ನಾಡಿನ ಹಿರಿಯ “ಜೀವಿ”ಯೊಂದಿಗಿನ ಒಡನಾಟ ಚಿರಸ್ಮರಣೀಯ: ತೇಜಸ್ವಿನಿ ಅನಂತಕುಮಾರ್‌

5 years ago

ಬೆಂಗಳೂರು: ಖ್ಯಾತ ಸಂಶೋಧಕ, ನಿಘಂಟು ತಜ್ಞ, ನಾಡೋಜ, ಶತಾಯುಷಿ, ನಮ್ಮ ನಾಡಿನ ಹಿರಿಯ ʼಜೀವಿʼ ಯಾಗಿದ್ದ ಪ್ರೊ. ಜಿ ವೆಂಕಟಸುಬ್ಬಯ್ಯ ಅವರ ಜೊತೆಗಿನ ಒಡನಾಟ ಚಿರಸ್ಮರಣೀಯ. ಅಂತಹ ಮೇಧಾವಿಯ ಶತಮಾನೋತ್ಸವ ಕಾರ್ಯಕ್ರಮ ಸಮಿತಿಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದು ನನ್ನ ಪುಣ್ಯ ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ಹೇಳಿದ್ದಾರೆ.

ನಾಡಿನ ಹಿರಿಯ ಚೇತನದ ಅಗಲಿಕೆಯ ಬಗ್ಗೆ ತೀವ್ರ ದುಖಃ ವ್ಯಕ್ತಪಡಿಸಿ ಅವರು, ಪ್ರೊ. ಜೀ.ವಿ ಅವರೊಂದಿಗೆ ಇದ್ದ ತಮ್ಮ ಒಡನಾಟವನ್ನು ಮೆಲಕು ಹಾಕಿದ್ದಾರೆ. ಪ್ರೋ. ಜಿ ವಿ ವೆಂಕಟಸುಬ್ಬಯ್ಯನವರ ಶತಮಾನೋತ್ಸವ ಕಾರ್ಯಕ್ರಮ ಸಮಿತಿ ಅಧ್ಯಕ್ಷೆಯಾಗಿದ್ದನ್ನು ಸ್ಮರಿಸಿಕೊಂಡಿದ್ದಾರೆ.

29/09/2012 ರಲ್ಲಿ ಪ್ರೋ. ಜಿ.ವಿ ವೆಂಕಟಸುಬ್ಬಯ್ಯನವರ ಜನ್ಮ ಶತಾಬ್ದಿಯ ಅಂಗವಾಗಿ ಜಯರಾಂ ಸೇವಾ ಮಂಡಳಿಯ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಸಮಿತಿಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದು ನಮ್ಮ ಪುಣ್ಯ. ಆ ಸಂದರ್ಭದಲ್ಲಿ ಪ್ರೊ. ಜೀ ವಿ ಅವರೊಂದಿಗಿನ ಒಡನಾಟ ಬಹಳ ಅಪ್ಯಾಯಮಾನವಾಗಿತ್ತು. ಈ ಕಾರ್ಯಕ್ರಮಕ್ಕೆ ಲಾಲ್‌ ಕೃಷ್ಣ ಅಡ್ವಾಣಿಯವರನ್ನು ಕರೆತರಬೇಕು ಎನ್ನುವ ಸಮಿತಿಯ ಅಭಿಲಾಷೆಗೆ ಮುಂದಾಳತ್ವ ವಹಿಸಿದ್ದು ಅನಂತಕುಮಾರ್‌ ಅವರು. ಅಡ್ವಾಣಿ  ಅವರ ಮನೆಗೆ ಸಮಿತಿಯ ಸದಸ್ಯರನ್ನು ಕರೆದುಕೊಂಡು ಹೋಗಿ ದಿನಾಂಕವನ್ನು ನಿಗದಿಗೊಳಿಸಲಾಯಿತು. ಬೆಳಿಗ್ಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ತುರ್ತು ಕಾರಣದಿಂದಾಗಿ ಅಡ್ವಾಣಿಯವರು ಬರಲಾಗಲಿಲ್ಲ. ಆದರೆ, ಆ ಕಾರ್ಯಮವನ್ನು ಸಂಜೆಗೆ ಮರುನಿಗದಿಗೊಳಿಸಿ ಸಂಜೆ 4 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದರು.

2 ವರ್ಷಗಳ ಕಾಲ ನಡೆದ ತಯಾರಿ

ಇಂತಹ ಮೇಧಾವಿಯ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆಯೂ ಸಣ್ಣದಾಗಿರಲಿಲ್ಲ. ಸುಮಾರು 2 ವರ್ಷಗಳ ಕಾಲ ಈ ಕಾರ್ಯಕ್ರಮದ ಸಿದ್ದತೆಯನ್ನು ನಡೆಸಲಾಯಿತು. ಆ ಸಂದರ್ಭದಲ್ಲಿ ಸಮಿತಿಯ ವತಿಯಿಂದ ನಡೆದ ಎಲ್ಲಾ ಪೂರ್ವಭಾವಿ ಕಾರ್ಯಕ್ರಮಗಳು ಹಾಗೂ ಸಭೆಗಳಲ್ಲಿ ಭಾಗವಹಿಸಿದ್ದೆ. ಈ ಸಮಯದಲ್ಲಿ ಅವರೊಂದಿಗೆ ಒಡನಾಟ ಹೆಚ್ಚಾಯಿತು ಎಂದಿದ್ದಾರೆ.

ಜನ್ಮಶತಮಾನೋತ್ಸವಕ್ಕೆ ಅದಮ್ಯ ಚೇತನದಿಂದ ವಿಶೇಷ ಗೋಡೆ ವಾರಪತ್ರಿಕೆ

ಪ್ರೊ ಜಿ ವೆಂಕಟಸುಬ್ಬಯ್ಯ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅದಮ್ಯ ಚೇತನ ಸಂಸ್ಥೆಯ ವತಿಯಿಂದ ವಿಶೇಷ ಗೋಡೆ ವಾರಪತ್ರಿಕೆಯನ್ನು ಹೊರತರಲಾಗಿತ್ತು. ಈ ವಾರ ಪತ್ರಿಕೆಯಲ್ಲಿ ಅವರ ಜೀವನ, ಸಾಧನೆಯ ಬಗ್ಗೆ ವಿವರಗಳನ್ನು ನೀಡಲಾಗಿತ್ತು. ಅಲ್ಲದೆ, ಈ ಪತ್ರಿಕೆಯನ್ನು ಶಾಲೆಗಳಿಗೂ ಕಳುಹಿಸಿಕೊಡಲಾಗಿತ್ತು ಎಂದು ಮೆಲುಕು ಹಾಕಿದ್ದಾರೆ.

101 ನೇ ವಯಸ್ಸಿನಲ್ಲಿ ಬರೆದು ಪುಸ್ತಕ ಬಿಡುಗಡೆ

ಜೀವಿಯವರ 101 ನೇ ವಯಸ್ಸಿನಲ್ಲಿ ಅವರ 6 ಕೃತಿಗಳನ್ನು ನಾವು ಆಯೋಜಿಸಿದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದು ವಿಶೇಷ. ಅವರ ಜನ್ಮ ಶತಾಬ್ದಿಯ ಕಾರ್ಯಕ್ರಮದಲ್ಲಿ ಅವರದ್ದೇ ರಚಿತ 6 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು ಎಂದು ನೆನಪಿಸಿಕೊಂಡಿದ್ದಾರೆ.

ಮೊದಲ ಅದಮ್ಯ ಚೇತನ ಸೇವಾ ಉತ್ಸವದ ಅಧ್ಯಕ್ಷತೆ

ಅದಮ್ಯ ಚೇತನ ವತಿಯಿಂದ ಪ್ರಾರಂಭಿಸಲಾದ ಸೇವಾ ಉತ್ಸವದ ಮೊದಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಪ್ರೋ ಜಿ ವೆಂಕಟಸುಬ್ಬಯ್ಯನವರು. ಆ ಕಾರ್ಯಕ್ರಮದಲ್ಲಿ 10 ಸಾವಿರ ಜನರು ವಂದೇ ಮಾತರಂ ಹಾಡಿದ್ದು ವಿಶೇಷ ಎಂದಿದ್ದಾರೆ.

ಅನಂತಕುಮಾರ್‌ ಹಾಗೂ ಅದಮ್ಯ ಚೇತನದೊಂದಿಗೆ ವಿಶೇಷ ಒಡನಾಟ

ಪ್ರೊ ಜಿ ವೆಂಕಟಸುಬ್ಬಯ್ಯನವರೊಂದಿಗೆ ಅನಂತಕುಮಾರ್‌ ಹಾಗೂ ನಮ್ಮ ಒಡನಾಟ ಬಹಳ ಹೆಚ್ಚೇ ಇತ್ತು. ಅವರು ನಮ್ಮ ಬಹುತೇಕ ಎಲ್ಲಾ ಸೇವಾ ಉತ್ಸವವಗಳಲ್ಲೂ ಭಾಗವಹಿಸಿದ್ದಾರೆ. ಅಲ್ಲದೆ, ಅನಂತಕುಮಾರ್‌ ಅವರ ಮೊದಲ ಪುಸ್ತಕ ಅನಂತ ತಾ ಅನಂತವಾಗಿ ಹಾಗೂ ಅದಮ್ಯ ಚೇತನದ ಪುಸ್ತಕಕ್ಕೂ ಅವರು ಮುನ್ನಡಿ ಬರೆದಿದ್ದಾರೆ. ನಮ್ಮ ಹಲವಾರು ಕಾರ್ಯಕ್ರಮಗಳಲ್ಲೂ ಭಾಗಿಯಾಗಿ ಮಾರ್ಗದರ್ಶನ ನೀಡಿದ್ದಾರೆ. ತಮ್ಮ 101 ನೇ ವರ್ಷದ ಇಳಿ ವಯಸ್ಸಿನಲ್ಲೂ ನಮ್ಮ ಮಗಳ ಮದುವೆಗೆ ಆಗಮಿಸಿ ವಧು ವರರನ್ನು ಆಶೀರ್ವದಿಸಿದ್ದಾರೆ ಎಂದಿದ್ದಾರೆ.

ಮಾವಿನ ಹಣ್ಣಿನ ಬಗ್ಗೆ ವಿಶೇಷ ಒಲವು

ಪ್ರೊ ಜಿವಿ ಅವರಿಗೆ ಮಾವಿನ ಹಣ್ಣಿನ ಬಗ್ಗೆ ಬಹಳ ಒಲವು ಇತ್ತು. ಪ್ರತಿ ವರ್ಷ ಹುಬ್ಬಳ್ಳಿ ಭಾಗದ ಅತ್ಯುತ್ತಮ ಮಾವಿನ ಹಣ್ಣುಗಳನ್ನು ಅವರಿಗೆ ಕಳುಹಿಸಿಕೊಡುತ್ತಿದ್ದೆವು. ಕೊರೊನಾ ಸಾಂಕ್ರಾಮಿಕ ಕಾರಣ ಕಳೆದ ವರ್ಷ ಕಳುಹಿಸಿಕೊಡಲಾಗಿರಲಿಲ್ಲ, ಈ ವರ್ಷ ಹಣ್ಣು ಕಳುಹಿಸಿಕೊಡುವುದಕ್ಕೆ ಅವರೇ ಇಲ್ಲ ಎಂದು ದುಖಃ ವ್ಯಕ್ತಪಡಿಸಿದರು.

ಬಹಳ ಮೃದು ಸ್ವಾಭಾವದವರಾಗಿದ್ದ ಅವರು, ತಮ್ಮ ಕೊನೆಯ ದಿನಗಳವರೆಗೂ ಬೌದ್ದಿಕ ಹಾಗೂ ಭಾವನಾತ್ಮಕ ವಿಚಾರ ಲಹರಿಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದರು. ಶಾಂತಸ್ವಭಾವದಿಂದ ತಮ್ಮ ಸುತ್ತಮತ್ತಲಿನ ವಿದ್ಯಮಾನಗಳನ್ನು ತಿಳಿದುಕೊಂಡು ಅದಕ್ಕೆ ಸಮಚಿತ್ತದಿಂದ ಪ್ರತಿಕ್ರಿಯಿಸುತ್ತಿದ್ದರು. ಈ ಮೂಲಕ ಸಮಚಿತ್ತರಾಗಿರುವುದು ಎಂದರೆ ಏನು ಎಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ. ಭಾರತೀಯ ಸಂಸ್ಕೃತಿ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇತ್ತು ಎಂದು ಮೆಲುಕು ಹಾಕಿದ್ದಾರೆ.

ಇಂತಹ ಮಹಾನ್‌ ಚೇತನ ದ ಅಗಲಿಕೆಯಿಂದ ನಾಡಿನ ಸಾಂಸ್ಕೃತಿಕ ಜಗತ್ತಿಗೆ ಬಹಳ ನಷ್ಟ ಆಗಿದೆ. ಇಗೋ ಕನ್ನಡದ ಮೂಲಕ ಕನ್ನಡ ಶಬ್ದಗಳ ಅರ್ಥ ಸಂಪತ್ತನ್ನು ನಾಡಿಗೆ ತಲುಪಿಸಿದ ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

Leave a Reply