ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ: ಆರ್‌.ಅಶೋಕ

1 year ago

ಬೆಂಗಳೂರು: ವಕ್ಫ್‌ ಮಂಡಳಿ ಬಡವರ ಭೂಮಿ ಕಬಳಿಸುತ್ತಿರುವುದರಿಂದ ಎಲ್ಲರೂ ಭೀತಿಗೊಳಗಾಗಿದ್ದಾರೆ. ಸಚಿವ ಜಮೀರ್‌ ಅಹ್ಮದ್‌ ಇದರ ನೇತೃತ್ವ ವಹಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ನೋಟಿಸ್‌ ವಾಪಸ್‌ ಪಡೆಯಲು ಸೂಚಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಮುಖ್ಯ ಕಾರ್ಯದರ್ಶಿ ಭೂಮಿ ವಶಪಡಿಸಿಕೊಳ್ಳಲು ಲಿಖಿತ ಸೂಚನೆ ನೀಡಿದ್ದಾರೆ. ಈ ಸತ್ಯ ಮರೆಮಾಚಲು ಮುಖ್ಯಮಂತ್ರಿ ಸುಳ್ಳು ಹೇಳಿದ್ದಾರೆ ಎಂದರು.

ಟಿಪ್ಪು ಸುಲ್ತಾನ್‌ ಖಡ್ಗ ಬಳಸಿ ಅಮಾಯಕರನ್ನು ಮತಾಂತರ ಮಾಡಿದ್ದ. ಅದೇ ರೀತಿ ಈಗ ಕಾಂಗ್ರೆಸ್‌ ವಕ್ಫ್‌ ಬಳಸಿಕೊಂಡು ಜನರ ಭೂಮಿ ಕಬಳಿಸುತ್ತಿದೆ. ಸರ್‌.ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯನ್ನೂ ವಕ್ಫ್‌ ಆಸ್ತಿ ಎಂದು ಉಲ್ಲೇಖಿಸಲಾಗಿದೆ. 15 ದಿನಗಳಲ್ಲಿ ಎಲ್ಲ ಆಸ್ತಿಗಳನ್ನು ವಕ್ಫ್‌ ಮಂಡಳಿಗೆ ಬರೆಯಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಆರೋಪ ಮಾಡಿದರು.

ಬಸವರಾಜ ಬೊಮ್ಮಾಯಿ ಅವರು ಕಬಳಿಕೆ ಮಾಡಿದ ಭೂಮಿ ವಾಪಸ್‌ ಪಡೆಯಿರಿ ಎಂದು ಹೇಳಿದ್ದಾರೆಯೇ ಹೊರತು, ರೈತರ ಜಮೀನು ಪಡೆಯಲು ಹೇಳಿಲ್ಲ. ಆದರೆ ಮಂಡಳಿಯ ಸದಸ್ಯರು ವಿಧಾನಸೌಧ ನಮ್ಮದು ಎಂದು ಕೂಡ ಹೇಳುತ್ತಿದ್ದಾರೆ ಎಂದರು. 

ಬಿಜೆಪಿ ಸರ್ಕಾರವಿದ್ದಾಗ ಕೋಲಾರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗಿತ್ತು. ಈಗ ಅದರ ಮೇಲೆ ಮಸೀದಿ ಕಟ್ಟಿಸಿ ಕಾಂಪೌಂಡ್‌ ನಿರ್ಮಿಸಲಾಗಿದೆ. ಇಂತಹ ಅಕ್ರಮದ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ಎಲ್ಲಕ್ಕೂ ಎಸ್‌ಐಟಿ ರಚಿಸುತ್ತಿದೆ. ಸಿದ್ದರಾಮಯ್ಯನವರ ಹಗರಣದ ವಿರುದ್ಧ ಕೆಂಪಣ್ಣ ಆಯೋಗ ರಚಿಸಿದ್ದು, ಅದರ ವರದಿ ಬಂದೇ ಇಲ್ಲ. ಕೋವಿಡ್‌ ಸಮಯದಲ್ಲಿ ಬಿ.ಎಸ್‌.ಯಡಿಯೂರಪ್ಪನವರು ಅಧಿಕಾರಿಗಳು ಹೇಳಿದಂತೆ ಖರೀದಿ ಮಾಡಲು ಸೂಚಿಸಿದ್ದಾರೆ. ಇದರಲ್ಲಿ ಯಾರದ್ದೂ ತಪ್ಪಿಲ್ಲ, ಇದು ರಾಜಕೀಯ ಪ್ರೇರಿತ ಸುಳ್ಳು ಪ್ರಕರಣ. ಖರೀದಿ ಮಾಡುವ ಅಧಿಕಾರ ಮುಖ್ಯಮಂತ್ರಿಗಿಲ್ಲ. ಯಾವ ಕಂಪನಿಯಿಂದ, ಎಲ್ಲಿಂದ ಖರೀದಿ ಮಾಡಬೇಕೆಂದು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈ ಪ್ರಕರಣ ಸರ್ಕಾರಕ್ಕೆ ತಿರುಗುಬಾಣವಾಗಲಿದೆ ಎಂದರು.

ಬಿಜೆಪಿ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ನಾವು ಆಡಳಿತ ಪಕ್ಷದಲ್ಲಿದ್ದಾಗ ಸಮಾಧಾನ ಚಿತ್ತದಿಂದ ಎಲ್ಲವನ್ನೂ ನಿರ್ವಹಿಸುತ್ತಿದ್ದೆವು. ಆದರೆ ಈ ಸರ್ಕಾರ ಎಲ್ಲಕ್ಕೂ ಹಿಂದಿನವರೇ ಕಾರಣ ಎಂದು ಆರೋಪ ಮಾಡುತ್ತಿದೆ ಎಂದರು.

Leave a Reply