ಬೆಂಗಳೂರು: ಕೋವಿಡ್ ಅಕ್ರಮದಲ್ಲಿ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ ಸಮಿತಿ ಶಿಫಾರಸ್ಸುಗಳ ಬಗ್ಗೆ ಕ್ರಮ ಕೈಗೊಳ್ಳಲು ರಚಿಸಲಾಗಿದರುವ ಸಂಪುಟ ಉಪ ಸಮಿತಿಗೆ ಮಾರ್ಗದರ್ಶನ ನೀಡಲು ನಿವೃತ್ತ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸಮಿತಿ ಶಿಫಾರಸ್ಸುಗಳ ಅನುಷ್ಠಾನಕ್ಕೆ ರಚಿಸಲಾಗಿರುವ ಸಂಪುಟ ಉಪ ಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್, ಈ ಪ್ರಕರಣದಲ್ಲಿ ನಾವು ಯಾರಿಗೂ ಅನಗತ್ಯವಾಗಿ ತೊಂದರೆ ಮಾಡಬಾರದು ಎಂದು ಈ ನಿರ್ಧಾರ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಸಮಿತಿ ರಚಿಸಿದ್ದೇವೆ ಎಂದರು.
ವರದಿಯ ಶಿಫಾರಸ್ಸಿನಂತೆ ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮತ್ತೊಂದೆಡೆ ಇಲಾಖೆಯಲ್ಲಿ ಅಧಿಕಾರಿಗಳ ವಿರುದ್ಧವೂ ವಿಚಾರಣೆ ನಡೆಯಲಿದೆ. ಕೆಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಹೀಗಾಗಿ ಎಷ್ಟು ಪ್ರಕರಣ ದಾಖಲಾಗುತ್ತವೋ ಗೊತ್ತಿಲ್ಲ ಎಂದರು.
ಸಾಂಕ್ರಾಮಿಕ ನಿಯಂತ್ರಿಸಲು ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ 84 ಲಕ್ಷ ಆರ್ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿ 502 ಕೋಟಿ ಬಿಲ್ ಮಾಡಿದ್ದಾರೆ. 400 ಕೋಟಿ ಪಾವತಿ ಮಾಡಲಾಗಿದೆ. 84 ಲಕ್ಷ ಎಂದರೆ ಬೆಂಗಳೂರಿನಲ್ಲಿರುವ ಪ್ರತಿ ಮನೆಗೆ ಇಬ್ಬರಿಗೆ ಪರೀಕ್ಷೆ ಮಾಡಿರಬೇಕು. ಕಿದ್ವಾಯಿ ಸಂಸ್ಥೆಯೊಂದರಲ್ಲೇ 24 ಲಕ್ಷ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿದ್ದಾರೆ. ತಾಂತ್ರಿಕವಾಗಿ ಸಮರ್ಥವಿಲ್ಲದೆ, ಐಸಿಎಂಆರ್ ಅನುಮತಿ ಇಲ್ಲದೆ ಪರೀಕ್ಷೆ ನಡೆಸಲಾಗಿದೆ. 146 ಕೋಟಿ ಬಿಲ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 24 ಲಕ್ಷ ಜನರಿಗೆ ಒಂದೇ ಕಡೆ ಪರೀಕ್ಷೆ ಎಂದರೆ ಅಲ್ಲಿ ಎಷ್ಟು ಜನದಟ್ಟಣೆ, ಸರದಿ ಸಾಲು ಇರಬೇಕು. ಹೀಗಾಗಿ ಈ ವಿಚಾರದಲ್ಲಿ ವಿಧಾನಸೌಧದಿಂದ ಕೆಳ ಹಂತದವರೆಗೂ ಯಾವ ರೀತಿ ಪ್ರಕ್ರಿಯೆ ಮಾಡಿದ್ದಾರೆ? ಕಾನೂನು ಚೌಕಟ್ಟು ಮೀರಿ ಏನೆಲ್ಲಾ ತೀರ್ಮಾನ ಮಾಡಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ಈ ವರದಿಯನ್ನು ನಾವು ಪರಿಶೀಲನೆ ಮಾಡುತ್ತೇವೆ ಎಂದರು.
ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪು ನಡೆದಿಲ್ಲ ಎಂದು ವರದಿ ನೀಡಿದ್ದನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ಮತ್ತೆ ತನಿಖೆಯಾಗಬೇಕು. ನಾನು ಹಾಗೂ ಸಿದ್ದರಾಮಯ್ಯ ಅವರೇ ಆ ಆಸ್ಪತ್ರೆಗೆ ಹೋಗಿ ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿದ್ದೆವು. 36 ಜನ ಸತ್ತರೆ, ಆಗಿನ ಸಚಿವರು ಕೇವಲ ಮೂರು ಮಂದಿ ಸತ್ತಿದ್ದರು ಎಂದು ಹೇಳಿದ್ದರು. ನಾನು ಮೃತಪಟ್ಟ 36 ಮಂದಿಯ ಮನೆಗಳಿಗೆ ಭೇಟಿ ನೀಡಿದ್ದೇನೆ. ಈ ವಿಚಾರವಾಗಿ ಬೆಳಗಾವಿಯಲ್ಲಿ ಸಭೆ ಮಾಡಿ ಈ ವಿಚಾರಣೆ ಪ್ರಕ್ರಿಯೆ ಪರಿಶೀಲಿಸುತ್ತೇವೆ. ಈ ಸಮಿತಿಯು ಅಧಿಕಾರಿಗಳ ವಿಚಾರಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದರು.




