ಅಸ್ಪೃಶ್ಯತೆ ನಿವಾರಣೆಗೆ ಸಮುದಾಯದಲ್ಲಿ ಜಾಗೃತಿ ಮೂಡಬೇಕು: ಸತ್ಯನಾರಾಯಣ

4 years ago

ಸುರಪುರ: ಸಮಾಜದಲ್ಲಿ ಅಸ್ಪೃಶ್ಯತೆ ಸಂಪೂರ್ಣ ನಿರ್ಮೂಲನೆಯಾಗಬೇಕಾದರೆ ಕಾನೂನಿನ ಜತೆಗೆ  ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಸುರಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ ಹೇಳಿದರು.

ತಾಲೂಕಿನ ಮಾಲಗತ್ತಿಯಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಸ್ಪೃಶ್ಯತೆ ನಿವಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಪರಿಶಿಷ್ಟರಿಗೆ ಹೋಟೆಲ್, ಕ್ಷೌರದಂಗಡಿ, ದೇವಸ್ಥಾನಗಳಲ್ಲಿ ಪ್ರವೇಶಕ್ಕೆ ತೊಂದರೆಯಿದೆ. ಕೆಲವೆಡೆ ಆಶಾ ಕಾರ್ಯಕರ್ತೆಯರೂ ಕೂಡ ಅಸ್ಪೃಶ್ಯತೆಯ ನೋವು ಅನುಭವಿಸುವ ಸ್ಥಿತಿ ಇದೆ ಎಂದರು.

ಗ್ರಾ.ಪಂ. ಸದಸ್ಯ ಆರ್.ಎಸ್.ಮಾಲಗತ್ತಿ ಮಾತನಾಡಿ, ನೂರಕ್ಕೆ ತೊಂಬತ್ತು ಪರ್ಸೆಂಟ್ ಶೋಷಣೆ ದೇವರ ಹೆಸರಿನಲ್ಲಿ ನಡೆಯುತ್ತದೆ. ಈ ಅನಿಷ್ಟ ಪದ್ಧತಿಗಳ  ನಿರ್ಮೂಲನೆ  ಬರೀ ಕಾನೂನಿನ ಮೂಲಕ‌ ಮಾಡುವುದು ಅಸಾಧ್ಯ. ಸರ್ವ ಜನಾಂಗದ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.

ಶಿಕ್ಷಣದಿಂದ ಮಾತ್ರ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಬಹುದು ಎಂದು ಬಾಬಾ ಸಾಹೇಬರು ನಂಬಿದ್ದರು. ಆದರೆ ಶಿಕ್ಷಣವಂತರೆ ಇಂತಹ ಆಚರಣೆ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.

ಮದರ್ ತೆರೆಸಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭೀಮರಾಯ ಸಿಂದಗೇರಿ, ಗ್ರಾ.ಪಂ ಅಧ್ಯಕ್ಷೆ ಯಲ್ಲಮ್ಮ ಗೌಡಗೆರಾ, ವಿಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ದೊರೆ,  ಉಪಾಧ್ಯಕ್ಷ ನಿಂಗಣ್ಣ ಎಚ್ ಸಾಹುಕಾರ, ಸದಸ್ಯ ಯಲ್ಲಪ್ಪ ಆಂಜನೇಯ ಕ್ಯಾಂಪ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಮಲ್ಲೆ, ಸಹ ಶಿಕ್ಷಕ ರಾಜೇಂದ್ರ, ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಪಟೇಲ್,  ಮುಖಂಡರಾದ ಸಣ್ಣ ಮಹಾರಾಯ ಸಾಹುಕಾರ, ನಾರಾಯಣ ದೊರೆ, ನರಸಿಂಹ ನಾಯ್ಕೊಡಿ, ವೆಂಕಟೇಶ ಹವಾಲ್ದಾರ, ಶಿವಲಿಂಗ ಹೊಸ್ಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply