ಚುನಾವಣೆಯಲ್ಲಿ ಸೋಲುವ ಭಯದಿಂದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ: ಆರ್‌.ಅಶೋಕ

1 hour ago

ಬೆಂಗಳೂರು: ಕಾಂಗ್ರೆಸ್‌ ನಾಯಕರು ಚುನಾವಣಾ ಆಯೋಗ ಮಾತ್ರವಲ್ಲದೆ, ಸುಪ್ರೀಂ ಕೋರ್ಟ್‌, ಸಿಬಿಐ, ಇ.ಡಿ ಸೇರಿದಂತೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳ ಮೇಲೂ ಅನುಮಾನ ಪಡುತ್ತಾರೆ. ಇವರು ಯಾವುದನ್ನೂ ಬಿಟ್ಟಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಭ್ರಮನಿರಸನವಾಗಿದ್ದು, ಇನ್ನೆಂದೂ ಗೆಲ್ಲುವುದಿಲ್ಲ ಎಂದು ಅನ್ನಿಸಿದೆ. ಅದಕ್ಕಾಗಿ ಸುಪ್ರೀಂ ಕೋರ್ಟ್‌, ಇ.ಡಿ, ಸಿಬಿಐ ಮೊದಲಾದ ಸಂಸ್ಥೆಗಳ ಬಗ್ಗೆ ರಾಹುಲ್‌ ಗಾಂಧಿ ವಿರುದ್ಧವಾಗಿ ಮಾತಾಡುತ್ತಾರೆ. ವಿದೇಶದಲ್ಲಿ ಹೋಗಿ ಕೋರ್ಟ್‌ಗಳ ಬಗ್ಗೆ ನಿಂದನೆ ಮಾಡುತ್ತಾರೆ. ಈಗ ರಾಜಕೀಯ ಲಾಭಕ್ಕಾಗಿ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿದ್ದಾರೆ. ಚುನಾವಣಾ ಆಯೋಗದ ಮೂವರು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರೂ, ಈ ವಿಚಾರವನ್ನು ಜನರ ಮುಂದೆ ಒಯ್ಯುತ್ತೇವೆ ಎಂದಿದ್ದಾರೆ. ಈ ಕುರಿತು ಕರ್ನಾಟಕ ಕಾಂಗ್ರೆಸ್‌ ಪ್ರತಿಭಟನೆ ಕೂಡ ಮಾಡಿದೆ. ಕೊನೆಗೆ ನ್ಯಾಯಾಲಯ ಕೂಡ ಸರಿ ಇಲ್ಲ ಎನ್ನುತ್ತಾರೆ ಎಂದರು.

ಕೆಪಿಎಸ್‌ಸಿ ಅಕ್ರಮದ ತನಿಖೆ ಮಾಡಲು ಹೈಕೋರ್ಟ್‌ನಿಂದ ಎಸ್‌ಐಟಿ ರಚಿಸಲಾಗಿದೆ. ಆದರೆ ಇದು ಕೂಡ ಸರಿ ಇಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ತ್ರಿವಳಿ ತಲಾಖ್‌ ರದ್ದು, ರಾಮಮಂದಿರ ನಿರ್ಮಾಣ, ವಂದೇಮಾತರಂ ಹಾಡುವುದು, ಮೊದಲಾದ ವಿಚಾರಗಳಲ್ಲಿ ವಿರೋಧ ಮಾಡಿದ್ದಾರೆ. ಸಲ್ಮಾನ್‌ ಖಾನ್‌, ಶಾರುಕ್‌ ಖಾನ್‌ ಮೊದಲಾದ ನಟರು ಕೂಡ ಗಣಪತಿಯ ಮೂರ್ತಿಯನ್ನು ಪೂಜೆ ಮಾಡಿದ್ದಾರೆ. ಆದರೆ ರಾಹುಲ್‌ ಗಾಂಧಿಗೆ ಮಾತ್ರ ಗಣೇಶನ ಹಬ್ಬ ಎಂದರೆ ಆಗಲ್ಲ. ರಾಜಕೀಯ ಲಾಭಕ್ಕಾಗಿ ಎಲ್ಲಕ್ಕೂ ವಿರೋಧ ಮಾಡುವುದು ಸರಿಯಲ್ಲ. ಸಂವಿಧಾನಕ್ಕೆ ಹುಳಿ ಹಿಂಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಎಸ್‌ಐಆರ್‌ನ ಕಾನೂನು ಮಾನ್ಯತೆಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಈಗ ಎಲ್ಲಿ ಸಮಸ್ಯೆಯಾಗಿದೆ ಎಂದು ಕಾಂಗ್ರೆಸ್‌ ಹೇಳಬೇಕಿದೆ. ಯಾವ ದಾಖಲೆಯಲ್ಲಿ ಸಮಸ್ಯೆಯಾಗಿದೆ ಎಂದು ತಿಳಿಸಬೇಕಿದೆ. ಬಾಂಗ್ಲಾದವರನ್ನು, ಪಾಕಿಸ್ತಾನಿಗಳನ್ನು ಯಾಕೆ ಹೊರದಬ್ಬಲಾಗುತ್ತಿದೆ ಎಂದು ನೇರವಾಗಿ ಪ್ರಶ್ನೆ ಮಾಡಲಿ. ಈ ಹಿಂದೆ ಇವಿಎಂ ಅನ್ನು ಬ್ಲಾಕ್‌ ಬಾಕ್ಸ್‌ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ಆದರೆ ಇದನ್ನು ಅವರ ತಂದೆ ರಾಜೀವ್‌ ಗಾಂಧಿ ತಂದಿದ್ದರು. ಅವರ ತಂದೆಯ ಮೇಲೆಯೇ ಅವರಿಗೆ ನಂಬಿಕೆ ಇಲ್ಲ, ಕೋರ್ಟ್‌, ಚುನಾವಣಾ ಆಯೋಗದ ಮೇಲೆಯೂ ನಂಬಿಕೆ ಇಲ್ಲ. ಸರ್ಜಿಕಲ್‌ ಸ್ಟ್ರೈಕ್‌ ಆದಾಗ ಯೋಧರ ಮೇಲೆ ಅನುಮಾನ ಪಟ್ಟು ಸಾಕ್ಷ್ಯ ಕೇಳಿದ್ದರು. ಆದರೆ ಭದ್ರತೆಯನ್ನು ತೊರೆದು ರಾಹುಲ್‌ ಗಾಂಧಿ ವಿದೇಶಕ್ಕೆ ಹೋಗಿ ಪ್ರವಾಸ ಮಾಡಿದಾಗ ನಾವ್ಯಾರೂ ಆ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ. ಇವರು ಯಾವುದನ್ನೂ ಬಿಡದೆ ಎಲ್ಲ ವ್ಯವಸ್ಥೆಗಳ ಮೇಲೆ ಅನುಮಾನ ಪಡುತ್ತಾರೆ ಎಂದರು.

ಕರ್ನಾಟಕ ಸೇರಿದಂತೆ ಕಾಂಗ್ರೆಸ್‌ ಯಾವ ಕಡೆ ಗೆದ್ದಿದೆಯೋ ಅಲ್ಲೆಲ್ಲ ಚುನಾವಣೆ ರದ್ದು ಮಾಡಿ ಮರು ಚುನಾವಣೆ ನಡೆಸಬೇಕು. ತಾವು ಗೆದ್ದರೆ ಚುನಾವಣಾ ಆಯೋಗ ದೇವರು, ಸೋತರೆ ವಿಲನ್‌ ಎಂಬುದು ಕಾಂಗ್ರೆಸ್‌ನ ನಿಲುವು. ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ಬಂದ ವರದಿ ಸುಳ್ಳು ಎಂದು ಸ್ಪಷ್ಟಪಡಿಸಲಾಗಿದೆ. ಆದರೂ ಚುನಾವಣಾ ಆಯುಕ್ತರ ರಾಜೀನಾಮೆ ಕೇಳುವ ಇವರು ಮೊದಲು ರಾಜೀನಾಮೆ ನೀಡಬೇಕು ಎಂದರು.

ಎಸ್‌ಐಆರ್‌ನಲ್ಲಿ ತಪ್ಪಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಬೇಕು. ಆದರೆ ಯಾವುದೇ ದಾಖಲೆ ಇಲ್ಲದಿರುವುದರಿಂದ ಕೋರ್ಟ್‌ ಮೊರೆ ಹೋಗುತ್ತಿಲ್ಲ. ನೆಹರು ಹಾಗೂ ಇಂದಿರಾಗಾಂಧಿ ಇದ್ದಾಗ ಅವರ ಮನೆಯಲ್ಲಿ ಚಾಕರಿ ಮಾಡುವವರನ್ನು, ಬಂಧುಗಳನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದರು ಎಂದರು.

ಕಾಕ್ರೋಚ್‌ ಜನತಾ ಪಾರ್ಟಿಯವರು ಗುಜರಾತ್‌ನಲ್ಲಿ ಶಾಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಕಾಟಾಚಾರಕ್ಕೆ ಶಾಲೆಗಳಿಗೆ ಭೇಟಿ ನೀಡುತ್ತಾರೆ. ರಾಜ್ಯದಲ್ಲಿ ಕಿತ್ತುಹೋದ ಶೂಗಳನ್ನು ಶಾಲಾ ಮಕ್ಕಳಿಗೆ ನೀಡಿದ್ದಾರೆ. ಇಂತಹ ಸಮಸ್ಯೆಗಳನ್ನು ಪರಿಶೀಲಿಸಬೇಕು. ರಾಹುಲ್‌ ಗಾಂಧಿ ಕಾಕ್ರೋಚ್‌ ಪಾರ್ಟಿಯ ಎರಡನೇ ಭಾಗದಂತೆ ಇದ್ದಾರೆ. ಫೆಬ್ರವರಿಯಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆಯಲಿದ್ದು, ಅಲ್ಲಿ ಒಂದು ಸೀಟು ಗೆಲ್ಲಲ್ಲ ಎಂಬುದು ಖಾತರಿಯಾಗಿದೆ. ಅಖಿಲೇಶ್‌ ಯಾದವ್‌ ಕಾಂಗ್ರೆಸ್‌ ಬೆಂಬಲ ನೀಡದೆ ಗೆಟ್‌ ಔಟ್‌ ಎಂದಿದ್ದಾರೆ. ಅದಕ್ಕಾಗಿ ಚುನಾವಣಾ ಆಯೋಗದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ನ ಚುನಾವಣಾ ಗಿಮಿಕ್‌ಗಳಿಗೆ ಯಾರೂ ಹೆದರುವುದಿಲ್ಲ. ಮುಂದೆ ಬರುವ ಯಾವುದೇ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ನಿರೀಕ್ಷೆ ಇಲ್ಲ. ಅದಕ್ಕಾಗಿ ನಿರೀಕ್ಷಣಾ ಜಾಮೀನಿನಂತೆ ರ‍್ಯಾಲಿಗಳನ್ನು ಮಾಡುತ್ತಿದ್ದಾರೆ. ಮುಳುಗುವ ಹಡಗಾದ ಕಾಂಗ್ರೆಸ್‌ನ ಬಗ್ಗೆ ನಾವು ಚಿಂತೆ ಮಾಡುವುದಿಲ್ಲ. ಗ್ಯಾರಂಟಿಗಳಲ್ಲಿ ಫಲಾನುಭವಿಗಳನ್ನು ಕಡಿಮೆ ಮಾಡಲು ಪ್ರಯತ್ನ ನಡೆದಿದೆ. ಕಾಂಗ್ರೆಸ್‌ ಶಾಸಕರು ಕೂಡ ಗ್ಯಾರಂಟಿಗಳನ್ನು ರದ್ದು ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಆರ್ಥಿಕ ಇಲಾಖೆ ದಿವಾಳಿಯಾಗಿದ್ದು, ದಿವಾಳಿ ಇಲಾಖೆ ಎಂದು ಹೆಸರು ಹಾಕಿಕೊಳ್ಳುವುದು ಸೂಕ್ತ ಎಂದರು.

ಕಸ್ತೂರಿ ರಂಗನ್‌ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಲು ಸಿದ್ಧರಿದ್ದೇವೆ. ಆದರೆ ಬರಗಾಲಕ್ಕೆ ಪರಿಹಾರ ನೀಡದೇ ಇರುವುದರಿಂದ ನಾವು ಭೇಟಿಗೆ ಹೋಗಲ್ಲ. ಈ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ. ಬಿಡದಿ ರೈತರ ಪರವಾಗಿ ನಾವು ಕೂಡ ಹೋರಾಟ ಮಾಡುತ್ತೇವೆ. ಈ ಯೋಜನೆ ಜಾರಿ ಮಾಡಲು ಅವಕಾಶ ನೀಡುವುದಿಲ್ಲ. ಮುಂದೆ ನಮ್ಮ ಸರ್ಕಾರ ಬಂದಾಗ ಆ ಯೋಜನೆಯನ್ನು ರದ್ದು ಮಾಡುತ್ತೇವೆ ಎಂದರು.

Leave a Reply