ರೈತರ ಪ್ರತಿಭಟನೆಗೆ ಕೇಂದ್ರದಿಂದ ಪ್ರತೀಕಾರ ಕ್ರಮ: ಸಿದ್ದರಾಮಯ್ಯ

5 years ago

ಬೆಂಗಳೂರು: ಕೊರೊನಾ ರೋಗದ ಪರಿಣಾಮವಾಗಿ ಜರ್ಜರಿತರಾಗಿರುವ ರೈತರ ನೆರವಿಗೆ ಬರಬೇಕಾಗಿದ್ದ ಕೇಂದ್ರದ @BJP4India ಸರ್ಕಾರ ರಸಗೊಬ್ಬರದ ಬೆಲೆ ಏರಿಸಿ ರೈತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. @PMOIndia ಮತ್ತು @CMofKarnataka ರೈತರನ್ನು ಸಾಯಿಸಲು ಪೈಪೋಟಿಗೆ ಇಳಿದಂತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ರಸಗೊಬ್ಬರಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಏಕಾಏಕಿ ಅಂದಾಜು ರೂ.45,000 ಕೋಟಿಯಷ್ಟು ಕಡಿತಗೊಳಿಸಿರುವುದೇ ರಸಗೊಬ್ಬರ ಕಂಪೆನಿಗಳು ಬೆಲೆ ಏರಿಸಲು ಕಾರಣ. ಕೇಂದ್ರ @BJP4India ಸರ್ಕಾರ ಈ ಸತ್ಯವನ್ನು ಮುಚ್ಚಿಟ್ಟು ಸುಳ್ಳು ಕಾರಣಗಳನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಹಳೆಯ ದಾಸ್ತಾನಿನ ರಸಗೊಬ್ಬರವನ್ನು ಹಳೆಯ ದರದಲ್ಲಿ ಮಾರಾಟ ಮಾಡಬೇಕೆಂಬ ಕೇಂದ್ರ ಸರ್ಕಾರದ ಸೂಚನೆಗೆ ತದ್ವಿರುದ್ಧವಾಗಿ ರಾಜ್ಯ ಕೃಷಿ ಇಲಾಖೆ ಆದೇಶ ಹೊರಡಿಸಿದೆ. ರೈತರ ಹಾದಿ ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಟಕ‌ ಮಾಡುತ್ತಿವೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಸ್ತುತ ಆರುವರೆ ಲಕ್ಷ ಮೆ.ಟನ್ ಡಿಎಪಿಗೆ ಬೇಡಿಕೆ ಇದೆ. ಈಗ ಇರುವ ದಾಸ್ತಾನು ಕೇವಲ 77,401 ಮೆ.ಟನ್ ಮಾತ್ರ. ಇದರಿಂದಾಗಿ ಹಳೆದಾಸ್ತಾನಿಗೆ ಹಳೆಯ ದರದ ಸೂಚನೆಯಿಂದ ರೈತರಿಗೆ ಯಾವ ಲಾಭವೂ ಆಗಲಾರದು. ಈಗಾಗಲೇ ರಸಗೊಬ್ಬರ ಕಂಪೆನಿಗಳು ಹೊಸದರದ ರಸಗೊಬ್ಬರವನ್ನು  ಮಾರುಕಟ್ಟೆಗೆ ಸುರಿದಿವೆ ಎಂದು ಆರೋಪಿಸಿದ್ದಾರೆ.

ಎಲ್ಲ ರಸಗೊಬ್ಬರಗಳ ಬೆಲೆಯನ್ನು ಸರಾಸರಿ ಶೇಕಡಾ 60ರಷ್ಟು ಹೆಚ್ಚಿಸಲಾಗಿದೆ. ಏಪ್ರಿಲ್ ಒಂದಕ್ಕೆ ಕ್ವಿಂಟಲ್ ಡಿಎಪಿಗೆ  ರೂ.2400ರಷ್ಟಿದ್ದ ಬೆಲೆ ಈಗ ರೂ.3400 ಆಗಿದೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆಂದು ಆಶ್ವಾಸನೆ ನೀಡಿದ್ದ @narendramodi ಅವರು ರಸಗೊಬ್ಬರದ ಬೆಲೆ‌ ದುಪ್ಪಟ್ಟು ಮಾಡಿದ್ದಾರೆ ಎಂದಿದ್ದಾರೆ.

ನೂತನ ಕೃಷಿ ಕಾಯ್ದೆಗಳನ್ನು ದೇಶದಾದ್ಯಂತ ವಿರೋಧಿಸುತ್ತಿರುವ ರೈತರ ವಿರುದ್ಧ ಸೇಡುತೀರಿಸಿಕೊಳ್ಳುವ ದುರುದ್ದೇಶದಿಂದಲೇ ಕೇಂದ್ರದ @BJP4India  ಸರ್ಕಾರ ರಸಗೊಬ್ಬರ ಕಂಪೆನಿಗಳ ಜೊತೆ ಷಾಮೀಲಾಗಿ ರೈತರನ್ನು ಸುಲಿಗೆ ಮಾಡಲು ಹೊರಟಂತಿದೆ ಎಂದು ಅವರು ಆರೋಪಿಸಿದ್ದಾರೆ.

ಹಳೆ ದಾಸ್ತಾನು, ಹೊಸ ದಾಸ್ತಾನು ಎಂಬ ನಾಟಕವನ್ನು ಕೇಂದ್ರದ @BJP4India  ಸರ್ಕಾರ ಕೈಬಿಟ್ಟು‌, ರಸಗೊಬ್ಬರಕ್ಕೆ ನೀಡುತ್ತಿರುವ ಸಬ್ಸಿಡಿಯನ್ನು ತಕ್ಷಣ ಹೆಚ್ಚಿಸಿ ಏರಿಸಿರುವ ಬೆಲೆಯನ್ನು ಮೊದಲಿನ ಸ್ಥಿತಿಗೆ ಇಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Leave a Reply