ಅಧಿಕಾರ ವಿಕೇಂದ್ರೀಕರಣದಲ್ಲಿ ಜನರ ಒಳಗೊಳ್ಳುವಿಕೆ ಮುಖ್ಯ: ಸಿದ್ದರಾಮಯ್ಯ

11 months ago

ಬೆಂಗಳೂರು: ಗ್ರಾಮ ಠಾಣಾ ಗಡಿಯನ್ನು ಬಹಳ ಹಿಂದೆ ನಿಗದಿ ಪಡಿಸಲಾಗಿದ್ದು, ಪ್ರಸ್ತುತ ವಿಸ್ತರಣೆ ಆಗಿರುವ ಪ್ರದೇಶವನ್ನು ಪುನರ್ ಸಮೀಕ್ಷೆ ಮಾಡಿಸಿ ನಿಗದಿಪಡಿಸಲು ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಕ್ರಮ ವಹಿಸಬೇಕು‌ ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರವನ್ನು ಗ್ರಾಮ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದರು.

ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು ಲ್ಯಾಂಡ್ ಬ್ಯಾಂಕ್ ಸ್ಥಾಪನೆ, ಗ್ರಾಮ ನಕ್ಷೆ ಹೊಂದಿರದ ಗ್ರಾಮಗಳಿಗೆ ಗ್ರಾಮ ನಕ್ಷೆ ರಚನೆ ಕುರಿತಂತೆಯೂ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ  ಸೂಚಿಸಿದರು.

ನಾನು ವಿಕೇಂದ್ರೀಕರಣದ ಪರ, ಅಧಿಕಾರವನ್ನು ಗ್ರಾಮ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಅಧಿಕಾರ ವಿಕೇಂದ್ರೀಕರಣದಲ್ಲಿ ಜನರ ಒಳಗೊಳ್ಳುವಿಕೆ ಮುಖ್ಯ. ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ಯೋಜನಾ ಮತ್ತು ಅಭಿವೃದ್ಧಿ ಸಮಿತಿಗಳು ಬಜೆಟ್ ಮಂಡನೆಗೆ ಪೂರ್ವದಲ್ಲಿ ಸಭೆ ಕರೆದು ಅಭಿಪ್ರಾಯಗಳನ್ನು ಚರ್ಚಿಸಬೇಕು ಎಂದರು.

ನೀತಿ ಯೋಜನೆ ಸಮಿತಿಗಳ ಆಯ್ಕೆ ಕಾಲಕಾಲಕ್ಕೆ ಆಗುವ ಕುರಿತಂತೆ ಮತ್ತು ನಿಯಮಿತವಾಗಿ ಸಭೆ ನಡೆಯಲು ಅಧಿಕಾರಿಗಳು ಕ್ರಮ ವಹಿಸಬೇಕು. ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ತಾಲ್ಲೂಕು, ಜಿಲ್ಲಾ ಮಟ್ಟದ ಸಮಿತಿಯ ಶಿಫಾರಸುಗಳನ್ನು ಗಮನಕ್ಕೆ ತಂದು ಬಜೆಟ್ ಪೂರ್ವ ಸಭೆಗಳಲ್ಲಿ ಮಂಡಿಸಬೇಕು. ಸಂವಿಧಾನದ (73)(74) ರನ್ವಯ ಗ್ರಾಮ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸರಿಯಾಗಿ ಪಾಲನೆ ಆಗುತ್ತಿಲ್ಲ. ಇದನ್ನು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಜವಾಬ್ದಾರಿ ನಕ್ಷೆಯನ್ನು ಸಿದ್ದಪಡಿಸಲು 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯು 13 ಇಲಾಖೆಗಳಿಗೆ ಸಂಬಂಧಿಸಿದಂತೆ ಜವಾಬ್ದಾರಿ ನಕ್ಷೆಯನ್ನು ಸಿದ್ಧಪಡಿಸಿದೆ ಎಂದರು.

ಅದರಲ್ಲಿ ಆರೋಗ್ಯ ಇಲಾಖೆ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ, ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ ಮತ್ತು ರೇಷ್ಮೆ ಸೇರಿದಂತೆ ಒಂಬತ್ತು ಇಲಾಖೆಗಳ ಕಾರ್ಯಚಟುವಟಿಕೆಯ ಜವಾಬ್ದಾರಿ ನಕ್ಷೆಗಳು ಅಧಿಸೂಚನೆಗೊಂಡಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳಿಂದ ಸಹಮತಿ ಬಾಕಿ ಇದೆ. ಬಾಕಿ ಇರುವ ಉಳಿದ 16 ಇಲಾಖೆಗಳ ಕಾರ್ಯಚಟುವಟಿಕೆಯ ಜವಾಬ್ದಾರಿ ನಕ್ಷೆಯನ್ನು 2025ರ ಆಗಸ್ಟ್ 15ರ ಒಳಗೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ನಿಯಮಿತವಾಗಿ ರಾಜ್ಯ ಪ್ರವಾಸ ಮಾಡಬೇಕು. ಗ್ರಾಮ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ಹಿಂದುಳಿದವರಿಗೆ ಮೀಸಲಾತಿ ಸರಿಯಾಗಿ ಪಾಲನೆ ಆಗುತ್ತಿದೆಯೇ ಎಂದು ಗಮನ ವಹಿಸಬೇಕು ಎಂದು ಸಲಹೆ ನೀಡಿದರು.

Leave a Reply