿಷ್ಟ್ಯವನ್ನು ಕಾಪಾಡಿಕೊಂಡೇ ಅಗತ್ಯ ದುರಸ್ತಿ ಮತ್ತು ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಅಗತ್ಯವಿರುವ ಕಡೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪರಿಸರ ಪ್ರವಾಸೋದ್ಯಮದ ಲಾಭ ಅರಣ್ಯದಂಚಿನ ಗ್ರಾಮಗಳ ಜನರು ಹಾಗೂ ಯುವಕರಿಗೂ ತಲುಪಿಸುವ ಉದ್ದೇಶದಿಂದ ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಕೃತಿ ಮಾರ್ಗದರ್ಶಕರು, ಆತಿಥ್ಯ ಸೇವೆ, ಆಹಾರ, ಸಾರಿಗೆ ಸೇರಿದಂತೆ ವಿವಿಧ ಪ್ರವಾಸಿ ಸೇವೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಯೋಜಿಸಲಾಗಿದೆ ಎಂದಿದ್ದಾರೆ.

ಇದರಿಂದ ಪರಿಸರ ಪ್ರವಾಸೋದ್ಯಮದ ಮೂಲಕ ಸ್ಥಳೀಯರಿಗೆ ಆದಾಯದ ಮೂಲ ಸೃಷ್ಟಿಯಾಗಲಿದೆ
ಅರಣ್ಯ ಇಲಾಖೆ, ಕರ್ನಾಟಕ ಇಕೋ ಟೂರಿಸಂ ಡೆವಲಪ್ಮೆಂಟ್ ಬೋರ್ಡ್ (ಕೆಇಡಿಬಿ) ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (ಜೆಎಲ್ ಆರ್ ) ನಡುವೆ ಸಮನ್ವಯ ಸಾಧಿಸಿ ಮುಂದಿನ ಯೋಜನೆಗಳನ್ನು ರೂಪಿಸಲಾಗುವುದು. ಪರಿಸರದ ಸಾಗುವಳಿ ಸಾಮರ್ಥ್ಯ, ವನ್ಯಜೀವಿಗಳ ಸುರಕ್ಷತೆ ಮತ್ತು ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಪ್ರಮುಖ ಮಾನದಂಡಗಳಾಗಿ ಪರಿಗಣಿಸಲಾಗುತ್ತದೆ ಎಂದಿದ್ದಾರೆ.

ಪರಿಸರ ಪ್ರವಾಸೋದ್ಯಮ ವಿಸ್ತರಣೆಯ ಹೆಸರಿನಲ್ಲಿ ಅರಣ್ಯದ ಸ್ವಾಭಾವಿಕ ಪರಿಸರ ಹಾಗೂ ವನ್ಯಜೀವಿಗಳ ನೆಮ್ಮದಿಗೆ ಯಾವುದೇ ಧಕ್ಕೆಯಾಗಬಾರದು. ವೈಜ್ಞಾನಿಕವಾಗಿ ಸೂಕ್ತ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಅನುಮತಿಗಳೊಂದಿಗೆ ಹೊಸ ಪ್ರವಾಸಿ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.

Leave a Reply