ಕೊರೊನಾ ನಿಯಂತ್ರಣದ ಹೆಸರಲ್ಲಿ ಭ‍್ರಷ್ಟಾಚಾರ: ಸಿದ್ದರಾಮಯ್ಯ

5 years ago

ಬೆಂಗಳೂರು: ಕೊರೊನಾ ನಿಯಂತ್ರಣದ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ನಮ್ಮ ಆರೋಪಕ್ಕೆ ಸಾಕ್ಷಿ ಹೇಳುವಂತಿದೆ ಮತ್ತೆ ಅವತರಿಸಿ ಕೇಕೆ ಹಾಕುತ್ತಿರುವ ಕೊರೊನಾ ವೈರಸ್ ಎಂದು ಮಾಜಿ  ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಖರ್ಚು ಮಾಡಿದ್ದರೆ ಮತ್ತೆ ಯಾಕೆ ಸೋಂಕು ಉಲ್ಬಣಗೊಳ್ಳುತ್ತಿದೆ? ಕೊರೊನಾ ನಿಯಂತ್ರಣಕ್ಕಾಗಿ ಸಂಪನ್ಮೂಲ ವ್ಯಯಮಾಡಬೇಕಾಗಿದೆ ಎಂಬ ಕುಂಟುನೆಪ ಹೇಳಿ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನಗಳನ್ನು ಕಡಿತಗೊಳಿಸಿದ ಮುಖ್ಯಮಂತ್ರಿ ಅವರು ಈಗ ಏನು ಹೇಳುತ್ತಾರೆ? ಅಷ್ಟೊಂದು ಆದ್ಯತೆ ನೀಡಿದ್ದರೆ  ಕೊರೊನಾ ನಿಯಂತ್ರಣಕ್ಕೆ ಬರಬೇಕಿತ್ತಲ್ಲಾ? ಯಾಕೆ ನಿಯಂತ್ರಣ ತಪ್ಪಿದೆ? ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ನಿರ್ವಹಣೆಗಾಗಿ ರೂ. 5,372 ಕೋಟಿ ಖರ್ಚು ಮಾಡಲಾಗಿದೆ ಎಂದು ಮೊನ್ನೆ ಮಂಡಿಸಿದ್ದ ಬಜೆಟ್ ನಲ್ಲಿ ಹೇಳಿರುವ ಮುಖ್ಯಮಂತ್ರಿಗಳು, ಮಾಡಿರುವ ಖರ್ಚಿನ ವಿವರ ಮಾತ್ರ  ತಿಳಿಸಿಲ್ಲ. ಈಗಲಾದರೂ ಆ ಹಣ ಯಾವ ಉದ್ದೇಶಗಳಿಗೆ ಖರ್ಚು ಮಾಡಿದ್ದೀರಿ ಎಂಬ ಲೆಕ್ಕದ ವಿವರವನ್ನು ಜನರ ಮುಂದಿಡಿ ಎಂದು ಸವಾಲೆಸೆದಿದ್ದಾರೆ.

ಕೊರೊನಾ ವೈರಸ್‌ಗೆ ಲಸಿಕೆ ಬಂದಿದೆ, ನಿಮ್ಮ ಸರ್ಕಾರಕ್ಕೆ ತಗಲಿರುವ ಭ್ರಷ್ಟಾಚಾರದ ವೈರಸ್ ಗೆ ಎಲ್ಲಿಂದ ಲಸಿಕೆ ತರುವುದು? ಕೊರೊನಾ ಮೊದಲ ಅಲೆಯ ನಿಯಂತ್ರಣದಲ್ಲಿನ ಲೋಪ-ದೋಷವನ್ನು ಎರಡನೇ ಅಲೆಯಲ್ಲಿಯಾದರೂ ತಿದ್ದಿಕೊಂಡು, ಕೊರೊನಾವನ್ನು ಭ್ರಷ್ಟಾಚಾರಕ್ಕೆ ದುರ್ಬಳಕೆ ಮಾಡಿಕೊಳ್ಳದೆ ಕೆಲಸ ಮಾಡಿ ಜನರನ್ನು ಉಳಿಸಿ ಎಂದು ಒತ್ತಾಯಿಸಿದ್ದಾರೆ.

Leave a Reply