ಬಗರ್ ಹುಕುಂ ಅರ್ಜಿಗಳ ವಿಂಗಡಣೆಗೆ ಗಡುವು ವಿಧಿಸಿದ ಕೃಷ್ಣ ಬೈರೇಗೌಡ

2 years ago

ಬೆಂಗಳೂರು: ಭೂ ರಹಿತರಿಗೆ ಭೂಮಿ ಮಂಜೂರುಗೊಳಿಸುವ ಬಗರ್ ಹುಕುಂ ಅರ್ಜಿಗಳ ಪೈಕಿ ಅರ್ಹ-ಅನರ್ಹ ಅರ್ಜಿಗಳನ್ನು ರಾಜ್ಯದ ಎಲ್ಲಾ ತಹಶೀಲ್ದಾರರೂ ಈ ತಿಂಗಳ 25 ರ ಒಳಗೆ ವಿಂಗಡಿಸಿ ಜಿಲ್ಲಾಧಿಕಾರಿಗಳಿಗೆ ನೀಡಬೇಕು. ತಪ್ಪಿದರೆ ಎಲ್ಲರಿಗೂ ಶೋಕಾಸ್ ನೊಟೀಸ್ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ವ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಬಗರ್ ಹುಕುಂ ಅರ್ಜಿ ವಿಲೇ ಪ್ರಗತಿ ಪರಿಶೀಲನೆ ನಡೆಸಿದ ಅವರು ಕಾಲಮಿತಿಯಲ್ಲಿ ಅರ್ಜಿಗಳನ್ನು ವಿಲೇವಾರಿ  ಮಾಡುವಂತೆ ತಾಕೀತು ಮಾಡಿದರು.

ಬಗರ್ ಹುಕುಂ ಬಡವರ ಕೆಲಸ. ಬಡ ರೈತರಿಗೆ ಶೀಘ್ರ ಭೂ ಮಂಜೂರು ಮಾಡಬೇಕು ಎಂದು ರೈತಪರ ಸಂಘಟನೆಗಳು ದಶಕಗಳಿಂದ ಹೋರಾಡುತ್ತಿವೆ. ಈ ಬಗ್ಗೆ ಸರ್ಕಾರಕ್ಕೂ ಬದ್ಧತೆ ಇದ್ದು, ರೈತ ಹೋರಾಟಗಾರರ ದ್ವನಿಗೆ ಕಿವಿಗೊಡುವ ಅವರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಉತ್ತರದಾಯಿತ್ವ ನನ್ನ ಮೇಲೂ ಇದೆ ಎಂದರು.

ಬಗರ್ ಹುಕುಂ ಕೆಲಸಗಳಿಗೆ ಚುರುಕು ಮುಟ್ಟಿಸಬೇಕು ಎಂಬ ಕಾರಣದಿಂದಲೇ ನಾನು ಕಳೆದ ಒಂದು ವರ್ಷದಿಂದ ವೈಯಕ್ತಿಕವಾಗಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದೇನೆ. ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ಪ್ರತಿ ತಿಂಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಸಭೆ ನಡೆಸಿ ಪ್ರಗತಿ ಪರಿಶೀಲಿಸುತ್ತಿದ್ದೇನೆ. ಆದರೂ ಕೆಲವು ತಹಶೀಲ್ದಾರರು ಬಡವರ ಕೆಲಸದ ಬಗ್ಗೆ ಅಸಡ್ಡೆ ಧೋರಣೆ ತೋರುತ್ತಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಬಡವರ ಕೆಲಸದ ಬಗ್ಗೆ ಅಧಿಕಾರಿ ವರ್ಗದಿಂದ ಈ ಮಟ್ಟದ ಅಸಡ್ಡೆಯನ್ನು ನಾನು ನಿರೀಕ್ಷಿಸಿರಲಿಲ್ಲ. ರಾಜ್ಯದ ಒಟ್ಟಾರೆ 14 ಲಕ್ಷ ರೈತರು ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅರ್ಜಿಗಳ ಪೈಕಿ ಅರ್ಹ ಅರ್ಜಿ ಯಾವುದು? ಅನರ್ಹ ಅರ್ಜಿ ಯಾವುದು? ಎಂದು ಪರಿಶೀಲಿಸಲು ಅಧಿಕಾರಿಗಳಿಗೆ ಒಂದೂವರೆ ವರ್ಷ ಬೇಕಾ? ಎಂದು  ಕಿಡಿಕಾರಿದರು.

ಇದೇ ತಿಂಗಳ 25ರ ಒಳಗೆ ತಹಶೀಲ್ದಾರರು ಅರ್ಹ-ಅನರ್ಹ ಅರ್ಜಿಗಳನ್ನು ವಿಂಗಡಿಸಿ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಎಲ್ಲಾ ಜಿಲ್ಲಾಧಿಕಾರಿಗಳು 26 ರ ಬೆಳಗ್ಗೆಯೇ ಇಡೀ ಜಿಲ್ಲೆಯ ಪಟ್ಟಿಯನ್ನು ಒಂದುಗೂಡಿಸಿ ನನಗೆ ಸಲ್ಲಿಸಬೇಕು. ಹಾಗೂ ಡಿಸೆಂಬರ್ ಮೊದಲ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಡಿಜಿಟಲ್ ಭೂ ಸಾಗುವಳಿ ಚೀಟಿ ನೀಡಬೇಕು ಎಂದರು. 

ಬಗರ್ ಹುಕುಂ ಬಡವರ ಕೆಲಸವಾಗಿದ್ದು, ಅತ್ಯುತ್ತಮವಾಗಿ ಕೆಲಸ ನಿರ್ವಹಿಸುವ ತಹಶೀಲ್ದಾರರುಗಳಿಗೆ ಪ್ರಶಂಸನೀಯ ಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಹಶೀಲ್ದಾರ್ ಶ್ರೀಧರ್ ಶೇಖರ್ ಮುಂದಲಮನಿ ಹಾಗೂ ಮುಂಡಗೋಡು ತಾಲೂಕು ತಹಶೀಲ್ದಾರ್ ಮುಂಡಗೋಡು ಶಂಕರ್ ಗೌಡಿ ಅವರ ಪ್ರಶಂಸಿಸಿದ ಅವರು, ಹಲವರು ಕೆಲಸ ಮಾಡಿ ಅಂದ್ರೆ ಬಗರ್ ಹುಕುಂ ಆ್ಯಪ್ ಸಹಕರಿಸುತ್ತಿಲ್ಲ, ನೆಟ್ವರ್ಕ್ ಇಲ್ಲ ಎಂದು ಇಲ್ಲ ಸಲ್ಲದ ಕಾರಣ ನೀಡುತ್ತಾರೆ. ಆದರೆ, ನೆಟ್ವರ್ಕೆ ಇಲ್ಲದ ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು ಹೇಗೆ ಶೇ.80ರಷ್ಟು ಬಗರ್ ಹುಕುಂ ಅರ್ಜಿ ವಿಲೇ ಮಾಡಲು ಸಾಧ್ಯವಾಯಿತು? ಇಲ್ಲಿ ಸಾಧ್ಯವಾಗುವುದಾದರೆ ಬೇರೆ ತಾಲೂಕುಗಳಲ್ಲೂ ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದರು.

ಬಗರ್ ಹುಕುಂ ವಿಚಾರದಲ್ಲಿ ಉತ್ತಮ ಸೇವೆ ಸಲ್ಲಿಸುವ ಕಾಲಮಿತಿಯೊಳಗೆ ಅರ್ಜಿ ವಿಲೇಗೊಳಿಸುವ ಅಧಿಕಾರಿಗಳನ್ನು ಬೆಂಗಳೂರಿಗೆ ಖುದ್ದಾಗಿ ಕರೆದು ಮುಂದಿನ ತಿಂಗಳ ಸಭೆಯಲ್ಲಿ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

Leave a Reply