ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ

10 months ago

ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ: ಮರಣೋತ್ತರ ಪರೀಕ್ಷೆಯಲ್ಲಿ ದೃಢ

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟ ಐದು ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಮೃತ ತಾಯಿ ಹುಲಿಗೆ 8 ವರ್ಷಗಳಾಗಿದ್ದು, ಮರಿಗಳು ಸುಮಾರು 10 ತಿಂಗಳು ವಯೋಮಾನದವಾಗಿದ್ದು, ಅವುಗಳು ವಿಷ ಪ್ರಾಶನದಿಂದ ಮೃತಪಟ್ಟಿವೆ ಎಂದು ಸಿಸಿಎಫ್ ಹೀರಾಲಾಲ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಐವರು ದನಗಾಹಿಗಳನ್ನು‌ ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಹುಲಿಗಳ ಕಳೇಬರ ಪತ್ತೆಯಾದ ಅನತಿ ದೂರದಲ್ಲೇ ಹಸುವಿನ ಮೃತದೇಹ ಸಿಕ್ಕಿದ್ದು, ಕ್ರಿಮಿನಾಶಕ ಸಿಂಪಡಣೆ ಮಾಡಿರುವುದು ತಿಳಿದುಬಂದಿದೆ.

ವಿಷ ಹಾಕಿದ್ದ ಹಸುವನ್ನು ತಿಂದು ಹುಲಿಗಳು ಅಸುನೀಗಿರುವುದು ದೃಢವಾಗಿದ್ದು, ಹಸು ಬೇಟೆಯಾಡಿದ ಕೋಪಕ್ಕೆ ದನಗಾಹಿಗಳೇ ವಿಷ ಇಟ್ಟರೇ, ಇಲ್ಲವೇ ಬೇಟೆಗಾರರು ವಿಷ ಇಟ್ಟಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಮಲೆ ಮಹದೇಶ್ವರ ವನ್ಯಜೀವಿಧಾಮ ಮತ್ತು ಕಾವೇರಿ ವನ್ಯಜೀವಿಧಾಮದಲ್ಲಿ ಬಹುಪಾಲು ಕುಟುಂಬಕ್ಕೆ ಹೈನುಗಾರಿಕೆಯೇ ಮುಖ್ಯ ಕಸುಬಾಗಿದೆ. ಕಾಡಂಚಿನ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಲು ಬಿಡುವ ಪರಿಪಾಠವಿದೆ. ಈ ವೇಳೆ, ವನ್ಯಜೀವಿಗಳ ದಾಳಿಗೆ ಜಾನುವಾರುಗಳು ಬಲಿಯಾಗಿರುವ ಘಟನೆಗಳು ನಡೆದಿವೆ. ಈಗ ಹುಲಿಗಳ ಸಾವಿಗೆ ಕಾರಣ ಏನೆಂಬುದರ ಕುರಿತು ತನಿಖೆ ನಡೆಯುತ್ತಿದೆ.

Leave a Reply