ಬಳ್ಳಾರಿ: ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿಯವರನ್ನು ಮುಗಿಸಲು ಸಂಚು ರೂಪಿಸಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಕೂಡ ಭಾಗಿಯಾಗಿರುವುದರಿಂದ ಇದನ್ನು ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸವರ್ಷದಲ್ಲಿ ಸರ್ಕಾರ ಜನರಿಗೆ ಒಳಿತು ಮಾಡುತ್ತದೆ ಎಂದುಕೊಂಡರೆ, ವಿರೋಧ ಪಕ್ಷಗಳ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಾಸಕ ನಾರಾ ಭರತ್ ರೆಡ್ಡಿ ಸಾವಿರಾರು ಜನರನ್ನು ಕರೆದುಕೊಂಡು ಬಂದು ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಇದಕ್ಕೆ ಪೊಲೀಸರು ಬೆಂಬಲ ನೀಡಿದ್ದಾರೆ. ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವೀಡಿಯೋಗಳಲ್ಲಿ ಯಾರು ಗನ್ ಬಳಸಿದ್ದು ಎಂದು ಸ್ಪಷ್ಟವಾಗಿ ಗೊತ್ತಾಗಿದೆ. ಆದರೂ ಪೊಲೀಸರು ಇನ್ನೂ ಕೊಲೆಗಾರ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ಪೊಲೀಸ್ ಠಾಣೆಗಳೀಗ ಕಾಂಗ್ರೆಸ್ ಕಚೇರಿಯಾಗಿ ಬದಲಾಗಿದೆ. ಬ್ಯಾನರ್ ಕಟ್ಟುವುದು ತಪ್ಪಲ್ಲ, ಆದರೆ ಯಾರದಾದರೂ ಮನೆಗೆ ಕಟ್ಟುವುದು ತಪ್ಪಾಗುತ್ತದೆ. ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು, ಖಾಸಗಿ ಗನ್‌ಮ್ಯಾನ್‌ಗಳನ್ನು ಕರೆದುಕೊಂಡು ಬಂದು ಮನೆಯ ಕಾಂಪೌಂಡ್ ಮೇಲೆ ಬ್ಯಾನರ್ ಕಟ್ಟಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಕೊಡಬೇಕು. ಈ ಬಗ್ಗೆ ರಾಜ್ಯಪಾಲರಿಗೂ ಮನವಿ ಮಾಡಲಾಗುವುದು. ತನಿಖೆ ಮಾಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಕೋರಲಾಗುವುದು ಎಂದರು.
ಶಾಸಕ ಜನಾರ್ದನ ರೆಡ್ಡಿಯವರನ್ನು ಮುಗಿಸಲು ಮಾಡಿದ ಸಂಚು ಎಂಬುದು ನಾನು ಮಾಡುವ ನೇರ ಆಪಾದನೆ. ಶ್ರೀರಾಮುಲು ಬರದೇ ಇದ್ದಿದ್ದರೆ ಇನ್ನಷ್ಟು ಸಮಸ್ಯೆ ಉಂಟಾಗುತ್ತಿತ್ತು. ಅಪಾಯಕ್ಕೊಳಗಾದವರಿಗೆ ಗೃಹ ಸಚಿವರು ಕರೆ ಮಾಡಿ ರಕ್ಷಣೆ ನೀಡಬೇಕಿತ್ತು. ಆದರೆ ಗೃಹ ಸಚಿವರು ಗುಂಡು ಹಾರಿಸಿದವರಿಗೆ ಕರೆ ಮಾಡಿ ಕ್ಷೇಮ ವಿಚಾರಿಸಿದ್ದಾರೆ. ವರ್ಗಾವಣೆ ದಂಧೆಯ ಪ್ರತಿಫಲವನ್ನು ನಾವೀಗ ನೋಡಿದ್ದೇವೆ. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಶಾಸಕನ ಮನೆ ಬಳಿ ಬಂದು ಗುಂಡು ಹಾರಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿ ಮುಗಿಯುತ್ತಾ ಬಂದಿದ್ದು, ಜನರು ಇನ್ನು ಕಾಂಗ್ರೆಸ್ ಶಾಸಕರನ್ನು ಕಸದ ಬುಟ್ಟಿಗೆ ಹಾಕುತ್ತಾರೆ ಎಂದರು.
ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡು ಸತ್ತರು. ರಾಯಚೂರಿನಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಒತ್ತಡದಿಂದ ಸತ್ತುಹೋದರು. ಸಿಎಂ ಸಿದ್ದರಾಮಯ್ಯನವರೇ ಪೊಲೀಸ್ ಅಧಿಕಾರಿಯ ಕೆನ್ನೆಗೆ ಹೊಡೆಯಲು ಹೋಗಿದ್ದರು. ಈ ಪ್ರಕರಣದಲ್ಲಿ ಎಸ್‌ಪಿಯನ್ನು ಅಮಾನತು ಮಾಡಿದ್ದಾರೆ. ವಿಷಯವನ್ನು ತಿರುಚಲು ಇಂತಹ ಕ್ರಮ ಕೈಗೊಂಡಿದ್ದಾರೆ. ಇದು ಸರಿಯಲ್ಲ ಎಂದರು.
ಇದರಲ್ಲಿ ಸತ್ಯಶೋಧನೆ ಮಾಡುವಂಥದ್ದು ಏನೂ ಇಲ್ಲ. ಇಲ್ಲಿ ಯಾರದ್ದು ತಪ್ಪಿದೆ ಎಂದು ಸ್ಪಷ್ಟವಾಗಿ ಎಲ್ಲರಿಗೂ ಗೊತ್ತಿದೆ. ಬಿಜೆಪಿ ಮೇಲೆ ಆರೋಪ ಹೊರಿಸಲು ಸತ್ಯಶೋಧನೆ ಮಾಡಲಾಗುತ್ತಿದೆ. ಪೊಲೀಸರು ಕೊಟ್ಟಿರುವ ಮಾಹಿತಿ ಪ್ರಕಾರ, ಭರತ್ ರೆಡ್ಡಿಯೇ ಸಾವಿರಕ್ಕೂ ಅಧಿಕ ಬೆಂಬಲಿಗರ ಜೊತೆ ಜನಾರ್ದನ ರೆಡ್ಡಿ ಮನೆಗೆ ಬಂದರು ಎಂದಿದೆ. ಹಾರಿರುವ ಬುಲೆಟ್ ಯಾವ ಗನ್‌ನಿಂದ ಬಂದಿದ್ದು ಎಂದು ಪೊಲೀಸರಿಗೆ ನಿಖರವಾಗಿ ಗೊತ್ತಿದೆ. ಆದರೆ ಹಿರಿಯ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ಇನ್ನಾದರೂ ಸರ್ಕಾರ ಬಾಯಿ ಬಿಟ್ಟು ಸತ್ಯ ಹೇಳಬೇಕು. ಈಗ ಗುಪ್ತಚರ ದಳವೇ ಸತ್ತುಹೋಗಿದೆ ಎಂದರು.
ಕಾಂಗ್ರೆಸ್‌ಗೆ ರಾಮನ ಹೆಸರು ಕಂಡರೆ ಆಗಲ್ಲ. ಮಹರ್ಷಿ ವಾಲ್ಮೀಕಿ ನಮಗೆ ಆರಾಧ್ಯರು. ಆದರೆ ಕಾಂಗ್ರೆಸ್‌ಗೆ ಇವೆಲ್ಲವೂ ಆಗುವುದಿಲ್ಲ. ಬಳ್ಳಾರಿಯ ಬಿಜೆಪಿ ಕಾರ್ಯಕರ್ತರೊಂದಿಗೆ ನಾವು ನಿಲ್ಲುತ್ತೇವೆ. ಇದೊಂದೇ ಬುಲೆಟ್ ಹಾರಿಲ್ಲ. ಐದಾರು ಬುಲೆಟ್ ಹಾರಿದೆ. ಈ ತಪ್ಪಿತಸ್ಥರು ಎಂದು ಯಾರು ಬಹಿರಂಗವಾಗಬೇಕಿದೆ. ಶಾಸಕರ ಬೆಂಬಲಿಗರು, ಖಾಸಗಿ ಗನ್‌ಮ್ಯಾನ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಬ್ಯಾನರ್ ಕಟ್ಟಲು ಯಾರು ಅನುಮತಿ ನೀಡಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಬೇಕು ಎಂದು ಒತ್ತಾಯಿಸಿದರು.




