ಕನ್ನಡ ಪಠ್ಯದಲ್ಲೇ ಕನ್ನಡ ವಿರೋಧಿ ಅಂಶ: ಕರವೇ ನಾರಾಯಣಗೌಡ ಕಿಡಿ

4 years ago

ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯ ಸಮರ್ಥನೆಗಾಗಿ ಸುಳ್ಳುಗಳನ್ನು ಹೇಳಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಿಲುವು ಖಂಡನಾರ್ಹ. ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ. ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯನ್ನು ಕೂಡಲೇ ವಿಸರ್ಜಿಸಿ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ @BSBommai ಅವರು ಈ ಕೂಡಲೇ ಬರಗೂರು ರಾಮಚಂದ್ರಪ್ಪ,‌ದೇವನೂರು ಮಹದೇವ ಅವರು ಸೇರಿದಂತೆ ಸಾಹಿತಿಗಳು, ಶಿಕ್ಷಣ ತಜ್ಞರ ಸಭೆ ನಡೆಸಬೇಕು. ಪಠ್ಯಪುಸ್ತಕ ವಿವಾದವನ್ನು ಬಗೆಹರಿಸಬೇಕು. ನಾಡದ್ರೋಹಿಯ ಅಧ್ಯಕ್ಷತೆಯ ಪುನರ್ ಪರಿಶೀಲನಾ ಸಮಿತಿಯನ್ನು ರದ್ದುಗೊಳಿಸಬೇಕು ಎಂದಿದ್ದಾರೆ.

ಭಾಷಾ ಅಭಿಮಾನ, ಪ್ರಾದೇಶಿಕವಾದ ದೇಶ ಎದುರಿಸುತ್ತಿರುವ ಸಮಸ್ಯೆಗಳು, ರಾಷ್ಟ್ರವಾದ ಕ್ಕೆ ಇವು ಕಂಟಕ ಎಂದು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ ಎಂದು ಕೇಳಿದೆ. ನಾಡದ್ರೋಹಿಗಳಷ್ಟೇ ಇಂಥ ವಾದ ಮಾಡುತ್ತಾರೆ. ಕನ್ನಡತನ ಎಂಬುದು ಭಾರತೀಯತೆಗೆ ಪೂರಕವೇ ಹೊರತು ಮಾರಕವಲ್ಲ ಎಂದಿದ್ದಾರೆ.

ತನ್ನ ನಾಡನ್ನು, ನಾಡನುಡಿಯನ್ನು ಪ್ರೀತಿಸುವುದು ಹೇಗೆ ರಾಷ್ಟ್ರದ್ರೋಹವಾಗುತ್ತದೆ? ಮಕ್ಕಳಿಗೆ ಇಂಥ ಪಾಠವನ್ನು ಕಲಿಸಿದರೆ ಅವರು ನಾಡದ್ರೋಹಿಗಳಾಗಿ ಬೆಳೆಯುವುದಿಲ್ಲವೇ? ಪ್ರಾದೇಶಿಕವಾದವು ದೇಶದ ಸಮಸ್ಯೆ ಎಂದು ಬಿಂಬಿಸಿರುವ ಪಾಠವನ್ನು ಈ ಕೂಡಲೇ ಕಿತ್ತುಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಭಾಷಾಭಿಮಾನ ರಾಷ್ಟ್ರೀಯತೆ ಶತ್ರು ಎಂದು ಹೇಳುವ ಪಠ್ಯವನ್ನು ಕನ್ನಡಿಗರು ಯಾಕೆ, ಹೇಗೆ ಸಹಿಸಿಕೊಳ್ಳಬೇಕು? ಮ.ರಾಮಮೂರ್ತಿ, ಅ.ನ.ಕೃಷ್ಣರಾಯರು, ಡಾ.ರಾಜಕುಮಾರ್ ಸೇರಿದಂತೆ ಕನ್ನಡ ಚಳವಳಿ ಕಟ್ಟಿಬೆಳೆಸಿದ ಸಾವಿರಾರು ಮಹಾನಾಯಕರಿಗೆ ಮಾಡಿದ ಅವಮಾನವಿದು ಎಂದಿದ್ದಾರೆ.

ಕನ್ನಡ ಪಠ್ಯಪುಸ್ತಕಗಳಲ್ಲಿ ಕನ್ನಡ ವಿರೋಧಿ ಪಾಠ ಸೇರಿಸುವುದು ಎಂಥ ನೀಚತನ? ಇಷ್ಟು ಧೈರ್ಯ ಎಲ್ಲಿಂದ ಬಂತು? ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿ ಮಾಡಿರುವ ಎಲ್ಲ ಬದಲಾವಣೆಗಳನ್ನೂ ಕೂಡಲೇ ನಿಲ್ಲಿಸಬೇಕು. ಕನ್ನಡದ ಮಕ್ಕಳಿಗೆ ವಿಷ ಉಣಿಸುವುದನ್ನು ಕೂಡಲೇ ನಿಲ್ಲಿಸಿ ಎಂದಿದ್ದಾರೆ.

ನಾನು ಎಡ, ಬಲ ಯಾವ ಪಂಥಕ್ಕೂ ಸೇರಿದವನಲ್ಲ. ನಾನು ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಮನುಷ್ಯಪಂಥಕ್ಕೆ ಸೇರಿದವನು. ಪಠ್ಯಪುಸ್ತಕ ಬದಲಾವಣೆ ಹೆಸರಿನಲ್ಲಿ ಆಗುತ್ತಿರುವ ಅಪಾಯಕಾರಿ ಬೆಳವಣಿಗೆಗಳು ನನಗೆ ಗೊತ್ತಿದೆ. ಕನ್ನಡ ಸಾಹಿತಿಗಳ ಬೆನ್ನಿಗೆ ನಾವು ನಿಲ್ಲುತ್ತೇವೆ ಎಂದಿದ್ದಾರೆ.

Leave a Reply