ಬೆಳಗಾವಿ: ಬೆಂಗಳೂರಿನ ಬಾಲಭವನಕ್ಕಿಂತ ಸುಂದರವಾಗಿ, ವಿಶಿಷ್ಟವಾಗಿ ಬೆಳಗಾವಿ ಬಾಲಭವನ ನಿರ್ಮಿಸಬೇಕೆನ್ನುವುದು ನನ್ನ ಸಂಕಲ್ಪ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಂಗಳೂರಿನ ಜವಾಹರ ಬಾಲಭವನ ಸೊಸೈಟಿ, ನಿರ್ಮಿತಿ ಕೇಂದ್ರ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಜಿಲ್ಲಾ ಬಾಲ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ, ಮಾತನಾಡಿದ ಅವರು, 20 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಬಾಲಭವನ ಬೆಳಗಾವಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂದರು.
ಬೆಳಗಾವಿ ಎರಡನೇ ರಾಜಧಾನಿ ಮಟ್ಟಕ್ಕೆ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ನಡೆಯಬೇಕು, ಮೂಲಭೂತ ಸೌಲಭ್ಯಗಳು ಕೂಡ ನಿರ್ಮಾಣವಾಗಬೇಕು ಎಂದರು.
ನಮ್ಮ ಇಲಾಖೆಯಿಂದ ಜಿಲ್ಲೆಗೆ ಅನೇಕ ಯೊಜನೆಗಳನ್ನು ತರಲಾಗುತ್ತಿದೆ. ಇಷ್ಟೊಂದು ದೊಡ್ಡ ಜಿಲ್ಲೆಗೆ ಈವರೆಗೂ ಒಂದು ಸುಸಜ್ಜಿತ ಭಾಲಭವನ ಇಲ್ಲ. ನಮ್ಮ ಇಲಾಖೆಗೆ ಸುಸಜ್ಜಿತ ಕಟ್ಟಡ ಕೂಡ ಇಲ್ಲ. ಈ ಹಿನ್ನೆಲೆಯಲ್ಲಿ ಬಾಲಭವನಕ್ಕೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದರು.
ನಗರದ ಮಧ್ಯದಲ್ಲಿಯೇ 4 ಎಕರೆ ಈ ವಿಶಾಲ ಜಾಗವನ್ನು ಗುರುತಿಸಿ ಬಾಲಭವನ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಜಾಗದ ಮಾರುಕಟ್ಟೆ ಮೌಲ್ಯ100 ಕೋಟಿಗೂ ಅಧಿಕ. ಇದರ ಜೊತೆಗೆ, ನಮ್ಮ ಇಲಾಖೆಯ ಕಟ್ಟಡ ನಿರ್ಮಾಣಕ್ಕೆ ಸಹ ನಿರ್ಧರಿಸಲಾಗಿದೆ. ಇದಕ್ಕೆ 6 ಕೋಟಿ ರೂ. ಮಂಜೂರಾಗಿದ್ದು, ಇಷ್ಟರಲ್ಲೇ ಹಣ ಬಿಡುಗಡೆಯಾಗಲಿದೆ. ಬಾಲಭವನಕ್ಕೆ ಈಗಾಗಲೆ 20 ಕೋಟಿ ರೂ. ಮಂಜೂರು ಮಾಡಲಾಗಿದೆ, ಈಗಾಗಲೇ 2 ಕೋಟಿ ರೂ. ಬಿಡುಗಡೆ ಕೂಡ ಆಗಿದೆ ಎಂದರು.
ಮಕ್ಕಳಿಗಾಗಿ ರೈಲು, ಫ್ಯಾಂಟಸಿ ಪಾರ್ಕ್ ಸೇರಿದಂತೆ, ಆಟದೊಂದಿಗೆ ಕಲಿಯುವುದಕ್ಕೆ ಅವಕಾಶವಾಗುವಂತೆ ಸರ್ವವಿಧದ ಸೌಕರ್ಯಗಳನ್ನು ಬಾಲಭವನ ಒಳಗೊಳ್ಳಲಿದೆ. ಮಕ್ಕಳಿಗೆ ಕಲಿಯುವುದಕ್ಕೆ ಮತ್ತು ನಲಿಯುವುದಕ್ಕೆ ಇದೊಂದು ಅತ್ಯುತ್ತಮ ಸ್ಥಳವಾಗಬೇಕೆನ್ನುವುದೇ ನನ್ನ ಉದ್ದೇಶ ಎಂದರು.
ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಯೋಜನೆ ಯಶಸ್ವಿಯಾಗಿರುವುದು ನಮಗೆಲ್ಲ ಹೆಮ್ಮೆ ತರುವ ಸಂಗತಿಯಾಗಿದೆ. ಆದರೆ, ಗೃಹಲಕ್ಷ್ಮೀ ಯೋಜನೆಗೆ ಪ್ರಚಾರದ ಅವಶ್ಯಕತೆ ಇದೆ ಎಂದರು.
ನಮ್ಮ ಯೋಜನೆಗಳನ್ನು ಕಾಪಿ ಮಾಡಲಾಗುತ್ತಿದೆ. ಇದು ಗೃಹಲಕ್ಷ್ಮೀ ಯೋಜನೆಯ ಜನಪ್ರಿಯತೆಗೆ ಸಾಕ್ಷಿ. ನಾಳೆ ಗೃಹಲಕ್ಷ್ಮೀ ಯೋಜನೆಯನ್ನು ಜನೋಪಯೋಗಿಯಾಗಿ ಮತ್ತು ಸ್ವಾವಲಂಬನೆಗಾಗಿ ಬಳಸಿದ ಮಹಿಳೆಯರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ. ಅವರಿಗೆಲ್ಲ ಆಡಳಿತ ಸೌಧವನ್ನು, ಆಡಳಿತ ವ್ಯವಸ್ಥೆಯನ್ನು ಹತ್ತಿರದಿಂದ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಪ್ರತಿಕ್ರಿಯಿಸಿ, ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡೋಣ. ಪ್ರಚೋದನಾತ್ಮಕ ಹೋರಾಟ ಮಾಡುವುದು ಬೇಡ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದರು.
ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, ಬಾಲಭವನ ಸೊಸೈಟಿ ಅಧ್ಯಕ್ಷ ಜಿ.ಆರ್.ನಾಯ್ಡು, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಎನ್.ಸಿದ್ದೇಶ್ವರ, ಕಾರ್ಪೊರೇಟರ್ ಸಂದೀಪ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.




