ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಮಾಜದ ಕೋಮು ಸಾಮರಸ್ಯ ಕದಡುವಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಾ, ಆ ಮೂಲಕ ರಾಜಕೀಯ ಲಾಭ ಪಡೆಯುವ ಹವಣಿಕೆಯಲ್ಲಿದೆ. ಈ ಲೆಕ್ಕಾಚಾರವೇ ಮುಂದೆ ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹಿಜಬ್, ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ಹಬ್ಬಗಳಲ್ಲಿ ವ್ಯಾಪಾರಕ್ಕೆ ಅವಕಾಶ ನಿರಾಕರಣೆ, ಹಲಾಲ್ ವರ್ಸಸ್ ಜಟ್ಕಾ ಮತ್ತು ರಂಜಾನ್ ಶುರುವಾದ ನಂತರ ಆಜಾನ್ ಮೈಕ್ ವಿವಾದಗಳು ಎದ್ದಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಮಂದಿರ, ಮಸೀದಿ, ಚರ್ಚು ಎಲ್ಲಾ ಕಡೆ ಧ್ವನಿ ವರ್ಧಕಗಳನ್ನು ಹಾಕುತ್ತಾರೆ, ಇದರಿಂದ ಇಷ್ಟುದಿನ ಯಾರಿಗೆ ತೊಂದರೆ ಆಗಿತ್ತು? ಕಣ್ಣೆದುರೇ ಸಮಾಜದ ಸಾಮರಸ್ಯ ಕುಸಿದುಬೀಳುತ್ತಿದ್ದರೂ, ಅದಕ್ಕೆ ಕಾರಣವಾದ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗದಷ್ಟು ಮುಖ್ಯಮಂತ್ರಿಗಳು ಅಸಮರ್ಥರೇ? ಎಂದು ಪ್ರಶ್ನಿಸಿದ್ದಾರೆ.
ದಿನೇ ದಿನೆ ರಾಜ್ಯದಲ್ಲಿ ಇಷ್ಟೊಂದು ಅಶಾಂತಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಈ ಬಗ್ಗೆ ಮಾತನಾಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದು ಈ ಎಲ್ಲಾ ಸಮಾಜ ವಿರೋಧಿ ಕೃತ್ಯಗಳಿಗೆ ಸಹಮತವೋ ಅಥವಾ ಕಾನೂನು ಕ್ರಮ ಜರುಗಿಸಲಾಗದ ಅಸಹಾಯಕತೆಯೋ? ಎಂದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಹಿತಾಸಕ್ತಿ ಮತ್ತು ಜನರ ಭವಿಷ್ಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಮುನ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗುವುದು ಒಳಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
#ಸೌಹಾರ್ದತೆ




