ಬೆಂಗಳೂರು: ಬಿಟ್ಕಾಯಿನ್ ಹಗರಣದ ಬಗ್ಗೆ ಸಚಿನ್ ಮಾಮನಿ ಎನ್ನುವವರು ಪ್ರಧಾನಮಂತ್ರಿಗಳಿಗೆ ಬರೆದಿದ್ದಾರೆ ಎನ್ನಲಾದ ನಾಲ್ಕು ಪುಟಗಳ ಪತ್ರ ರಾಜ್ಯದಲ್ಲಿ ಹರಿದಾಡುತ್ತಿದೆ. ಅದರ ಆಧಾರದ ಮೇಲೆಯೇ ಹಲವು ರಾಜಕಾರಣಿಗಳು ಸರ್ಕಾರದ ಮತ್ತು ವ್ಯಕ್ತಿಗಳ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವ್ಯಂಗ್ಯ, ವಿಡಂಬನೆ, ಆರೋಪ ಮಾಡುತ್ತಿದ್ದಾರೆ. ಆದರೆ ಆ ಪತ್ರ ನೈಜವೋ ಅಲ್ಲವೋ ಎನ್ನುವುದು ಮತ್ತು ಅದು ಪ್ರಧಾನಮಂತ್ರಿಗಳ ಕಚೇರಿಗೆ ತಲುಪಿದೆಯೋ ಇಲ್ಲವೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಹಾಗೆಯೇ ರಾಜ್ಯ ಸರ್ಕಾರಕ್ಕೂ ಅದು ತಲುಪಿದೆಯೇ ಎನ್ನುವುದೂ ಗೊತ್ತಿಲ್ಲ ಎಂದು ಕೆ.ಆರ್.ಎಸ್. ಪಕ್ಷ ಹೇಳಿದೆ.


ಈ ವಿಚಾರವಾಗಿ ಇಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್. ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ, ಈ ಪತ್ರದ ವಿಚಾರ ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ ಎಂದು ಲಿಖಿತವಾಗಿ ಕೇಳಿದರು. ಅವರಿಗೆ ನೀಡಿರುವ ಪತ್ರದ ಜೊತೆಗೆ ನಮಗೆ ಲಭ್ಯವಾಗಿರುವ ಆ ಅನಾಮಿಕ ಪತ್ರದ ಪ್ರತಿಯನ್ನೂ ಲಗತ್ತಿಸಿ ಪತ್ರವನ್ನು ನೀಡಿದರು.
ಇತ್ತೀಚಿನ ಕೆಲವು ಘಟನೆಗಳನ್ನು ಗಮನಿಸಿದರೆ ಇಡೀ ಹಗರಣವನ್ನು ಅದು ನಡೆದಿರುವುದು ನಿಜವೇ ಆಗಿದ್ದರೆ ಸಂಪೂರ್ಣವಾಗಿ ಮುಚ್ಚಿಹಾಕುವ ಎಲ್ಲಾ ಪ್ರಯತ್ನಗಳು ಸರ್ಕಾರದ ವತಿಯಿಂದ ನಡೆಯುತ್ತಿವೆ ಎನ್ನುವುದು ಎದ್ದು ಕಾಣಿಸುತ್ತಿದೆ. ಇತ್ತೀಚಿಗೆ ACB ನಡೆಸಿದ High Profile ದಾಳಿಯೂ ಸಹ ಜನಸಾಮಾನ್ಯರ ದೃಷ್ಟಿಯನ್ನು ಬಿಟ್ಕಾಯಿನ್ ಹಗರಣದಿಂದ ಮರೆಮಾಚಲು ಮಾಡಿರುವ ವ್ಯವಸ್ಥಿತ ಕೃತ್ಯ ಎಂದು ಕೆಲವು ಉನ್ನತ ಅಧಿಕಾರಿಗಳೇ ಹೇಳುತ್ತಿದ್ದಾರೆ ಎಂದು ಪಕ್ಷ ಹೇಳಿದೆ.
ಈ ವಿಚಾರವಾಗಿ KRS ಪಕ್ಷ ಪ್ರಧಾನ ಮಂತ್ರಿಗಳಿಗೂ ಪತ್ರವನ್ನು ಬರೆದಿದೆ ಮತ್ತು ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಈ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನಕ್ಕೆ ತಡೆ ಒಡ್ಡಲಿದೆ ಎಂದು ಹೇಳಿದೆ.




