ಬೆಂಗಳೂರು: ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಎರಡನೇ ಕಾರ್ಯಕಾರಿ ಸಮಿತಿ ಸಭೆ ಮತ್ತು ಪ್ರಮುಖ ಹಕ್ಕೊತ್ತಾಯಗಳನ್ನು ಮನವಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇಂದಿನ ಸಭೆಯಲ್ಲಿ ತಳೆದ ನಿರ್ಣಯಗಳ ವಿವರಗಳನ್ನು ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ನಾಯಕರು ನೀಡಿದ್ದಾರೆ.
ಕಳೆದ ಕೆಲವು ಕಾಲದಿಂದ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹಿಸುತ್ತಾ ಬಂದಿರುವ ಪ್ರಮುಖ ಬೇಡಿಕೆಗಳು:
1) ಹೆಚ್.ಕಾಂತರಾಜ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿರುವ ಸಮಾಜೋ-ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಕೂಡಲೇ ಸ್ವೀಕರಿಸಿ ಬಹಿರಂಗ ಪಡಿಸಬೇಕು: ಕರ್ನಾಟಕ ಸರ್ಕಾರ ೨೦೧೫ರಲ್ಲಿ ಅಂದಾಜು ೧೭೦ ಕೋಟಿ ರೂಪಾಯಿ ಖರ್ಚು ಮಾಡಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ. ಆಯೋಗವು ವಿಷಯ ತಜ್ಞರ ಸಲಹೆ ಮತ್ತು ಬಿಇಎಲ್ ಸಂಸ್ಥೆಯ ಸಹಯೋಗದೊಂದಿಗೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ಜಾತಿ ಸಮುದಾಯಗಳ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಆಯೋಗ ಸಂಗ್ರಹಿಸಿರುವ ದತ್ತಾಂಶಗಳನ್ನು ಪಡೆದು ಎಲ್ಲಾ ಸಮುದಾಯಗಳ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ. ಆದ್ದರಿಂದ ಸಮೀಕ್ಷೆ ದತ್ತಾಂಶವನ್ನು ಸರ್ಕಾರ ಕೂಡಲೇ ಸ್ವೀಕರಿಸಿ ಸಾರ್ವಜನಿಕರ ಅವಗಾಹನೆಗೆ ತರಲು ವೇದಿಕೆ ಆಗ್ರಹಿಸುತ್ತದೆ. ತತ್ಸಂಬಂಧ ಸಮೀಕ್ಷೆ ವರದಿ ಸ್ವೀಕರಿಸಿ ಬಹಿರಂಗಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ. [W P 13803/2021] ಮಾನ್ಯ ಉಚ್ಛನ್ಯಾಯಾಲಯ ರಿಟ್ ಅರ್ಜಿ ಸ್ವೀಕರಿಸಿ ವಿಚಾರಣೆ ಇಟ್ಟುಕೊಂಡಿದೆ.
2) ಪಂಚಮಸಾಲಿ ಸಮುದಾಯವು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-2ಎಗೆ ಸೇರ್ಪಡೆಗೊಳಿಸಲು ವಿರೋಧ: ಪಂಚಮಸಾಲಿ ಸಮುದಾಯವು ವೀರಶೈವ-ಲಿಂಗಾಯಿತದ ಉಪಜಾತಿ. ಸದ್ಯ ಪಂಚಮಸಾಲಿ ಸಮುದಾಯ ಪ್ರವರ್ಗ-3ಬಿಯಲ್ಲಿ ವೀರಶೈವ-ಲಿಂಗಾಯಿತದ ಉಪಜಾತಿಯಾಗಿ ಪಟ್ಟಿಯಲ್ಲಿ ಸೇರಿದೆ. ಆದರೆ ಪಂಚಮಸಾಲಿ ಸಮುದಾಯದ ಜನವರ್ಗ ಪ್ರವರ್ಗ-೩ಬಿಯಲ್ಲಿರುವ ತಮ್ಮ ಸಮುದಾಯವನ್ನು ಪ್ರವರ್ಗ-2ಎಗೆ ಸೇರಿಸಲು ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗದ ಮುಂದೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಈ ಹಿಂದೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮನವಿಯ ಮೇಲೆ ವಿಚಾರಣೆ ನಡೆಸಿ, ಕೋರಿಕೆಯನ್ನು ಪರಿಗಣಿಸದೇ, ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-೩ಬಿ ಅಡಿಯಲ್ಲೇ ಮುಂದುವರೆಸಲು ಸಲಹೆ ನೀಡಿದೆ ಎಂದು ತಿಳಿದುಬಂದಿದೆ. ಹೀಗಿರುವಲ್ಲಿ ಯಾವುದೇ ಒಂದು ಆಯೋಗವು ಒಮ್ಮೆ ವಿಚಾರಣೆ ನಡೆಸಿ ನಿರ್ಣಯ ಕೈಗೊಂಡಲ್ಲಿ, ಅದೇ ವಿಷಯದ ಮೇಲೆ ಮತ್ತೊಮ್ಮೆ ಅದೇ ಆಯೋಗ ಪುನರ್ ಪರಿಶೀಲನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಪಂಚಮಸಾಲಿ ಸಮುದಾಯವು ವೀರಶೈವ-ಲಿಂಗಾಯಿತದ ಉಪಜಾತಿಯಾಗಿರುವುದರಿಂದ ಅಂತಹ ಉಪಜಾತಿಯನ್ನು ಮುಖ್ಯಜಾತಿಯಿಂದ ಬೇರ್ಪಡಿಸಿ ಬೇರೊಂದು ಪ್ರವರ್ಗಕ್ಕೆ ವರ್ಗಾಯಿಸುವುದು ಸರ್ವೋಚ್ಛ ನ್ಯಾಯಲಯ ಇಂದ್ರಾ ಸಹಾನಿ ಪ್ರಕರಣದಲ್ಲಿ ನೀಡಿರುವ ತೀರ್ಪಿಗೆ ವಿರುದ್ಧವಾಗಿರುತ್ತದೆ. ಆದ್ದರಿಂದ ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ೨ಎ ಗೆ ಸೇರಿಸುವುದನ್ನು ವೇದಿಕೆ ವಿರೋಧಿಸುತ್ತದೆ.
ಲಿಂಗಾಯಿತ ಉಪಜಾತಿಯಾದ ಪಂಚಮಸಾಲಿ ಸಮುದಾಯವು ಪ್ರವರ್ಗ-೨ಎಯಲ್ಲಿರುವ ಜಾತಿ ಉಪಜಾತಿಗಳಿಗಿಂತ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೇಲ್ಮಟ್ಟದಲ್ಲಿದೆಯೇ ಹೊರತು ಅವುಗಳಿಗೆ ಸರಿಸಮಾನವಾಗಿ ಆಗಲೀ ಅಥವಾ ಕೆಳಮಟ್ಟದಲ್ಲಾಗಲೀ ಇರುವುದಿಲ್ಲ. ರಾಜಕೀಯವಾಗಿಯೂ ಪಂಚಮಸಾಲಿ ಸಮುದಾಯ ತಾನು ಹೊಂದಿರುವ ಜನಸಂಖ್ಯೆಗಿಂತ ಸರಾಸರಿ ಲೆಕ್ಕದಲ್ಲಿ ಹೆಚ್ಚು ವಿಧಾನಸಭಾ ಪ್ರಾತಿನಿಧ್ಯ ಪಡೆದುಕೊಂಡಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ೧೪ ಮಂದಿ ವಿಧಾನಸಭಾ ಸದಸ್ಯರಿದ್ದಾರೆ. ಹಾಗೊಂದು ವೇಳೆ ನ್ಯಾಯಸಮ್ಮತವಲ್ಲದ ವಿಧಾನದಿಂದ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-೨ಎಗೆ ವರ್ಗಾಯಿಸಿದಲ್ಲಿ ಅಸಮಬಲರ ನಡುವೆ ಸ್ಪರ್ಧೆ ಉಂಟಾಗಿ ಪ್ರವರ್ಗ-೨ಎಯಲ್ಲಿರುವ ಜಾತಿ-ಉಪಜಾತಿಗಳು ಅದರೊಡನೆ ಸೆಣಸಲಾಗದೆ ಘೋರ ಅನ್ಯಾಯಕ್ಕೆ ಒಳಗಾಗುತ್ತವೆ.
ಹೀಗೆ ಪಂಚಮಸಾಲಿ ಸಮುದಾಯ ಸಾಕಷ್ಟು ಬಲಾಢ್ಯವಾಗಿರುವ ಕಾರಣ ಮತ್ತು ಮೀಸಲಾತಿಯಲ್ಲಿ ಅತಿ ಹಿಂದುಳಿದ ವರ್ಗಗಳು ಸಾಮಾಜಿಕ ನ್ಯಾಯದಿಂದ ವಂಚಿತರಾಗುವ ಕಾರಣ ಈ ಆಗ್ರಹ ಸಲ್ಲಿಸಲಾಗುತ್ತಿದೆ. ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಪ್ರವರ್ಗ 1 ಮತ್ತು ಪ್ರವರ್ಗ-2ಎಯಲ್ಲಿ (ಪ್ರವರ್ಗ1ರಲ್ಲಿ 95 ಹಾಗೂ ಪ್ರವರ್ಗ 2ಎ 102) ಒಟ್ಟು 197 ಜಾತಿ ಮತ್ತು ಉಪಜಾತಿಗಳು ಈವರೆಗೂ ಮುಖ್ಯವಾಹಿನಿಗೆ ಬರದೆ ಸಾಮಾಜಿಕ ನ್ಯಾಯದಿಂದ ವಂಚಿತವಾಗಿವೆ ಅನ್ನುವುದು ಗಮನಾರ್ಹ.
3) ನ್ಯಾ. ಸುಭಾಷ್ ಆದಿ ಸಮಿತಿಯಿಂದ ಪಂಚಮಸಾಲಿ ವಿಷಯ ಹಿಂಪಡೆಯಬೇಕು: ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಪಟ್ಟಿಗೆ ಸೇರಿಸಬೇಕೋ ಬೇಡವೋ ಎಂದು ತೀರ್ಮಾನಿಸಲು, ಸರ್ಕಾರ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಆದಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಸರ್ವೋಚ್ಛ ನ್ಯಾಯಾಲಯ ಇಂದ್ರಾ ಸಹಾನಿ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಅನ್ವಯ ಯಾವುದೇ ಜಾತಿ ಉಪಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಿಕೆ ಅಥವಾ ಪಟ್ಟಿಯಿಂದ ಹೊರಗಿಡುವುದಕ್ಕೆ ಸಲಹೆ ಪಡೆಯುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಲಾಗಿದೆ. ಆದ್ದರಿಂದ ಇಂತಹ ವಿಷಯವನ್ನು ತೀರ್ಮಾನಿಸುವ ವ್ಯಾಪ್ತಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಬರುತ್ತದೆಯೇ ವಿನಾ ಸರ್ಕಾರ ಯಾವುದೇ ತಾತ್ಕಾಲಿಕ ಸಮಿತಿಯನ್ನು ರಚಿಸಿ ವರದಿ ಪಡೆಯುವುದು ಕಾನೂನು ಬಾಹಿರ. ಆದ್ದರಿಂದ ಈ ವಿಷಯವನ್ನು ಸುಭಾಷ್ ಆದಿ ಸಮಿತಿಯಿಂದ ಹಿಂಪಡೆಯಲು ಒತ್ತಾಯಿಸುತ್ತದೆ.
4) ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸುಮಾರು 70 ಜಾತಿ-ಉಪಜಾತಿಗಳನ್ನು ಸೇರ್ಪಡೆಗೆ ಶಿಫಾರಸ್ಸು ಮಾಡುವ ಕುರಿತು: 1992ರ ಮಂಡಲ್ ಆಯೋಗದ ವರದಿಯಂತೆ ಕರ್ನಾಟಕದ 323 ಜಾತಿ-ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆನಂತರದಲ್ಲಿ 283 ಜಾತಿ-ಉಪಜಾತಿಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಯಿತು. ಆದರೂ ಸುಮಾರು 70 ಜಾತಿ ಉಪಜಾತಿಗಳು ರಾಜ್ಯ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದರೂ, ಕೇಂದ್ರದ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಇವುಗಳೆಲ್ಲವೂ ಅತಿ ಹೆಚ್ಚು ಹಿಂದುಳಿದ ವರ್ಗಗಳಿಗೂ ಪರಿಗಣಿಸಲ್ಪಟ್ಟಿವೆ. ಈ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲು, ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇವುಗಳನ್ನು ಸೇರಿಸಬೇಕು ಮತ್ತು ಅರ್ಹ ಮೀಸಲಾತಿಯ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಬೇಕು.
5) ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ: ರಾಜ್ಯದ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕುರಿತಾಗಿ ಘನತೆವೆತ್ತ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯ ಅನೇಕ ಬಾರಿ ಹೇಳಿದೆ. ಆದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಶಾಸನಸಭೆ ಮತ್ತು ಸಂಸತ್ತಿನಲ್ಲಿ ಅತಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂಬಂಧ ಕರ್ನಾಟಕ ಸರ್ಕಾರ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಮಾಡಿರುವ ಪಟ್ಟಿಯಲ್ಲಿರುವ ಜಾತಿ ಮತ್ತು ಉಪಜಾತಿಗಳನ್ನು ಸ್ಥಳೀಯ ಸಂಸ್ಥೆಗಳಿಗೂ ಸಹ ಅಳವಡಿಸಿಕೊಂಡಿರುವುದು ಸರಿಯಲ್ಲ. ಸರ್ಕಾರ ಆಯೋಗವೊಂದನ್ನು ರಚಿಸಿ ರಾಜಕೀಯವಾಗಿ ಹಿಂದುಳಿದ ಜಾತಿಗಳನ್ನು ಗುರುತಿಸಿ, ಅಂತಹವುಗಳನ್ನು ಪಟ್ಟಿಮಾಡಿ ರಾಜಕೀಯ ಮೀಸಲಾತಿ ಕೊಡಬೇಕೆಂದು ನಿವೇದಿಸಿಕೊಳ್ಳುತ್ತೇವೆ. ಸ್ಥಳೀಯ ಸಂಸ್ಥೆಗಳ ಮೀಸಲಾತಿಯಂತೆಯೇ ಶಾಸನಸಭೆ ಮತ್ತು ಸಂಸತ್ತಿನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹಿಸುತ್ತದೆ.
ಈ ಎಲ್ಲಾ ಬೇಡಿಕೆಗಳನ್ನು ಕ್ಷಿಪ್ರಗತಿಯಲ್ಲಿ ಈಡೇರಿಸಬೇಕು. ಮತ್ತು ಸಮಾಜದ ಅಲಕ್ಷಿತ ಅತಿ ಹಿಂದುಳಿದ ಸಮುದಾಯಗಳ ಸಾಮಾಜಿಕ ಸುಧಾರಣೆಗೆ ಸರ್ಕಾರ ಬದ್ಧವಾಗಬೇಕು ಎನ್ನುವುದು ವೇದಿಕೆಯ ಹಕ್ಕೊತ್ತಾಯವಾಗಿದೆ.
ವೇದಿಕೆಯ ಪ್ರಮುಖ ಪದಾಧಿಕಾರಿಗಳಾದ ಪ್ರೊ. ರವಿವರ್ಮ ಕುಮಾರ್, ಹಿರಿಯ ನ್ಯಾಯವಾದಿ ಮತ್ತು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಡಾ. ಸಿ.ಎಸ್ ದ್ವಾರಕಾನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಮುಖ್ಯಮಂತ್ರಿ ಚಂದ್ರು, ಹಿರಿಯ ನಟ ಮತ್ತು ಮಾಜಿ ಶಾಸಕ, ಬಿ.ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರು, ಆರ್.ವಿ ಸುದರ್ಶನ್, ಕಾಂಗ್ರೆಸ್ ಮುಖಂಡರು, ನೆ.ಲ ನರೇಂದ್ರಬಾಬು, ಮಾಜಿ ಶಾಸಕ, ಪಿ.ಎನ್ ಶ್ರೀನಿವಾಸಾಚಾರಿ ನಿವೃತ್ತ ಐಎಎಸ್ ಅಧಿಕಾರಿ, ಎಸ್. ಪುಟ್ಟಸ್ವಾಮಿ ನಿವೃತ್ತ ಐಎಎಸ್ ಅಧಿಕಾರಿ ಮುಂತಾದವರು ವೇದಿಕೆಯ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಆಗ್ರಹಿಸಿದ್ದಾರೆ.
- – ಎಂ.ಸಿ ವೇಣುಗೋಪಾಲ, ಅಧ್ಯಕ್ಷರು
- – ಎಂ. ನಾಗರಾಜು, ಪ್ರಧಾನ ಕಾರ್ಯದರ್ಶಿ
- – ಎಲ್.ಎ ಮಂಜುನಾಥ್, ಖಜಾಂಚಿ




