ರೈಲ್ವೇ ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಚನೆ
ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ದಶಕದ ಅವಧಿಯಲ್ಲಿ ರಾಜ್ಯ ರೈಲ್ವೇ ಕ್ಷೇತ್ರದಲ್ಲಿ ಅನೇಕ ಮಹತ್ವ ನಿರ್ಣಯಗಳನ್ನು ಕೈಗೊಂಡು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿರುವುದು ಎಲ್ಲರಲ್ಲೂ ಸಂತಸ ಮೂಡಿಸಿದೆ ಎಂದು ರೈಲ್ವೇ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಶಿಕಾರಿಪುರದಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ರೈಲ್ವೇ ಅಭಿವೃದ್ಧಿ ಕಾಮಗಾರಿಗಳು, ಶಿವಮೊಗ್ಗ ಸಮೀಪದ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾನಗರಗಳಿಂದ ಗ್ರಾಮೀಣ ಪ್ರದೇಶಗಳವರೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆಯು ಸೈನಿಕರಂತೆ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಸಹ ನುಡಿದಂತೆ ಮುನ್ನಡೆಯುತ್ತಿದೆ ಎಂದ ಅವರು, ರೈಲ್ವೇ ಕ್ಷೇತ್ರ ಅಸಾಧಾರಣ ಪ್ರಗತಿ ಹಾಗೂ ಕ್ರಾಂತಿಕಾರಿ ಬದಲಾವಣೆಗೆ ಹೊಸಭಾಷ್ಯ ಬರೆದಿದೆ ಎಂದರು.
ರೈಲ್ವೇ ಕ್ಷೇತ್ರದ ಪ್ರಗತಿ ಜನಸಾಮಾನ್ಯರ ಬೇಡಿಕೆ ಎಂದು ಪರಿಗಣಿಸದೆ ಅವಶ್ಯಕತೆ ಎಂದೇ ಭಾವಿಸಲಾಗಿದೆ. ರಾಣೆಬೆನ್ನೂರು-ಶಿಕಾರಿಪುರ ಹೊಸ ರೈಲ್ವೇ ಮಾರ್ಗದ ಪ್ರಗತಿಯು ಆಶಾದಾಯಕವಾಗಿಲ್ಲ. ಮುಂದಿನ ಎಂಟು ದಿನಗಳೊಳಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಸಂಬಂಧಿತ ಇಲಾಖಾಧಿಕಾರಿಗಳು ಸಮಗ್ರ ವರದಿ ನೀಡುವಂತೆ ಸೂಚಿಸಿದರು.
ಈ ಭಾಗದಲ್ಲಿ ಭೂಸ್ವಾದೀನ ಪ್ರಕ್ರಿಯೆ ನಡೆಸುವ ಅಧಿಕಾರಿಗಳು ರೈತರಿಗೆ ಪರಿಹಾರಧನ ಒದಗಿಸುವ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ವ್ಯವಹರಿಸಿ, ಒಂದು ತಿಂಗಳೊಳಗಾಗಿ ಪರಿಹಾರಧನ ವಿತರಿಸುವಂತೆ ಸೂಚಿಸಿದರು.
ಮೋದಿಯವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಅನೇಕ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಶಿಕಾರಿಪುರ-ರಾಣೆಬೆನ್ನೂರು ಮಾರ್ಗದ ಭೂಸ್ವಾದೀನ ಪ್ರಕ್ರಿಯೆ ಸಮಾಧಾನಕರವಾಗಿದ್ದರೂ ರಾಣೆಬೆನ್ನೂರು-ಶಿಕಾರಿಪುರ ಮಾರ್ಗದಲ್ಲಿ ಭೂಸ್ವಾದೀನ ಪ್ರಕ್ರಿಯೆ ನಿರೀಕ್ಷೆಯಂತೆ ಪೂರ್ಣಗೊಂಡಿಲ್ಲ. ಇನ್ನೂ 642ಎಕರೆ ಭೂಪ್ರದೇಶ ಮಾಲೀಕರಿಂದ ರೈಲ್ವೇ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ತುರ್ತಾಗಿ ಆಗಬೇಕಾಗಿದೆ. ಡಿಸೆಂಬರ್ ಮಾಸಾಂತ್ಯದೊಳಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಂಯುಕ್ತವಾಗಿ ಈ ಕಾರ್ಯದಲ್ಲಿ ಸಮನ್ವಯತೆ ಸಾಧಿಸಿ, ಉದ್ದೇಶಿತ ಯೋಜನೆಯು ಕಾಲಮಿತಿಯಲ್ಲಿ ಪೂರ್ಣಗೊಳಿಸುವಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಉಷಾ ನರ್ಸಿಂಗ್ ಬಳಿಯ ವರ್ತುಲ ನವೀಕರಣಕ್ಕೆ ರೈಲ್ವೇ ಇಲಾಖೆಯಿಂದ ಮಹಾನಗರಪಾಲಿಕೆಗೆ ಈಗಾಗಲೇ 2 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಅಗತ್ಯವಿರುವ ಇನ್ನೂ 2.50 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾಗುವ ನಿರೀಕ್ಷೆಯಿಂದ ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಹೇಳಿದರು.
ರೈಲ್ವೇ ಇಲಾಖಾಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ರೈಲ್ವೇ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸ್ಥಳೀಯ ಇಲಾಖಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಬೇಕು. ಅಮೃತ್ ಭಾರತ್ ಯೋಜನೆಯಡಿ ಶಿವಮೊಗ್ಗ, ಜಂಬಗಾರು ಹಾಗೂ ತಾಳಗುಪ್ಪ ರೈಲ್ವೇ ನಿಲ್ದಾಣಗಳ ಉನ್ನತೀಕರಣ ಕಾಮಕಾರಿಗಳಿಗಾಗಿ ಅಗತ್ಯ ಅನುದಾನವನ್ನು ಮಂಜೂರು ಮಾಡಿದೆ ಎಂದರು.
ರೈಲ್ವೇ ಇಲಾಖೆಯ ಅಧಿಕಾರಿಗಳು ರಾಜ್ಯದ ಪ್ರತಿಷ್ಟಿತ ಜಿಲ್ಲೆಯಾಗಿರುವ ಶಿವಮೊಗ್ಗದ ವಿವಿಧ ರೈಲ್ವೇ ನಿಲ್ದಾಣಗಳನ್ನು ದೇಶದ ಮಾದರಿ ರೈಲ್ವೇನಿಲ್ದಾಣಗಳನ್ನಾಗಿ ನಿರ್ಮಿಸಬೇಕು. ಅದಕ್ಕಾಗಿ ಸ್ಥಳೀಯ ಅಧಿಕಾರಿ-ಜನಪ್ರತಿನಿಧಿಗಳ ಸಹಕಾರ ಪಡೆದು, ನೀಲನಕ್ಷೆ ತಯಾರಿಸುವಂತೆ ಅವರು ಸಲಹೆ ನೀಡಿದರು.
ಯಶವಂತಪುರ-ಶಿವಮೊಗ್ಗ ನಡುವೆ ವಾರಕ್ಕೆ ಮೂರು ಬಾರಿ ಸಂಚರಿಸುತ್ತಿರುವ ರೈಲನ್ನು ವಾರದ ಏಳು ದಿನಗಳ ಚಲಿಸುವಂತೆ ಹಾಗೂ ವಂದೇಭಾರತ್ ರೈಲು ಮಾರ್ಗವನ್ನು ಬೆಂಗಳೂರಿನಿಂದ ತಾಳಗುಪ್ಪವರೆಗೆ ವಿಸ್ತರಿಸಲು ವಿಶೇಷ ಗಮನಹರಿಸಲಾಗುವುದು. ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ಈ ವಿಷಯದ ಬಗ್ಗೆ ಗಮನಹರಿಸಲಾಗುವುದು ಎಂದರು.
ಹಲವು ದಶಕಗಳ ಅನೇಕ ಸಮಸ್ಯೆಗಳನ್ನು ಇತ್ಯರ್ಥಪಡಿಸುವಲ್ಲಿ ರೈಲ್ವೇ ಇಲಾಖೆ ವಿಶೇಷ ಗಮನಹರಿಸಿದೆ. ಇದರೊಂದಿಗೆ ಸಿರ್ಸಿ-ತಾಳಗುಪ್ಪ-ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ 158ಕಿ.ಮೀ ದೂರದ ರೈಲ್ವೇ ಕಾಮಗಾರಿ ಪೂರ್ವ ಸರ್ವೇ ನಡೆಸಲು ಆದೇಶ ಹೊರಡಿಸಲಾಗಿದೆ. ಅಂಕೋಲ-ತಾಳಗುಪ್ಪ ಮಾರ್ಗದ ಬಗ್ಗೆಯೂ ಗಮನಹರಿಸಲಾಗುವುದು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳ ಸಕಾಲಿಕ ಸಹಕಾರ ಹಾಗೂ ಮಾರ್ಗದರ್ಶನದಿಂದಾಗಿ ಶಿವಮೊಗ್ಗ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಅನೇಕ ರೈಲ್ವೇ ಯೋಜನೆಗಳು ಯಶಸ್ಸು ಕಂಡಿವೆ. ಅಲ್ಲದೇ ದೇಶದಾದ್ಯಂತ ವರ್ಷಕ್ಕೆ ಸರಾಸರಿ ನೂರು ಕೋಟಿಗೂ ಹೆಚ್ಚಿನ ಜನ ರೈಲ್ವೇಪ್ರಯಾಣದ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಮಲೆನಾಡಿನಿಂದ ಬಯಲುಸೀಮೆಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ನಿರ್ಮಾಣದಲ್ಲಿ ಶಿಕಾರಿಪುರ-ಶಿವಮೊಗ್ಗ ಮಾರ್ಗದ ಭೂಸ್ವಾಧೀನ ಕಾರ್ಯ ತಕ್ಕಮಟ್ಟಿನ ಯಶಸ್ಸು ಕಂಡಿದೆ. ರಾಣೆಬೆನ್ನೂರು-ಶಿಕಾರಿಪುರ ನಡುವಿನ ಭೂಸ್ವಾಧೀನ ಕಾರ್ಯ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ ಎಂದರು.
ಸಂಬಂಧಿಸಿದ ಇಲಾಖಾಧಿಕಾರಿಗಳು ಈ ಬಗ್ಗೆ ವಿಶೇಷ ಗಮನಹರಿಸಿ, ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಹಾರನಹಳ್ಳಿ ರೈಲ್ವೇ ನಿಲ್ದಾಣದ ಪ್ಲಾಟಫಾರಂನ್ನು ಅಭಿವೃದ್ಧಿಪಡಿಸಲು ಇಲಾಖೆಯು ಈಗಾಗಲೇ 2 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಹೇಳಿದರು.
ಸಭೆಯಲ್ಲಿ ಸೌತ್ ವೆಸ್ಟರ್ನ್ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಶ್ರೀವತ್ಸ, ಡಿಆರ್‌ಎಂ. ಆಶಾ, ಅಗರ್‌ವಾಲ್, ಪ್ರಕಾಶ್‌ಶಾಸ್ತ್ರಿ, ಕ್ರೀಸ್ಟೋಫರ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಭಾರತಿಶೆಟ್ಟಿ, ಬಲ್ಕಿಶ್‌ಬಾನು, ಅರುಣ್‌ಕುಮಾರ್, ಧನಂಜಯಸರ್ಜಿ, ಬೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಜಿಲ್ಲಾಧಿಕಾರಿ ಗುರುದತ್‌ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ ರೈಲ್ವೇ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.




